ವರುಣನ ಆರ್ಭಟ; ಕಾಫಿನಾಡು ತತ್ತರ

ಕಾಫಿನಾಡು ಖ್ಯಾತಿಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಾಳಿ ಬಲವಾಗಿ ಬೀಸುತ್ತಿದೆ. ಕೆಲವು ಮನೆಗಳ ಮತ್ತು ವಾಹನಗಳ ಮೇಲೆ ಹಾಗೂ ಶಾಲೆಗಳ ಮೇಲೆ ಮರಗಳು ಬಿದ್ದಿವೆ. ವಿದ್ಯುತ್‌ ಕಂಬಗಳು ಬಿದ್ದ ಪರಿಣಾಮ ಇಡೀ ಜಿಲ್ಲೆಯಾದ್ಯಂತ ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಮಲೆನಾಡಿನ ಬಹುತೇಕ ಕಡೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್‌ ಇಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Rain Create hevoc in Chikkamagluru District

ಚಿಕ್ಕಮಗಳೂರು(ಆ.06): ಕಾಫಿನಾಡಿನಲ್ಲಿ ಬುಧವಾರ ವರುಣ ರುದ್ರನರ್ತನ ಮಾಡಿದೆ. ಕೆಲವೆಡೆ ರಸ್ತೆ ಸಂಪರ್ಕಗಳು ಕಡಿದುಹೋಗಿವೆ. ಸೇತುವೆ ಮುಳುಗಡೆಯಾಗಿದೆ. ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ತುಂಬಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು ಜಲಾವ್ರತವಾಗಿವೆ.

ಜಿಲ್ಲೆಯಲ್ಲಿ ಗಾಳಿ ಬಲವಾಗಿ ಬೀಸುತ್ತಿದೆ. ಕೆಲವು ಮನೆಗಳ ಮತ್ತು ವಾಹನಗಳ ಮೇಲೆ ಹಾಗೂ ಶಾಲೆಗಳ ಮೇಲೆ ಮರಗಳು ಬಿದ್ದಿವೆ. ವಿದ್ಯುತ್‌ ಕಂಬಗಳು ಬಿದ್ದ ಪರಿಣಾಮ ಇಡೀ ಜಿಲ್ಲೆಯಾದ್ಯಂತ ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಮಲೆನಾಡಿನ ಬಹುತೇಕ ಕಡೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್‌ ಇಲ್ಲ.

ಕಳೆದ ವರ್ಷ ಕಳಸ ಹಾಗೂ ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಸುಮಾರು 30ಕ್ಕೂ ಹೆಚ್ಚು ಬಾರಿ ಭದ್ರಾ ನದಿಯ ನೀರಿನಲ್ಲಿ ಮುಳುಗಡೆಯಾಗಿತ್ತು. ಈ ವರ್ಷದ ಮುಂಗಾರಿನ ಪ್ರಥಮದಲ್ಲಿ ಬುಧವಾರ ಬೆಳಿಗ್ಗೆ ಮುಳುಗಡೆಯಾಗಿದ್ದು, ಸಂಪರ್ಕ ಕಡಿದು ಹೋಗಿದೆ. ಹೇಮಾವತಿ ನದಿ ತುಂಬಿ ಹರಿಯುತ್ತಿರುವುದರಿಂದ ಈ ನದಿ ಪಾತ್ರದಲ್ಲಿರುವ ಮೂಡಿಗೆರೆ ತಾಲೂಕಿನ ಹಲವು ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ಈ ನದಿ ನೀರಿನ ಹರಿಯುವಿಕೆ ವೇಗವಾಗಿದ್ದು, ಯಾವುದೇ ಕ್ಷಣದಲ್ಲಾದರೂ ಮುಗ್ರಹಳ್ಳಿಯ ಸೇತುವೆ ಬೀಳಬಹುದೆಂದು ಸ್ಥಳೀಯರು ತಿಳಿಸಿದ್ದಾರೆ.

ಶೃಂಗೇರಿ- ಕೊಪ್ಪ ಸಂಪರ್ಕದ ಪ್ರಮುಖ ರಸ್ತೆಯಲ್ಲಿ ಆನೆಗುಂದ ಬಳಿ ಮರವೊಂದು ಬುಧವಾರ ಬಿದ್ದ ಪರಿಣಾಮ ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ತರೀಕೆರೆ ತಾಲೂಕಿನ ಕೆಮ್ಮಣ್ಣಗುಂಡಿಯಲ್ಲಿ ರವಿಚಂದ್ರನಾಯ್ಕ ಎಂಬುವವರಿಗೆ ಸೇರಿದ ಮನೆಯ ಮೇಲೆ ಮರವೊಂದು ಬಿದ್ದಿದೆ. ಇದೇ ಗ್ರಾಮದ ಪ್ರಕಾಶ್‌ ಎಂಬುವವರಿಗೆ ಸೇರಿದ ಬುಲೇರೋ ಕಾರ್‌ ಮರ ಬಿದ್ದು ಜಖಂಗೊಂಡಿದೆ. ತರೀಕೆರೆ ಎಪಿಎಂಸಿ ಆವರಣದಲ್ಲಿರುವ ಯೋಗೀಶ್‌ ಎಂಬುವವರಿಗೆ ಸೇರಿದ ಟೀ ಅಂಗಡಿಯ ಮೇಲೆ ಮರ ಬಿದ್ದು ಇಡೀ ಕ್ಯಾಂಟಿನ್‌ ನಜ್ಜುಗಜ್ಜಾಗಿದೆ. ಯೋಗೀಶ್‌ ಅವರಿಗೆ ಸಣ್ಣ ಪುಟ್ಟಗಾಯಗಳಾಗಿವೆ.

ಮಡಿಕೇರಿಯಲ್ಲಿ ಮಹಾಮಳೆ: ಭಾಗಮಂಡಲ ಸಂಪೂರ್ಣ ಜಲಾವೃತ

ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿಯ ಸರ್ಕಾರಿ ಶಾಲೆಯ ಕಟ್ಟಡದ ಮೇಲೆ ಮರ ಬಿದ್ದಿದೆ. ಮಗ್ಗಲಮಕ್ಕಿ ಸಮೀಪದ ಕೆಂಬತ್ತಮಕ್ಕಿ ಬಳಿ ರಾಜಣ್ಣ ಎಂಬುವವರಿಗೆ ಸೇರಿದ 6.5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಬಲವಾಗಿ ಬೀಸಿದ ಗಾಳಿಗೆ ನೆಲಕ್ಕೆ ಬಿದ್ದಿವೆ.

ಕಳೆದ ವರ್ಷ ಬಾರಿ ಮಳೆಯಿಂದ ತತ್ತರಿಸಿದ್ದ ಮೂಡಿಗೆರೆ ತಾಲೂಕಿನಲ್ಲಿ ಈ ಬಾರಿ ಬಲವಾಗಿ ಗಾಳಿ ಬೀಸುತ್ತಿದೆ. ಮಳೆಯ ಪ್ರಮಾಣವೂ ಅಧಿಕವಾಗಿದೆ. ಇದರಿಂದ ಜನರು ಭಯಭೀತರಾಗಿದ್ದಾರೆ. ಕೊಟ್ಟಿಗೆಹಾರ, ಬಾಳೂರು, ಕಳಸ ಸುತ್ತಮುತ್ತಲಿನ ಜನರಲ್ಲಿ ಆತಂಕ ಹೆಚ್ಚಾಗಿದೆ. ಮೂಡಿಗೆರೆ, ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದೆ.

ಭಾರೀ ಗಾಳಿ:

ಕೊಪ್ಪ ತಾಲೂಕಿನಾದ್ಯಂತ ಭಾನುವಾರ ಮಧ್ಯ ರಾತ್ರಿ ಆರಂಭವಾದ ಮಳೆ ಬುಧವಾರವೂ ಮುಂದುವರೆದಿತ್ತು. ಅತೀ ವೇಗವಾದ ಗಾಳಿ ಬೀಸುತ್ತಿರುವುದರಿಂದ ವಿದ್ಯುತ್‌ ಲೈನ್‌ ಮೇಲೆ ಮರಗಳು ಬಿದ್ದು ಕಳೆದ ಎರಡು ದಿನಗಳಿಂದ ಸಂಪರ್ಕ ಇಲ್ಲದಂತಾಗಿದೆ. ಯುಪಿಎಸ್‌, ಇಟರ್‌ ನೆಟ್‌ ಸ್ಥಗಿತಗೊಂಡ ಕಾರಣ ಸೈಬರ್‌ ಸಹಿತ ಕಂಪ್ಯೂಟರ್‌ ಸೆಂಟರ್‌ಗಳಿಗೂ ತೊಂದರೆಯಾಗಿದೆ. ತಾಲ್ಲೂಕಿನ ಹರಿಹರಪುರ, ಕೊಗ್ರೆ, ಬಸ್ರಿಕಟ್ಟೆ, ಜಯಪುರ, ನಿಲುವಾಗಿಲು, ಶಾನುವಳ್ಳಿ, ಸೇರಿದಂತೆ ಇತರೆಡೆ ಮಳೆಯೊಂದಿಗೆ ಭಾರೀ ಥಂಡಿ ಗಾಳಿ ಬೀಸುತ್ತಿದೆ. ಕೆರೆಕಟ್ಟೆ, ಹಳ್ಳಗಳು ತುಂಬಿ ಹರಿಯುತ್ತಿವೆ.

ಮುಂದುವರಿದ ಗಾಳಿ ಮಳೆಯ ಅಬ್ಬರ:

ಶೃಂಗೇರಿ ಬುಧವಾರವೂ ಗಾಳಿ ಮಳೆಯ ಆರ್ಭಟ ತಾಲೂಕಿನಲ್ಲಿ ಮುಂದುವರೆದಿತ್ತು. ಗಾಳಿಯ ಆರ್ಭಟಕ್ಕೆ ರಸ್ತೆಯ ಬದಿಯಲ್ಲಿ ಮರಗಳು ಉರುಳಿ ಬೀಳುತ್ತಿವೆ. ಅಡಕೆ, ಬಾಳೆ ತೋಟಗಳಲ್ಲಿ ಮರಗಳು ಉರುಳಿ ಬೀಳುತ್ತಿದ್ದು, ವ್ಯಾಪಕ ಹಾನಿಯಾಗುತ್ತಿವೆ. ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದು ಪ್ರವಾಹದ ಭೀತಿ ಎದುರಾಗುತ್ತಿದೆ. ಅಪಾಯದ ಮಟ್ಟಮೀರಿ ಹರಿಯುತ್ತಿದೆ. ಶ್ರೀಮಠದ ಪುರಾಣ ಪ್ರಸಿದ್ದ ಕಪ್ಪೆಶಂಕರ ದೇಗುಲ ಮುಳುಗಡೆಯಾಗಿಯೇ ಇದೆ. ಗಾಂಧಿ ಮೈದಾನದ ಸಮೀಪದಲ್ಲಿಯೇ ನೀರು ಹರಿಯುತ್ತಿದ್ದು ಇದೇ ರೀತಿ ಮಳೆ ಮುಂದುವರೆದರೆ ಈ ಪ್ರದೇಶ ಮುಳುಗಡೆಯಾಗಲಿದೆ. ಕೆರೆಕಟ್ಟೆ, ಕಿಗ್ಗಾ, ನೆಮ್ಮಾರು, ತೆಕ್ಕೂರು, ಮೆಣಸೆ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕ ಇನ್ನೂ ಸರಿಯಾಗಿಲ್ಲ. ಮೊಬೈಲ್‌, ದೂರವಾಣಿ ಸಂಪರ್ಕ ಸ್ಥಗಿತಗೊಂಡಿವೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ಈ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪಟ್ಟಣದಲ್ಲಿಯೂ ಮಂಗಳವಾರ ಬೆಳಿಗ್ಗೆಯಿಂದ ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡಿರುವುದರಿಂದ ಜನರು ಪರದಾಡುತ್ತಿದ್ದಾರೆ.

ಬಹುತೇಕ ಗ್ರಾಮಗಳು ಕತ್ತಲಲ್ಲಿ:

ನರಸಿಂಹರಾಜಪುರದಲ್ಲಿ ಭಾರೀ ಗಾಳಿ ಹಾಗೂ ಮಳೆಗೆ ತಾಲೂಕಿನ ವಿವಿಧೆಡೆ 67 ವಿದ್ಯುತ್‌ ಕಂಬಗಳು ಉರುಳಿ ಬಿದ್ದಿದ್ದು ಪಟ್ಟಣ ಬಿಟ್ಟರೆ ಬಹುತೇಕ ತಾಲೂಕಿನ ಎಲ್ಲಾ ಗ್ರಾಮಗಳು ಕತ್ತಲಲ್ಲಿ ಮುಳುಗಿವೆ. ಗಾಳಿಯ ಹೊಡೆತಕ್ಕೆ ಮುತ್ತಿನಕೊಪ್ಪ, ಶೆಟ್ಟಿಕೊಪ್ಪ, ಗುಬ್ಬಿಗಾ, ವಗಡೆ, ಮಡಬೂರು, ಮಲ್ಲಂದೂರು, ಹೊನ್ನೇಕೊಡಿಗೆ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಬರುವ ವಿದ್ಯುತ್‌ ಕಂಬಗಳು ತುಂಡಾಗಿ ಉರುಳಿ ಬಿದ್ದಿವೆ. ಮೆಸ್ಕಾಂ ನೌಕರರು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರೂ ಗಾಳಿ ಮುಂದುವರಿಯುತ್ತಿರುವುದರಿಂದ ಗ್ರಾಮಗಳಿಗೆ ವಿದ್ಯುತ್‌ ಬರಲು 2 ರಿಂದ 3 ದಿನಗಳಾದರೂ ಬೇಕಾಗಬಹುದು ಎಂದು ಕೆಇಬಿ ಎಂಜಿನಿಯರ್‌ ಗೌತಮ್‌ ತಿಳಿಸಿದ್ದಾರೆ.

ಗಾಳಿಯ ಹೊಡೆತಕ್ಕೆ ನಾಗಲಾಪುರ ಗ್ರಾಮದ ಮುಂಡೊಳ್ಳಿಯ ಶಿವಣ್ಣ ಎಂಬುವರ ಮನೆಯ ಮೇಲೆ ಮಂಗಳವಾರ ರಾತ್ರಿ ಮರವೊಂದು ಉರುಳಿ ಬಿದ್ದಿದೆ. ಮನೆಯಲ್ಲಿದ್ದ ರಂಗಪ್ಪ ಎಂಬುವರಿಗೆ ಪೆಟ್ಟಾಗಿದ್ದು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಶೆಟ್ಟಿಕೊಪ್ಪ ಸಮೀಪದ ನವ ಗ್ರಾಮದಲ್ಲಿ ಭಾಗ್ಯ ಎಂಬುವರಿಗೆ ಸೇರಿದ ಮನೆಯ ಮೇಲೆ ಮರ ಉರುಳಿ ಬಿದ್ದಿದೆ. ಆದರೆ, ಮನೆಯ ಒಳಗೆ ಯಾರೂ ಇರದೆ ಇರುವುದರಿಂದ ಅಪಾಯ ತಪ್ಪಿದೆ. ಗಾಳಿಯ ಹೊಡೆತಕ್ಕೆ ಶೆಟ್ಟಿಕೊಪ್ಪ ಸಮೀಪದ ಬಣಗಿ, ಮಂಜಿನಕೊಪ್ಪ, ಕರುಗುಂದ, ಆರಂಬಳ್ಳಿ ಮುಂತಾದ ಗ್ರಾಮಗಳಲ್ಲಿ ಅಡಿಕೆ ಮರ, ಬಾಳೆ ಗಿಡಗಳು ಉರುಳಿ ಬಿದ್ದಿದ್ದು ರೈತರಿಗೆ ಲಕ್ಷಾಂತರ ರುಪಾಯಿ ನಷ್ಟಉಂಟಾಗಿದೆ. ಗಾಳಿಯ ರಬಸದಿಂದ ಜನರು ಮನೆಯ ಹೊರಗೆ ಬಾರದ ವಾತಾವರಣ ಏರ್ಪಟ್ಟಿದೆ. ಥಂಡಿ ಗಾಳಿ ಬೀಸುತ್ತಿದೆ.

ನೆಲಕ್ಕೆ ಉರುಳಿದ ಅಡಕೆ ಮರಗಳು:

ತರೀಕೆರೆ ತಾಲೂಕಿನಲ್ಲಿ ಬಲವಾಗಿ ಗಾಳಿ ಬೀಸುತ್ತಿದೆ. ಇದರಿಂದ ಗಂಗೂರು ಮತ್ತು ಉಡೇವಾ ಗ್ರಾಮಗಳಲ್ಲಿ ಅಡಕೆ ಮರ ಮತ್ತು ಸಿಲ್ವರ್‌ ಮರಗಳು ನೆಲಕ್ಕೆ ಉರುಳಿವೆ. ಉಡೇವಾ ಗ್ರಾಮದ ಚಂದ್ರನಾಯ್ಕ ಅವರಿಗೆ ಸೇರಿದ 15 ಅಡಕೆ ಮರಗಳು, 5 ಸಿಲ್ವರ್‌ ಮರಗಳು, ಮೂರ್ತಪ್ಪ ಅವರಿಗೆ ಸೇರಿದ 8 ಅಡಕೆ ಮರ, 8 ಹೆಬ್ಬೇವು ಮರಗಳು ನೆಲಕ್ಕುರುಳಿದೆ. ಪಟ್ಟಣದ ಎಪಿಎಂಸಿ ಬಳಿ ಮರವೊಂದು ಬಿದ್ದು ಕ್ಯಾಂಟಿನ್‌ ಹಾಗೂ ಅಂಗಡಿಯೊಂದು ಜಖಂ ಆಗಿದೆ. ಕೆಲ ಸಮಯ ಸಾಧಾರಣವಾಗಿ ಮತ್ತು ಕೆಲ ಸಮಯ ಸೋನೆ ಮಳೆ ಸುರಿದಿದ್ದು ಥಂಡಿ ಗಾಳಿ ಬೀಸುತ್ತಿದೆ.

ಮನೆ ಮೇಲೆ ಮರ ಬಿದ್ದು ಹಾನಿ:

ಬಾಳೆಹೊನ್ನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯ ಅಬ್ಬರ ಮೂರನೇ ದಿನವೂ ಮುಂದುವರಿದಿದ್ದು, ಹೋಬಳಿ ವ್ಯಾಪ್ತಿಯಲ್ಲಿ ಒಂದು ಮನೆಯ ಮೇಲೆ ಮರಬಿದ್ದು ಹಾನಿಯಾಗಿದೆ. ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಸೀಕೆ ಗ್ರಾಮದ ಮನೆಯೊಂದರ ಮೇಲೆ ಗಾಳಿ ಮಳೆಗೆ ಮರಬಿದ್ದು ಭಾಗಶಃ ಹಾನಿಯಾಗಿದ್ದು ಮನೆಯಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ. ಮಾಗುಂಡಿ ಸಮೀಪದ ಕಳಸ-ಹೊರನಾಡು ರಸ್ತೆಯ ಮಹಲ್ಗೋಡು ಸೇತುವೆ ಮೇಲೆ ಬುಧವಾರ ಬೆಳಿಗ್ಗೆ ನೀರು ಉಕ್ಕಿ ಹರಿದ ಪರಿಣಾಮ ಎರಡು ಗಂಟೆಗೂ ಅಧಿಕ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಸೋಮವಾರ ರಾತ್ರಿ ಕಡಿತಗೊಂಡ ವಿದ್ಯುತ್‌ ಸಂಪರ್ಕ ಬುಧವಾರ ಸಂಜೆಯವರೆಗೆ ಬಂದಿರಲಿಲ್ಲ. ಬಾಳೆಹೊನ್ನೂರು ಮೆಸ್ಕಾಂ ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ವಿದ್ಯುತ್‌ ಕಂಬಗಳು ಧರೆಗುರುಳಿವೆ. ವಿದ್ಯುತ್‌ ಇಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್‌ ನೆಟ್‌ವರ್ಕ್ ಸಹ ಕಡಿತಗೊಂಡಿದೆ. ಭದ್ರಾನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಏರಿಕೆಯಾಗುತ್ತಲೇ ಇದ್ದು ಭದ್ರಾನದಿ ದಡದಲ್ಲಿನ ಕೆಲ ತೋಟ ಹಾಗೂ ಗದ್ದೆಗೆ ಸ್ವಲ್ಪಮಟ್ಟಿನ ನೀರುನುಗ್ಗಿದೆ. ಪಟ್ಟಣದ ಡೋಬಿಹಳ್ಳದಲ್ಲೂ ಸಹ ನೀರಿನ ಹರಿವು ಜಾಸ್ತಿಯಾಗಿದೆ. ನಿರಂತರ ಮಳೆಯಿಂದಾಗಿ ಜನಸಂಚಾರ ವಿರಳವಾಗಿತ್ತು.


 

Latest Videos
Follow Us:
Download App:
  • android
  • ios