ರಾಜಧಾನಿ ಬೆಂಗಳೂರಿನಲ್ಲಿ  ಭಾರೀ ಮಳೆ ಸಾಕಷ್ಟುಅನಾಹುತ ಸೃಷ್ಟಿಸಿದೆ ಮಳೆ ನೀರು ಕಾಲುವೆ, ರಾಜಕಾಲುವೆಗಳು ತುಂಬಿ ಹರಿದು ತಗ್ಗು ಪ್ರದೇಶದ ನೂರಾರು ಮನೆಗಳು, ಅಪಾರ್ಟ್‌ಮೆಂಟ್‌ಗಳು, ಬಡಾವಣೆ ರಸ್ತೆಗಳು, ಅಂಗಡಿ-ಮುಂಗಟ್ಟುಗಳು ಜಲಾವೃತ

 ಬೆಂಗಳೂರು (ಅ.05): ರಾಜಧಾನಿ ಬೆಂಗಳೂರಿನಲ್ಲಿ (Bengaluru) ಭಾರೀ ಮಳೆ (Rain) ಸಾಕಷ್ಟುಅನಾಹುತ ಸೃಷ್ಟಿಸಿದೆ. ಮಳೆ ನೀರು ಕಾಲುವೆ, ರಾಜಕಾಲುವೆಗಳು ತುಂಬಿ ಹರಿದು ತಗ್ಗು ಪ್ರದೇಶದ ನೂರಾರು ಮನೆಗಳು, ಅಪಾರ್ಟ್‌ಮೆಂಟ್‌ಗಳು, ಬಡಾವಣೆ ರಸ್ತೆಗಳು, ಅಂಗಡಿ-ಮುಂಗಟ್ಟುಗಳು ಜಲಾವೃತವಾಗಿ ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಜಯನಗರದ (Jayanagara) ಸೌಂತ್‌ ಎಂಡ್‌ ವೃತ್ತದಲ್ಲಿ ಮರ ಬಿದ್ದು ದ್ವಿಚಕ್ರವಾಹನ ಸವಾರ ನಾಗರಾಜ್‌(73) ಮೃತಪಟ್ಟಿದ್ದು, ರಾಜರಾಜೇಶ್ವರಿನಗರದಲ್ಲಿ (Rajarajeshwarinagar) ದನಕೊಟ್ಟಿಗೆ ರಾಜಕಾಲುವೆ ನೀರು ನುಗ್ಗಿ 18 ಜಾನುವಾರುಗಳು ಮೃತಪಟ್ಟಿವೆ. ಹತ್ತಾರು ವಿದ್ಯುತ್‌ ಕಂಬಗಳು, 25ಕ್ಕೂ ಹೆಚ್ಚು ಮರಗಳು ರಸ್ತೆಗೆ ಉರುಳಿವೆ. ಎಚ್‌ಎಎಲ್‌ನ (HAl) ರಮೇಶ್‌ ನಗರದಲ್ಲಿ 12 ಅಡಿ ಎತ್ತರದ 200 ಮೀಟರ್‌ ಉದ್ದದ ಕಾಂಪೌಂಡ್‌ ಬಿದ್ದು, ಮೂರು ಕಾರು, ನಾಲ್ಕು ಆಟೋ, ಟಿಟಿ ವಾಹನಕ್ಕೆ ಹಾನಿಯಾಗಿದೆ. ಶೇಷಾದ್ರಿಪುರಂನಲ್ಲಿರುವ ಆಕಾಶ್‌ ಸ್ಟುಡಿಯೋಗೆ ಹೊಂದಿಕೊಂಡಿದ್ದ 200 ಅಡಿ ಉದ್ದದ ಗೋಡೆ ಕುಸಿದು ಸ್ಟುಡಿಯೋ ಆವರಣಕ್ಕೆ ನೀರು ನುಗ್ಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಧಾರಾಕಾರ ಮಳೆಗೆ ಸಾವಿನ ಗುಂಡಿಗಳಾದ ಬೆಂಗಳೂರು ರಸ್ತೆಗಳು, ಹೆಚ್ಚುತ್ತಿವೆ ಅಪಘಾತ

ಇನ್ನು ಕೋರಮಂಗಲ, ರಾಜರಾಜೇಶ್ವರಿನಗರ, ನಾಯಂಡಹಳ್ಳಿ ಸೇರಿದಂತೆ ನಗರದ ವಿವಿಧೆಡೆ ಕಾರು, ದ್ವಿಚಕ್ರವಾಹನ, ಆಟೋಗಳು, ಟೆಂಪೋ ಟ್ರಾವೆಲರ್‌ಗಳು ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ವಾಹನಗಳು ನೀರಿನಲ್ಲಿ ಮುಳುಗಿ ಹಾನಿಯಾಗಿದೆ. ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿ ನಾಶವಾಗಿವೆ.

ರಾಜರಾಜೇಶ್ವರಿನಗರ ವಲಯ, ಪಶ್ಚಿಮ ವಲಯ, ಪೂರ್ವ ವಲಯ ಸೇರಿದಂತೆ ನಗರದ ಹಲವೆಡೆ ಮನೆಗಳಿಗೆ ನೀರು (water) ನುಗ್ಗಿ ಜಲಾವೃತವಾದ ಹಿನ್ನೆಲೆಯಲ್ಲಿ ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ಮನೆಗಳ ಸದಸ್ಯರು ಇಡೀ ರಾತ್ರಿ ಪರದಾಡಿದರು. ಪ್ರವಾಹದ ಮಾದರಿಯಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರೋರಾತ್ರಿ ಬಂಧುಗಳ ಮನೆ, ಸ್ನೇಹಿತರ ಮನೆಗಳಲ್ಲಿ ಆಶ್ರಯಪಡೆಯುವ ಸ್ಥಿತಿ ನಿರ್ಮಾಣವಾಗಿತ್ತು.

ಪೀಠೋಪಕರಣಗಳು, ಫಿಡ್ಜ್‌, ವಾಷಿಂಗ್‌ ಮಷನ್‌, ಬಟ್ಟೆಗಳು, ದಿನಸಿ ಸಾಮಾಗ್ರಿಗಳು, ಆಹಾರಧಾನ್ಯಗಳು ಸೇರಿದಂತೆ ಮನೆಯ ಇತರೆ ವಸ್ತುಗಳು ನೀರಿನಲ್ಲಿ ಮುಳುಗಿ ನಾಶವಾಗಿವೆ. ರಾತ್ರೋರಾತ್ರಿ ಮನೆಗಳಲ್ಲಿ ಏಕಾಏಕಿ ನೀರು ತುಂಬಿಕೊಂಡ ಪರಿಣಾಮ ಮನೆಯ ಸದಸ್ಯರು ದಿಕ್ಕು ತೋಚದೆ ಓಡಾಡಿದ್ದಾರೆ. ಭಾರೀ ಮಳೆಗೆ ವಿದ್ಯುತ್‌ ಕಂಬಗಳು ಧರೆಗೆ ಉರುಳಿದ ಪರಿಣಾಮ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿ ಕತ್ತಲಲ್ಲೇ ರಾತ್ರಿ ಕಳೆದಿದ್ದಾರೆ.

ಬೆಂಗಳೂರಿನಲ್ಲಿ ಭಾರೀ ಮಳೆ, ಮುಳುಗಿದ ರಸ್ತೆ, ಕಾರು, ಬೈಕುಗಳು ಜಖಂ, ಕೊಟ್ಟಿಗೆ ನೀರುಪಾಲು

ರಾಜರಾಜೇಶ್ವರಿನಗರ, ಶಕ್ತಿಗಣಪತಿನಗರ, ಜೆ.ಸಿ.ನಗರ, ಐಡಿಯಲ್‌ ಹೋಮ್‌ ಲೇಔಟ್‌, ಹೊರಮಾವು, ರಾಮಮೂರ್ತಿನಗರ, ಮಹದೇವಪುರ, ಬಾಪೂಜಿನಗರ, ಹೊಸಕೆರೆಹಳ್ಳಿ, ದಾಸರಹಳ್ಳಿ, ಸಂಪಂಗಿರಾಮನಗರ, ಪ್ರಮೋದ್‌ ಲೇಔಟ್‌, ಡಿ ಗ್ರೂಪ್‌ ಲೇಔಟ್‌, ನಾಗರಭಾವಿ, ಬಿಡಿಎ ಲೇಔಟ್‌, ಸುಂಕದಕಟ್ಟೆ, ಗಾಳಿ ಅಂಜನೇಯಸ್ವಾಮಿ ದೇವಸ್ಥಾನ ವಾರ್ಡ್‌, ಕೋರಮಂಗಲ ಆರನೇ ಹಂತ, ಶಂಕರಮಠ, ಕಮಲನಗರ, ವೃಷಭಾವತಿ ನಗರ, ಬಸವೇಶ್ವರನಗರ, ಆರ್‌ಎಂವಿ ಎಕ್ಸ್‌ಟೆನ್ಷನ್‌, ಜನಪ್ರಿಯ ಲೇಔಟ್‌, ಕೆಂಚನಹಳ್ಳಿ, ಎಚ್‌ಎಎಲ್‌ನ ಬಸವನಗರ, ಸೇರಿದಂತೆ ನಗರದ ಹಲವೆಡೆ ತಗ್ಗುಪ್ರದೇಶದ ನೂರಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.