ಅ. 25ರೊಳಗೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಪೂರ್ಣಕ್ಕೆ ಹೈಕೋರ್ಟ್‌ ಸೂಚನೆ ಹಿನ್ನೆಲ, ಚುರುಕಾದ ಬಿಬಿಎಂಪಿ 

ಬೆಂಗಳೂರು(ಅ.11): ರಾಜಧಾನಿಯಲ್ಲಿ ಕಳೆದ ಕೆಲವು ದಿನಗಳಿಂದ ಸುಮ್ಮನಾಗಿದ್ದ ಬುಲ್ಡೋಜರ್‌ಗಳ ಘರ್ಜನೆ ಮತ್ತೆ ಸದ್ದು ಮಾಡಿಕೊಂಡಿದ್ದು, ಸೋಮವಾರ ಮಹದೇವಪುರ ವಲಯದಲ್ಲಿ 8 ಶೆಡ್‌ಗಳನ್ನು ಹಾಗೂ ನಾಲ್ಕು ಕಾಂಪೌಂಡ್‌ಗಳನ್ನು ತೆರವುಗೊಳಿಸಿವೆ. ಅ.25ರೊಳಗಾಗಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪೂರ್ಣಗೊಳಿಸುವಂತೆ ಹೈಕೋರ್ಚ್‌ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಮತ್ತೆ ನಗರದಲ್ಲಿ ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಬಿಬಿಎಂಪಿಯ ವ್ಯಾಪ್ತಿಯ ಎಂಟು ವಲಯದಲ್ಲಿ ಒಟ್ಟು 600 ರಾಜಕಾಲುವೆ ಒತ್ತುವರಿ ತೆರವುಗೊಳಿಸುವುದು ಬಾಕಿ ಇದೆ. ಸೋಮವಾರ ಮಹದೇವಪುರ ವಲಯದಲ್ಲಿ ಮಾತ್ರ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ವೈಟ್‌ಫೀಲ್ಡ್‌ ಹತ್ತಿರದ ಶೀಲವಂತನ ಕೆರೆಯ ಬಳಿ ರಾಜಕಾಲುವೆ ಮೇಲೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ 10 ಮೀ. ಉದ್ದ 4 ಮೀಟರ್‌ ಅಗಲದಲ್ಲಿ ಮುಚ್ಚಲಾಗಿದ್ದ ಕಾಂಕ್ರೀಟ್‌ ಸ್ಲಾ್ಯಬ್‌ ಮತ್ತು 4 ಮೀಟರ್‌ ಉದ್ದದ ಕಾಂಪೌಂಡ್‌ ತೆರವುಗೊಳಿಸಲಾಗಿದೆ. ಜತೆಗೆ, ಒತ್ತುವರಿ ಜಾಗದಲ್ಲಿ ನಿರ್ಮಿಸಲಾಗಿದ್ದ 4 ಶೆಡ್‌ಗಳನ್ನು ನೆಲಸಮ ಮಾಡಲಾಗಿದೆ.

ರಾಜಕಾಲುವೆ ಒತ್ತುವರಿ ತೆರವಿಗೆ ಡೆಡ್‌ಲೈನ್‌ ನೀಡಿದ ಹೈಕೋರ್ಟ್‌

ಕಸವನಹಳ್ಳಿ ವಲ್ಲಿಯಮ್ಮ ಲೇಔಟ್‌ನಲ್ಲಿ 3 ಶೆಡ್‌ ತೆರವುಗೊಳಿಸಲಾಗಿದೆ. ಕೆ.ಆರ್‌.ಪುರ ವಿಭಾಗದ ಬಸವನಪುರ ವಾರ್ಡ್‌ನ ಸಣ್ಣತಮ್ಮನಹಳ್ಳಿ ಮತ್ತು ದೇವಸಂದ್ರ ಗ್ರಾಮಗಳ ವ್ಯಾಪ್ತಿಯಲ್ಲಿ ಖಾಸಗಿ ಅಪಾರ್ಚ್‌ಮೆಂಟ್‌ ಹಾಗೂ ಎರಡು ಮನೆಗಳ ಮಾಲಿಕರು ರಾಜಕಾಲುವೆ ಮೇಲೆ ನಿರ್ಮಿಸಿದ್ದ 110 ಮೀ. ಉದ್ದದ ಕಾಂಪೌಂಡ್‌ ಹಾಗೂ 1 ಶೆಡ್‌ ತೆರವುಗೊಳಿಸಲಾಗಿದೆ.

