ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನ; 30 ಮಂದಿ ಜೊತೆ ಬಿಜೆಪಿಗೆ ರಾಜೀನಾಮೆ
ವಾರ್ಡ್ ನಂ.35ರಲ್ಲಿ ಬಿಜೆಪಿ ಟಿಕೆಟ್ ಸಿಗದೇ ಇರುವುದಕ್ಕೆ ಅಸಮಾಧಾನಗೊಂಡು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಅವರಿಗೆ ಸಲ್ಲಿಸುತ್ತಿದ್ದೇನೆ ಎಂದು ಬಿಜೆಪಿ ಮುಖಂಡ ರಾಜು ಬಿರಾದಾರ ಅವರು ತಿಳಿಸಿದ್ದಾರೆ.
ವಿಜಯಪುರ(ಅ.22): ವಾರ್ಡ್ ನಂ.35ರಲ್ಲಿ ಬಿಜೆಪಿ ಟಿಕೆಟ್ ಸಿಗದೇ ಇರುವುದಕ್ಕೆ ಅಸಮಾಧಾನಗೊಂಡು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಅವರಿಗೆ ಸಲ್ಲಿಸುತ್ತಿದ್ದೇನೆ ಎಂದು ಬಿಜೆಪಿ (BJP) ಮುಖಂಡ ರಾಜು ಬಿರಾದಾರ ಅವರು ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊನೆ ಗಳಿಗೆಯಲ್ಲಿ ನನಗೆ ಬಿಜೆಪಿ ಟಿಕೆಟ್ (Ticket) ತಪ್ಪಿದೆ. ಇದರಿಂದಾಗಿ ನಾನು ಅಸಮಾಧಾನಗೊಂಡು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಜೊತೆಗೆ ಇತರೆ 30 ಮಂದಿ ರಾಜೀನಾಮೆ ನೀಡಲಿದ್ದಾರೆ ಎಂದರು.
ವಿಜಯಪುರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಹಿಂದುಳಿದ ಮೋರ್ಚಾ ಜಿಲ್ಲಾ ಅಧ್ಯಕ್ಷನಾಗಿ, ವಿಜಯಪುರ ನಗರಸಭೆ ನಾಮನಿರ್ದೇಶಿತ ಸದಸ್ಯ, ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷ, ಜಿಲ್ಲಾ ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು. ವಾರ್ಡ್ ನಂ.35ರ ವಿವಿಧ ಬಡಾವಣೆಗಳ ಜನರು ತನಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ತಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಕಣದಲ್ಲಿ ಇದ್ದೇನೆ. ಮತದಾರರು ತನಗೆ ಬೆಂಬಲಿಸಬೇಕು ಎಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ವಿಶ್ವನಾಥ ಭೋಸಲೆ, ರಾಜು ಹುನ್ನೂರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಮತ್ತೆ ಟಿಕೆಟ್ ಸಿಗುವ ವಿಶ್ವಾಸ ಇದೆ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಳವಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಬಿಜೆಪಿ ಮುಖಂಡ ಮುನಿರಾಜು ಹೇಳಿದರು.
ತಾಲೂಕಿನ ಹುಸ್ಕೂರು ಮತ್ತು ಕುಲುಮೇದೊಡ್ಡಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 2013ರ ವಿಧಾನಸಭಾ ಚುನಾವಣೆಯಲ್ಲಿ (Election) ಕೆಜೆಪಿಯಿಂದ ಸ್ಪರ್ಧೆ ಮಾಡಲಾಗಿತ್ತು. ಅಂದು ನಿರೀಕ್ಷೆಗೂ ಮೀರಿ ಕ್ಷೇತ್ರದ ಜನರು ಬೆಂಬಲ ಕೊಟ್ಟಿದ್ದರು ಎಂದರು.
ಮಳವಳ್ಳಿ (Malavalli) ಕ್ಷೇತ್ರದ ಜನರ ಸೇವೆ ಮಾಡುವ ಹಂಬಲವಿದೆ. ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವುದರಿಂದ ಜನಾಭಿಪ್ರಾಯವನ್ನು ಸಂಗ್ರಹಿಸಲು ತಾಲೂಕಿನಾದ್ಯಂತ ಪ್ರವಾಸ ಕೈಗೊಳ್ಳಲಾಗುತ್ತಿದೆ. ಅಭಿವೃದ್ಧಿಯಲ್ಲಿ ಕುಂಠಿತ ಕಂಡಿರುವ ಮಳವಳ್ಳಿ ಕ್ಷೇತ್ರವನ್ನು ಹೆಚ್ಚಿನ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮನ್ನು ನಿರೀಕ್ಷಿಸುತ್ತಿದ್ದಾರೆ. ಪ್ರತಿ ಗ್ರಾಮಕ್ಕೂ ಹೋದ ವೇಳೆ ಅಭೂತ ಪೂರ್ವ ಬೆಂಬಲ ನೀಡುತ್ತಿದ್ದಾರೆ. ಗೆಲ್ಲುವ ವಿಶ್ವಾಸವಿದೆ ಎಂದರು.
