ನಿರಂತರ ಮಳೆಯಿಂದ ಮನೆಗಳು ನೆಲೆ ಕಚ್ಚಿದ್ದು, ಬಿತ್ತನೆ ಮಾಡಿದ ಬೀಜಗಳು ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ರೈತರು ಆತಂಕಕ್ಕೆ ಒಳಗಾದರೆ, ವ್ಯಾಪಾರ, ವಹಿವಾಟು ಬಹುತೇಕ ಕುಸಿಯುವ ಹಂತದಲ್ಲಿದೆ.

ಗುರುಮಠಕಲ್‌(ಜು.23): ತಾಲೂಕಿನೆಲ್ಲೆಡೆ ಕಳೆದ ನಾಲ್ಕೈದು ದಿನಗಳಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಕೆಲವು ಭಾಗದಲ್ಲಿ ಹಳ್ಳ-ಕೊಳ್ಳಗಳು, ಕೆರೆಗಳು ತುಂಬಿ ಹರಿಯುತ್ತಿವೆ. ಇದರಿಂದ ಬಿಡದೇ ಸುರಿಯುತ್ತಿರುವ ಮಳೆಯು ಜನರಲ್ಲಿ ಹೆಚ್ಚು ಉತ್ಸವ ಮೂಡಿಸದೆ (ಕಳೆ )ಆತಂಕ ಮೂಡಿಸಿದೆ. ನಿರಂತರ ಮಳೆಯಿಂದ ಮನೆಗಳು ನೆಲೆ ಕಚ್ಚಿದ್ದು, ಬಿತ್ತನೆ ಮಾಡಿದ ಬೀಜಗಳು ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ರೈತರು ಆತಂಕಕ್ಕೆ ಒಳಗಾದರೆ, ವ್ಯಾಪಾರ, ವಹಿವಾಟು ಬಹುತೇಕ ಕುಸಿಯುವ ಹಂತದಲ್ಲಿದೆ.

ಮಳೆ ವಿವರ:

ತಾಲೂಕು ವ್ಯಾಪ್ತಿಯಲ್ಲಿ ಸೋಮವಾರ (ಜು.17) ಗುರುಮಠಕಲ್‌ 2.1, ಕೊಂಕಲ್‌ 1.1, ಬಳಿಚಕ್ರ 0.5, ಮಂಗಳವಾರ (ಜು.18) ಗುರುಮಠಕಲ್‌ 8.2, ಕೊಂಕಲ್‌ 8.6, ಬಳಿಚಕ್ರ 5.4, ಬುಧವಾರ (ಜು.19) ಗುರುಮಠಕಲ್‌ 18.1, ಕೊಂಕಲ್‌ 15.06, ಬಳಿಚಕ್ರ 11.9, ಗುರುವಾರ (ಜು.20) ಗುರುಮಠಕಲ್‌ 13.2, ಕೊಂಕಲ್‌ 7.7, ಬಳಿಚಕ್ರ 7.3, ಶುಕ್ರವಾರ (ಜು.21) ಗುರುಮಠಕಲ್‌ 119.8, ಕೊಂಕಲ್‌ 95.3 ಎಂ.ಎಂ., ಬಳಿಚಕ್ರ 90.6 ಮಳೆಯಾಗಿದೆ. ಶನಿವಾರ ಮಳೆ ಬಿದ್ದಿಲ್ಲ ಶೂನ್ಯ ವರದಿಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬರದ ನಾಡು ಯಾದಗಿರಿಯಲ್ಲಿ ಭರ್ಜರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ

ದರ್ಗಾ ಹಾನಿ:

ತಾಲೂಕಿನ ಗಾಜರಕೋಟ್‌ ಗ್ರಾಮದಲ್ಲಿ ಶುಕ್ರವಾರ ಬಿದ್ದ ಮಳೆಗೆ ಸಂಜೆ 50 ವರ್ಷಗಳ ಹಳೆಯ ಬೇವಿನ ಮರವು ಕತಾಲ್‌ ಸಾಬ್‌ ದರ್ಗಾದ ಮೇಲೆ ಬಿದ್ದಿದೆ. ದರ್ಗಾದ ಗೋಡೆ ಹಾನಿಯಾಗಿದೆ. ಅದರ ಪಕ್ಕದಲ್ಲಿರುವ ಮೂರು ವಿದ್ಯುತ್‌ ಕಂಬಗಳು ಮನೆ ಮೇಲೆ ಬಿದ್ದಿವೆ. ಅದೃಷ್ಟವಶಾತ್‌ ವಿದ್ಯುತ್‌ ಸರಬರಾಜು ಇಲ್ಲದಿರುವುದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

16 ಮನೆಗಳು ಕುಸಿತ:

ನಂದೇಪಲ್ಲಿ ಗ್ರಾಮದ ತಿಪ್ಪಣ್ಣ ಭೀಮರಾಯ, ಮಲ್ಲಪ್ಪ ಭೀಮಶಪ್ಪ, ಅಯ್ಯಪ್ಪ ಅಯ್ಯಾಳಪ್ಪ, ಹಿಮಾಲಪುರ ಗ್ರಾಮದ ಲಕ್ಷ್ಮೀ ನರಸರೆಡ್ಡಿ, ಮಾಳಮ್ಮ ಭೀಮರಾಯ, ಗಾಜರಕೋಟ ಗ್ರಾಮದ ಗೌರಮ್ಮ ಹುಸೇನಪ್ಪ, ಯದ್ಲಾಪುರ ಗ್ರಾಮದ ಭೀಮವ್ವ ಮಹಾದೇವಪ್ಪ, ಕೇಶ್ವಾರ ಗ್ರಾಮದ ನಾರಾಯಣ ನರಸಣ್ಣ ಬಡಿಗೇರ, ಕಮಲನಗರದ ಸಾಲಿಬಾಯಿ ಸೂರ್ಯ, ಪಸಪೂಲ ಕಾಶಮ್ಮ ಶಿವಪ್ಪ ಅವರ ಮನೆ ಸೇರಿ ತಾಲೂಕು ವ್ಯಾಪ್ತಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಈವರೆಗೆ ಒಟ್ಟು 16 ಮನೆಗಳು ಕುಸಿದಿವೆ ಎಂದು ಮಾಹಿತಿ ತಿಳಿದು ಬಂದಿದೆ.

ಕೆರೆಗಳು ಭರ್ತಿ:

ರಾಜ್ಯದಲ್ಲಿ ಅತೀ ಹೆಚ್ಚು ಕೆರೆಗಳು ಹೊಂದಿರುವ 2ನೇ ಕ್ಷೇತ್ರ ಗುರುಮಠಕಲ್‌ ತಾಲೂಕಾಗಿದ್ದು, ತಾಲೂಕಿನ ಧರ್ಮ ಪೂರ್‌ ಕೆರೆ, ಮೀನಾಸ್ಪೂರ್‌ ಕೆರೆ, ಚೆಲ್ಲೇರಿ ಕೆರೆ, ನಲ್ಲ ಚೆರುವು ಸೇರಿದಂತೆ ಇಲ್ಲಿನ ಬಹುತೇಕ ಕೆರೆಗಳು ಮಳೆ ನೀರಿನಿಂದ ತುಂಬಿ ಹರಿಯುತ್ತಿವೆ.

ಪ್ರವಾಸಿಗರ ಆಗಮನ:

ಮಳೆಯಿಂದ ತಾಲೂಕಿನಲ್ಲಿರುವ ದಬದಬಿ ಜಲಪಾತ ಮತ್ತು ಮಲ್ಲ ಅಥವಾ ಬಂದಲೋಗು ಜಲಪಾತ ಮಳೆ ನೀರಿನಿಂದ ಪ್ರವಾಸಿಗರಿಗೆ ಆಕರ್ಷಿಸುತ್ತಿದೆ. ಇದಕ್ಕಾಗಿ ರಾಯಚೂರು, ತೆಲಂಗಾಣ ಮತ್ತು ಹೈದ್ರಾಬಾದ್‌ ಸೇರಿದಂತೆ ಪ್ರವಾಸಿಗರು ಆಗಮನ ಹೆಚ್ಚಾಗಿದೆ.

ಹೀಗೆ ನಿರಂತರವಾಗಿ ಮಳೆ ಸುರಿಯುತ್ತಿದ್ದರೆ ಅಂಗಡಿಗಳಿಗೆ ಸಾಮಗ್ರಿ ಖರೀದಿಸಲು ಗ್ರಾಹಕರು ಬರುವುದಿಲ್ಲ. ಇದರಿಂದ ಸದ್ಯ ಮೂರು ದಿನಗಳಿಂದ ಪಟ್ಟಣದ ಮಾರುಕಟ್ಟೆಯ ವಾಹಿವಾಟು ಕುಸಿತಗೊಂಡಿದೆ ಎಂದು ಹೋಟೆಲ್‌ ಮಾಲೀಕರೊಬ್ಬರು ಹೇಳಿದರು.

ಯಾದಗಿರಿ: ಕೃಪೆ ತೋರದ ವರುಣ, ರೈತರು ಕಂಗಾಲು

ರೈತರ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ತೊಗರಿ ಸಾಲಿನ ಮಧ್ಯೆ ಕಳೆ ತೆಗೆಯುವ ಕಾರ್ಯಕ್ಕೆ ಮಳೆರಾಯ ಅಡ್ಡಿಯಾಗಿದ್ದಾನೆ. ಮಳೆ ಬೇಕು ಎಂದಾಗ ಬರದೆ, ಈಗ ಸತತ ಬಿಡದೇ ಸುರಿಯುವ ಮೂಲಕ ಕೃಷಿಕರಿಗೆ ಮಳೆರಾಯ ಕಾಡುತ್ತಿದ್ದಾನೆ. ಹೀಗೆ ಸತತ ಮಳೆ ಸುರಿದರೆ ಭೂಮಿಯ ತೇವಾಂಶ ಹೆಚ್ಚಿ, ಸಸಿಗಳ ಬೇರು ಕೊಳೆವ ಭೀತಿಯಿದೆ ಎಂದು ರೈತರಾದ ಮಾಣಿಕಪ್ಪ, ಯಲ್ಲಪ್ಪ, ರಾಜು ಆತಂಕ ವ್ಯಕ್ತಪಡಿಸಿದರು.

ಈ ಮಳೆ ನಮ್ಮ ಬೆಳೆಗೆ ಕಳೆಯಿಲ್ಲ, ನಮ್ಮ ಪಾಲಿಗೆ ಶಾಪ ಆಗಿದೆ. ನಾವು ಬಿತ್ತಿದ ತೊಗರಿ, ಹೆಸರು, ಮುಂತಾದ ಬೀಜಗಳು ಕೊಳೆತು ಹೋಗುವ ಸಂಭವನಿಯತೆ ಹೆಚ್ಚಿದೆ ಎಂದು ರೈತ ನರಸಪ್ಪ ನಾಯಕ ತಿಳಿಸಿದ್ದಾರೆ.