ಗೋಡೆ ತಬ್ಬಿಕೊಂಡು ವೃದ್ಧೆಯ ಗೋಳಾಟ

ಶೀಲವಂತನ ಕೆರೆಯ ಬಳಿ ರಾಜಕಾಲುವೆ ಮೇಲೆ ಅನಧಿಕೃತವಾಗಿ ನಿರ್ಮಿಸಿದ ಶೆಡ್‌ಗಳ ತೆರವಿಗೆ ಬಿಬಿಎಂಪಿಗೆ ಅಧಿಕಾರಿಗಳು ಮುಂದಾದ ವೇಳೆ ವೃದ್ಧೆಯೊಬ್ಬರು ಮನೆಯ ಗೋಡೆಯನ್ನು ತಬ್ಬಿಕೊಂಡು ಮನೆ ಒಡೆಯದಂತೆ ಕಣ್ಣೀರಿಟ್ಟರು. ಜೆಸಿಬಿಯನ್ನು ಒಡೆಯಲು ತಂದಾಗ ಮೊದಲು ತಮ್ಮನ್ನು ಜೆಸಿಬಿಯಿಂದ ಒಡೆದು ಮನೆ ಒಡೆಯುವಂತೆ ಪಟ್ಟು ಹಿಡಿದು ತೆರವು ಕಾರ್ಯಕ್ಕೆ ಅಡ್ಡಿಪಡಿಸಿದರು.

ಪೊಲೀಸರು ಬಂದು ಅಜ್ಜಿಯನ್ನು ಹಿಂದಕ್ಕೆ ಕರೆದುಕೊಂಡು ಬಂದಾಗ, ಈ ಜಾಗವನ್ನು ಮಾರಿದ ವ್ಯಕ್ತಿಯನ್ನು ಕರೆಸಿ ತಮ್ಮ ಹಣವನ್ನಾದರೂ ವಾಪಸ್‌ ಕೊಡಿಸುವಂತೆ ಪೊಲೀಸರಿಗೆ ಮನವಿ ಮಾಡಿದರು. ಅಜ್ಜಿಯ ಗೋಳಾಟ ಕೇಳದ ಅಧಿಕಾರಿಗಳು ಮತ್ತು ಪೊಲೀಸರು ಶೆಡ್‌ ನೆಲಸಮ ಮಾಡಿದರು. ಇದಾದ ನಂತರ ಅಜ್ಜಿಯ ಸಂಬಂಧಿಕರೊಬ್ಬರು ಬಂದು ಪಾಲಿಕೆ ಅಧಿಕಾರಿಗಳ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು, ಪೊಲೀಸರಿಂದ ಅವರನ್ನು ತಡೆದ ಘಟನೆ ನಡೆಯಿತು.

ಸ್ಥಳೀಯರ ಆಕ್ರೋಶ

ಸೋಮವಾರ ಬೆಳಗ್ಗೆ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಒತ್ತುವರಿ ತೆರವುಗೊಳಿಸಿ ಕಟ್ಟಡ ತ್ಯಾಜ್ಯವನ್ನು ಸ್ಥಳದಲ್ಲಿಯೇ ಬಿಟ್ಟಿದ್ದಾರೆ. ಮಳೆನೀರು ಹರಿಯುವ ಜಾಗದಲ್ಲಿ ಕಟ್ಟಡ ತ್ಯಾಜ್ಯ ಬಿದ್ದಿದ್ದು, ಸುತ್ತಲಿನ ಮನೆಗಳಿಗೆ ಪುನಃ ಪ್ರವಾಹದ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಕೆಲವು ಮನೆಗಳು ಮತ್ತು ಅಪಾರ್ಚ್‌ಮೆಂಟ್‌ಗಳ ಕಾಂಪೌಂಡ್‌ ಒಡೆದು ಹಾಕಲಾಗಿದ್ದು, ಮಳೆಯ ನೀರು ಮನೆಯೊಳಗೆ ನುಗ್ಗುವ ಸಾಧ್ಯತೆ ಹೆಚ್ಚಾಗಿದೆ. ಪ್ರವಾಹದ ಹಾನಿಯನ್ನು ತಪ್ಪಿಸಲು ಕೈಗೊಳ್ಳಲಾದ ಪಾಲಿಕೆಯ ತೆರವು ಕಾರ್ಯಾಚರಣೆ ಸುತ್ತಲಿನ ಪ್ರದೇಶದಲ್ಲಿ ಪ್ರವಾಹ ಸೃಷ್ಟಿಗೆ ಕಾರಣವಾಗಲಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒತ್ತುವರಿಯಲ್ಲಿ ಲೇಔಟ್‌

ಮಹದೇವಪುರ ವಲಯದ ವಿವಿಧೆಡೆ ರಾಜಕಾಲುವೆ ಒತ್ತುವರಿ ಮಾಡಿ ಅನಧಿಕೃತವಾಗಿ ಬಡಾವಣೆ ನಿರ್ಮಿಸಿದ ಕೆಲವು ಕಿಡಿಗೇಡಿಗಳು ಸೈಟ್‌ಗಳನ್ನು ಮಾರಾಟ ಮಾಡಿದ್ದಾರೆ. ಬಡಾವಣೆಯ ಸೈಟನ್ನು .80 ಲಕ್ಷ ನೀಡಿ ಖರೀದಿ ಮಾಡಿದ್ದೇವೆ. ಮನೆ ಕಟ್ಟಿಕೊಳ್ಳುವಾಗಲೂ ಒತ್ತುವರಿ ಜಾಗವೆಂದು ನಮಗೆ ತಿಳಿಯಲಿಲ್ಲ. ಆದರೆ, ಈಗ ಬಿಬಿಎಂಪಿ ಅಧಿಕಾರಿಗಳು ಇದು ರಾಜಕಾಲುವೆಯ ಜಾಗವೆಂದು ಹೇಳುತ್ತಿದ್ದಾರೆ. ನಾವು ಜೀವಮಾನವಿಡೀ ದುಡಿದು ಕೂಡಿಟ್ಟಿದ್ದ ಲಕ್ಷಾಂತರ ಹಣ ಈಗ ನಷ್ಟವಾಗಿದೆ. ನಮ್ಮ ಹಣವನ್ನು ಯಾರ ಬಳಿ ಕೇಳಬೇಕು? ಏನು ಮಾಡಬೇಕು ಎನ್ನುವುದೇ ತಿಳಿಯುತ್ತಿಲ್ಲ ಎಂದು ನಿವಾಸಿ ಲಕ್ಷ್ಮೇಶ್‌ ಅಳಲು ತೋಡಿಕೊಂಡರು.

ಒತ್ತುವರಿ ತೆರವು ಮತ್ತೆ ಆರಂಭ, ಲೇಕ್‌ವ್ಯೂ ಅಪಾರ್ಚ್‌ಮೆಂಟಿಂದ ಒತ್ತುವರಿ ಆಗಿದ್ದ ಜಾಗ ತೆರವು

ಸಣ್ಣ ಒತ್ತುವರಿಗಳ ತೆರವಿಗೆ ಸೀಮಿತ

ದೊಡ್ಡ ಕಟ್ಟಡಗಳಿಂದ ಆಗಿರುವ ಒತ್ತುವರಿಯನ್ನು ಸೋಮವಾರದಿಂದ ತೆರವು ಮಾಡುವುದಾಗಿ ಹೇಳಿದ್ದ ಬಿಬಿಎಂಪಿ ಅಧಿಕಾರಿಗಳು, ಸೋಮವಾರ ಕೇವಲ ಶೆಡ್‌, ಕಾಂಪೌಂಡ್‌, ಖಾಲಿ ಜಾಗ ಒತ್ತುವರಿ ತೆರವಿಗೆ ಮುಂದಾಗಿದ್ದಾರೆ. ಪ್ರಭಾವಿಗಳಿಂದ ಆಗಿರುವ ಒತ್ತುವರಿ ತೆರವಿಗೆ ಮುಂದಾಗಿಲ್ಲ. ಬಡವರ ಮೇಲೆ ದರ್ಪ ತೋರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ವಿಚಾರದಲ್ಲಿ ಬಡವ, ಮಧ್ಯಮ, ಶ್ರೀಮಂತ ಅನ್ನುವ ಪ್ರಶ್ನೆಯೇ ಇಲ್ಲ. ಸರ್ಕಾರಕ್ಕೆ ಎಲ್ಲರೂ ಕೂಡ ಒಂದೇ. ಎಲ್ಲವನ್ನೂ ಸಮಾನವಾಗಿ ನೋಡಿ, ಒತ್ತುವರಿ ತೆರವು ಮಾಡಲು ಸೂಚಿಸಿದ್ದೇವೆ. ಸುಮಾರು 150-200 ಜನರ ಒತ್ತುವರಿಯಿಂದ ಸಾವಿರಾರು ಜನರಿಗೆ ಸಮಸ್ಯೆ ಆಗಿದೆ. ಕೆಲವರು ಕೋರ್ಚ್‌ಗೆ ಹೋಗಿದ್ದಾರೆ. ನ್ಯಾಯಾಲಯಕ್ಕೂ ಮನವರಿಕೆ ಮಾಡಿ ಆದೇಶ ಪಡೆದು ತೆರವು ಮಾಡುತ್ತೇವೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಮುಂದೆ ಮಳೆ ಬಂದರೆ ಯಾರಿಗೂ ಸಮಸ್ಯೆ ಆಗಬಾರದು ಎನ್ನುವುದು ನಮ್ಮ ಉದ್ದೇಶ ಅಂತ ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.