ಬಿಜೆಪಿ ಪಕ್ಷದ ವರಿಷ್ಠರು ತಮಗೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ಈಗಾಗಲೇ ಪಕ್ಷ ಸಂಘಟನೆಗೆ ಮುಂದಾಗಿದ್ದೇನೆ. ಪಕ್ಷಾತೀತವಾಗಿ ತನ್ನನ್ನು ಬೆಂಬಲಿಸುವುದಾಗಿ ಮುಖಂಡರು ಭರವಸೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರನ್ನು ವಿಶ್ವಾಸ ತೆಗೆದುಕೊಂಡು ಚುನಾವಣೆಯನ್ನು ಎದುರಿಸುವುದಾಗಿ ಹೇಳಿದರು.
ನೂರಾರು ಕಾರ್ಯಕರ್ತರೊಂದಿಗೆ ತಾಲೂಕಿನ ಹುಸ್ಕೂರಿನಿಂದ ಕುಲುಮೆದೊಡ್ಡಿಯವರೆಗೆ ಎತ್ತಿನಗಾಡಿ ಮೆರವಣಿಗೆ ಮೂಲಕ ಮುನಿರಾಜು ಅವರನ್ನು ಕರೆತರಲಾಯಿತು. ಮುನಿರಾಜು ಅವರೇ ಗಾಡಿ ಹೊಡೆಯುವುದರ ಮೂಲಕ ಗಮನ ಸೆಳೆದರು. ರೈತ ಸಂಘ ಮತ್ತು ಹುಸ್ಕೂರು ಕುಲುಮೆದೊಡ್ಡಿ ಗ್ರಾಮಸ್ಥರು ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹೊಟ್ಟೆಮಾರಣ್ಣ, ಯಜಮಾನ ಅಲೆಮನೆ ತಮ್ಮಯ್ಯ, ಚಿಕ್ಕಮಾದಯ್ಯ ಪಟೇಲರು, ಕರಿಯಪ್ಪ ಸೇರಿದಂತೆ ಇತರರು ಇದ್ದರು
ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಟಿಕೆಟ್
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ಹೊಸಬರಿಗೆ ಮಣೆ ಹಾಕದೇ ನಿಷ್ಠ, ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.
ಪಟ್ಟಣದಲ್ಲಿ ಕಿಯೋನಿಕ್ಸ್ ನಿರ್ದೇಶಕ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ನಡೆದ ಮೂಲ ಬಿಜೆಪಿ (BJP) ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಪ್ರಾಮಾಣಿಕ, ನಿಷ್ಠೆಯುಳ್ಳವರು ಹಾಗೂ ನಿರಂತರವಾಗಿ ಕಾರ್ಯಕರ್ತರ ಸಮಸ್ಯೆ ಆಲಿಸುವ ಮಂದಿಗೆ ಟಿಕೆಟ್ (Ticket) ನೀಡಬೇಕು. ವಿಧಾನಸಭೆ ಚುನಾವಣೆ ಹಾಗೂ ಪಕ್ಷ ಸಂಘಟನೆ ಕುರಿತಂತೆ ವಿಸ್ತೃತ ಚರ್ಚೆ ನಡೆಯಿತು.
ಕಳೆದ 31 ವರ್ಷಗಳ ಹಿಂದಿನ ಆಯೋಧ್ಯೆ ರಾಮಮಂದಿರದ ಹೋರಾಟದ ಕಾಲದಿಂದಲೂ ಪಕ್ಷಕ್ಕೆ ನಿಷ್ಠೆಯಿಂದ ದುಡಿದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಪಕ್ಷ ಸಂಘಟನೆ ಹಾಗೂ ಮುಂದಿನ ಚುನಾವಣೆಗೆ ಪಕ್ಷವನ್ನು ಸದೃಢವಾಗಿ ಕಟ್ಟಲು ಮುಂದಾಗಬೇಕಿದೆ ಎಂಬ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು.