ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ ಅಬ್ಬರ, ಕೆಲವೆಡೆ ಮರ, ಭೂ ಕುಸಿತ, ನೆರೆ ಭೀತಿಯಲ್ಲಿ ಜನರು
* ಮಲೆನಾಡಿನಲ್ಲಿ ಮಳೆ ಅಬ್ಬರ, ಶಾಲೆಗಳಿಗೆ ರಜೆ ಮುಂದುವರಿಕೆ
* ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್
* ಮಲೆನಾಡಿನ ಕೆಲವೆಡೆ ಮರ, ಭೂ ಕುಸಿತ, ನೆರೆ ಭೀತಿಯಲ್ಲಿ ಜನರು
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು, (ಜುಲೈ.07) : ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಕೆಲವೆಡೆ ರಸ್ತೆಗೆ ಮರಗಳು ಉರುಳಿ ಸಂಚಾರ ಸ್ಥಗಿತಗೊಂಡಿದ್ದರೆ, ಇನ್ನೂ ಕೆಲವೆಡೆ ಭೂ ಕುಸಿತ ಸಂಭವಿಸಿದೆ.ನೀರಿನಲ್ಲಿ ಕೊಚ್ಚಿಹೋಗಿದ್ದ ಬಾಲಕಿ ಪತ್ತೆಗೆ ಶೋಧಕಾರ್ಯ ಮುಂದುವರೆದಿದೆ.
ಮಲೆನಾಡಿನಲ್ಲಿ ವರುಣಾರ್ಭಟ
ಮಲೆನಾಡಿನಲ್ಲಿ ವರುಣಾರ್ಭಟ ಮುಂದುವರಿದಿದ್ದು, ಅಲ್ಲಲ್ಲಿ ಧರೆ, ಮರಗಳ ಕುಸಿತ ಸಂಭವಿಸಿ ಜನಜೀವನ ಅಸ್ತವ್ಯಸ್ಥಗೊಂಡಿದೆ.ಮೂಡಿಗೆರೆಯಲ್ಲಿ ಮರಗಳು ಉರುಳಿ, ಧರೆ ಕುಸಿತ ಸಂಭವಿಸಿದ್ದು, ರಸ್ತೆ ಸಂಚಾರಕ್ಕೆ ಕೆಲ ಕಾಲ ಅಡಚಣೆ ಉಂಟಾಗಿತ್ತು. ಉಕ್ಕಿ ಹರಿಯುತ್ತಿರುವ ನದಿ ನೀರಿನಿಂದ ಅನಾಹುತಗಳು ಸಂಭವಿಸುವ ಭೀತಿಯಲ್ಲಿ ಜನರಿದ್ದಾರೆ.
ಚಿಕ್ಕಮಗಳೂರು: ಹಳ್ಳದಲ್ಲಿ ಕೊಚ್ಚಿ ಹೋಗಿ 4 ದಿನ ಕಳೆದರೂ ಪತ್ತೆಯಾಗದ ಬಾಲಕಿ ದೇಹ
ಹೆದ್ದಾರಿಗೆ ಬಿದ್ದ ಮರ: ನಾಳೆ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್
ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಆರೆಂಜ್,ಅಲರ್ಟ್ ಇತ್ತು. ನಾಳೆ (ಶುಕ್ರವಾರ )ಯಲ್ಲೋ ಅಲರ್ಟ್ ಘೋಷಣೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಮಲೆನಾಡು ಭಾಗ, ಮೂಡಿಗೆರೆ, ಕಳಸ, ಕೊಪ್ಪ,ಶೃಂಗೇರಿ ಮತ್ತು ನರಸಿಂಹರಾಜಪುರ ತಾಲೂಕಿನಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಘೋಷಿಸಿದ್ದ ರಜೆ ಮುಂದುವರೆದಿದೆ.ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು ಬಾಳೆಹೊಳೆ ಸಮೀಪ ಬೃಹತ್ಮರವೊಂದು ಧರೆಗೆ ಉರುಳಿದ್ದು, ಬುಡಸಮೇತ ಮೇಲೆದ್ದಿರುವುದರಿಂದ ಮಣ್ಣಿನ ರಾಶಿ ಸೃಷ್ಟಿಯಾಗಿದೆ. ಮೂಡಿಗೆರೆ, ಕೊಟ್ಟಿಗೆಹಾರ,ಕಳಸ, ಕುದುರೆಮುಖ, ಕೊಪ್ಪ ಮತ್ತು ಶೃಂಗೇರಿ ತಾಲೂಕಿನಲ್ಲಿ 5 ದಿನದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.
ತುಂಗಾ,ಭದ್ರಾ ಮತ್ತು ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.ಬಾಳೆಹೊನ್ನೂರು ಸಮೀಪ ಭದ್ರಾನದಿ ನೀರು ನದಿಪಾತ್ರದಲ್ಲಿದ್ದ ತೋಟಗಳಿಗೆ ನುಗ್ಗಿದೆ. ಸುರಕ್ಷತೆಯ ಹಿತಾದೃಷ್ಟಿಯಿಂದ ನದಿಸಮೀಪದ ಜನರನ್ನು ಸ್ಥಳಾಂತರಿಸಲಾಗಿದೆ. ಮೂಡಿಗೆರೆ, ಕೊಟ್ಟಿಗೆಹಾರ, ಕಳಸ, ಕುದುರೆಮುಖ, ಶೃಂಗೇರಿ ತಾಲೂಕಿನಲ್ಲಿಭಾರೀ ಮಳೆಯಾಗುತ್ತಿರುವುದರಿಂದ ತುಂಗ-ಭದ್ರಾ ಹಾಗೂ ಹೇಮಾವತಿ ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಜನ, ಜಾನುವಾರುಗಳು ನದಿ ಪಾತ್ರದಲ್ಲಿ ತಿರುಗಾಡದಂತೆ ಸ್ಥಳೀಯಾಡಳಿತಗಳು ಎಚ್ಚರಿಕೆ ನೀಡಿವೆ.ಶೃಂಗೇರಿ ತಾಲೂಕು ಕೆರೆಕಟ್ಟೆಯಲ್ಲಿ 174 ಮಿ.ಮೀ.ಹೆಚ್ಚು ಮಳೆಯಾಗಿದೆ.
ಚಲಿಸುತ್ತಿದ್ದ ಕಾರಿನ ಮೇಲೆ ಬಿತ್ತು ಮರದ ಕೊಂಬೆಗಳು; ಪವಾಡಸದೃಶ ರೀತಿಯಲ್ಲಿ ಪಾರು
ಮಳೆ ಕಾಮಗಾರಿಗಳು ಪಟ್ಟಿಗೆ ಡಿ.ಎನ್ ಜೀವರಾಜ್ ಆಗ್ರಹ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೊರನಾಡು ಶೃಂಗೇರಿ ಮಾರ್ಗ ಮಧ್ಯೆ ಭೂ ಕುಸಿತ ಸಂಭವಿಸಿದೆ. ರಸ್ತೆ ಪಕ್ಕದಲ್ಲೇ 150 ಅಡಿಗಷ್ಟು ಧರೆ ಕುಸಿತಗೊಂಡಿದೆ. ಧಾರ್ಮಿಕ ಕೇಂದ್ರ, ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರು, ಭಕ್ತರು ಸಾಗುವ ಪ್ರಮುಖ ಮುಖ್ಯರಸ್ತೆ ಇದಾಗಿದ್ದು, ಮುಂಜಾಗ್ರತಾ ಕ್ರಮವಾಗಿ ರಸ್ತೆಯ ಎರಡು ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಕೊಪ್ಪ ತಾಲ್ಲೂಕಿನ ಅತ್ತಿಗುಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿಕಲ್ ಬಳಿಯೂ ಭೂಕುಸಿತ ಸಂಭವಿಸಿದೆ.ಭೂ ಕುಸಿತ ಸ್ಥಳಿಗಳಿಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಿ ಎನ್ ಜೀವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆಯಲ್ಲಿ ಸುದ್ದಿಗಾರೊಂದಿಗೆ ಮಾತಾಡಿದ ಅವರು 2019ರಿಂದ ಶೃಂಗೇರಿ ಕ್ಷೇತ್ರದಲ್ಲಿ ಮಳೆಯಿಂದ ಅತೀ ಹೆಚ್ಚು ಹಾನಿ ಆಗುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರವೂ 2019ರಿಂದ ಇಲ್ಲಿಯ ತನಕ ಅತಿವೃಷ್ಟಿಗೆ ಅನುದಾನವನ್ನು ಸಾಕಷ್ಟು ಬಿಡುಗೆಡೆ ಮಾಡಿದೆ. ಆದ್ರೂ ಶೃಂಗೇರಿ ಕ್ಷೇತ್ರದಲ್ಲಿ ಸಮರ್ಪಕವಾಗಿ ನೆರೆ ಕಾಮಗಾರಿಗಳು ನಡೆದಿಲ್ಲ, ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದರು. ಅಲ್ಲದೆ ಕ್ಷೇತ್ರದ ಶಾಸಕರು ಅತಿವೃಷ್ಟಿಗೆ ಬಿಡುಗೆಡೆಯಾಗಿರುವ ಅನುದಾನದಲ್ಲಿ ನಡೆಸಿರುವ ಮೂರು ,ನಾಲ್ಕು ವರ್ಷದ ಕಾಮಗಾರಿಗಳು ಪಟ್ಟಿಯನ್ನು ಕ್ಷೇತ್ರದ ಜನರಿಗೆ ನೀಡುವಂತೆ ಒತ್ತಾಯಿಸಿದ್ದಾರೆ.
ಬಾಲಕಿ ಇನ್ನೂ ನಾಪತ್ತೆ
ಚಿಕ್ಕಮಗಳೂರು ತಾಲ್ಲೂಕಿನ ಹೊಸಪೇಟೆ ಗ್ರಾಮದ ಹಳ್ಳದಲ್ಲಿ ಕೊಚ್ಚಿ ಹೋದ ಶಾಲಾ ಬಾಲಕಿ ಸುಪ್ರಿತಾ ನಾಲ್ಕನೇ ದಿನವೂ ಪತ್ತೆಯಾಗಿಲಿಲ್ಲ. ಸುರಿಯುವ ಮಳೆಯಲ್ಲೂ ಎಸ್ಡಿಆರ್ಎಫ್ ಹಾಗೂ ಈಜು ತಜ್ಞರು ನಡೆಸಿದ ಪ್ರಯತ್ನವೆಲ್ಲಾ ವಿಫಲವಾಯಿತು.48ಗಂಟೆ ಶೋಧ ಕಾರ್ಯ ನಡೆದರೂ ಸುಳಿವು ಸಿಗಲಿಲ್ಲ. ಇಂದು ಹಳ್ಳದಲ್ಲಿ ನೀರಿನ ರಭಸ ಇನ್ನಷ್ಟು ಹೆಚ್ಚಾಗಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.