ನರಗುಂದ(ಮಾ.07): ಉತ್ತರ ಕರ್ನಾಟಕ ಭಾಗದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತ ಸಮುದಾಯದ ಬಹುದಿನಗಳ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರು ಬಂದು ಜಲಾಶಯಕ್ಕೆ ಸೇರುವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತ ಸೇನಾ ಸದಸ್ಯ ಅರ್ಜುನ ಮಾನೆ ಹೇಳಿದ್ದಾರೆ. 

1695 ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿದ ಅವರು, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತ ರು 30 ವರ್ಷದಿಂದ ಮಲಪ್ರಭೆ ಜಲಾಶಯದ ಮೇಲ್ಬಾಗದಲ್ಲಿ ಹರಿಯುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರನ್ನು ತಂದು ಜಲಾಶಯಕ್ಕೆ ಸೇರಿಸಬೇಕೆಂದು ಬೇಡಿಕೆ ಇಟ್ಟರೂ ಈ ಭಾಗದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ಚುನಾವಣೆ ಸಂದರ್ಭದಲ್ಲಿ ಮಾತ್ರ ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡು ಈ ಯೋಜನೆ ಜಾರಿ ಮಾಡದ್ದರಿಂದ ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀಗಳ ನೇತೃತ್ವದಲ್ಲಿ 2015 ರ ಜು.15ರಿಂದ ಇವರೆಗೆ ಹಲವಾರು ರೀತಿ ಹೋರಾಟ ಮಾಡುವ ಸಂದರ್ಭದಲ್ಲಿ 11 ಮಹದಾಯಿ ಹೋರಾಟಗಾರರನ್ನು ಕಳೆದುಕೊಂಡು ಈ ಯೋಜನೆಯನ್ನು ಸರ್ಕಾರಗಳು ಜಾರಿ ಮಾಡದ್ದಕ್ಕೆ 250 ರೈತರು ದೆಹಲಿಗೆ ಪ್ರಯಾಣ ಬೆಳಸಿ ರಾಷ್ಟ್ರಪತಿಗಳ ಭವನದ ಮುಂದೆ ಧರಣಿ ಕುಳಿತು ನಮ್ಮಗೆ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರಿ ಕೊಡಿ ಇಲ್ಲವೇ ದಯಾಮರಣ ನೀಡಬೇಕೆಂದು ಅರ್ಜಿ ನೀಡಲಾಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಮಹದಾಯಿ ಜಲ ವಿವಾದಕ್ಕೆ ನೇಮಕವಾದ ನ್ಯಾಯಾಧೀಕರಣದ ನ್ಯಾಯಾಧೀಶರು 2018 ರ ಆ. 14ರಂದು ಕರ್ನಾಟಕ ರಾಜ್ಯಕ್ಕೆ 13.42 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದರು. ಇದು ಯಾವ ರಾಜಕೀಯ ಪಕ್ಷಗಳಿಂದ ಜಾರಿಯಾಗಿಲ್ಲ, ಮಹದಾಯಿ ಹೋರಾಟಗಾರರ ಹೋರಾಟದಿಂದ ಯೋಜನೆ ಜಾರಿಯಾಗಿದ್ದು, ಆದ್ದರಿಂದ ರಾಜ್ಯ ಸರ್ಕಾರ ಬಜೆಟ್‌ನಲ್ಲಿ 500 ಕೋಟಿ ಅನುದಾನ ನೀಡಿದ್ದು ಸ್ವಾಗತಾರ್ಹ ಎಂದರು. 

ರೈತ ಸೇನಾ ಸಂಘಟನೆ ಸದಸ್ಯ ಶಾಂತವ್ವ ಮಡಿವಾಳರ ಮಾತನಾಡಿದರು. ವೀರಬಸಪ್ಪ ಹೂಗಾರ, ಎಸ್.ಬಿ. ಜೋಗಣ್ಣವರ, ಸೋಮಲಿಂಗಪ್ಪ ಆಯಿಟ್ಟಿ, ಅರ್ಜುನ ಮಾನೆ, ಅಡಿಯಪ್ಪ ಕೋರಿ, ಮಲ್ಲೇಶಪ್ಪ ಅಣ್ಣೆಗೇರಿ, ಎ.ಪಿ. ಪಾಟೀಲ, ಜಗನ್ನಾಥ ಮುಧೋಳೆ, ಸುಭಾಷ ಗಿರಿಯಣ್ಣವರ, ಸಂಗಪ್ಪ ಶಾನವಾಡ, ವೆಂಕಪ್ಪ ಹುಜರತ್ತಿ, ಹನುಮಂತ ಸರನಾಯ್ಕರ, ವಾಸು ಚವ್ಹಾಣ, ಯಲ್ಲಪ್ಪ ಗುಡದೇರಿ, ಮಾರುತಿ ಬಡಿಗೇರ, ಬಸವ್ವ ಪೂಜಾರ, ಮಂಜುಳಾ ಸರನಾಯ್ಕರ, ಮಲ್ಲಪ್ಪ ಐನಾಪುರ, ಕೆ.ಎಚ್. ಮೊರಬದ, ನಾಗರತ್ನ ಸವಳಭಾವಿ, ಅನಸವ್ವ ಶಿಂದೆ, ಶಾಂತವ್ವ ಭೂಸರಡ್ಡಿ, ಈರಣ್ಣ ಗಡಗಿ ಸೇರಿದಂತೆ ಮುಂತಾದವರು ಇದ್ದರು.