ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೈಲ್ ಮರ್ಚಡ್ ಗ್ರಾಮದಲ್ಲಿ ನಡೆದ ಬಯಲಾಟ ಕಾರ್ಯಕ್ರಮದಲ್ಲಿ ಸಮುದಾಯ ಭವನದ ಸಿಮೆಂಟ್ ನಾಮಫಲಕ ಕುಸಿದು ಬಿದ್ದಿದೆ. ಈ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿ-ಮಗಳ ಕಾಲುಗಳು ತುಂಡಾಗುವುದು ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಯಚೂರು (ಏ.18): ಜಿಲ್ಲೆಯ ಮಾನ್ವಿ ತಾಲೂಕಿನ ಬೈಲ್ ಮರ್ಚಡ್ ಗ್ರಾಮದಲ್ಲಿ ರಾತ್ರಿ ನಡೆದ ಬಯಲಾಟ ಕಾರ್ಯಕ್ರಮವು ರಕ್ತಸಿಕ್ತವಾಗಿ ಅಂತ್ಯಗೊಂಡಿದೆ. ಬಯಲಾಟ ನೋಡಲು ಬಂದಿದ್ದವರ ಮೇಲೆ ಸಮುದಾಯ ಭವನದ ಬೃಹತ್ ಸಿಮೆಂಟ್ ನಾಮಫಲಕ ಕುಸಿದು ಬಿದ್ದ ಪರಿಣಾಮ, ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ.
ದುರ್ಘಟನೆಯಲ್ಲಿ 8 ವರ್ಷದ ಬಾಲಕ ವಿಶ್ವನಾಥ್ ಹಾಗೂ ಕೇವಲ ಒಂದೂವರೆ ವರ್ಷದ ಹಸುಗೂಸು ಸನ್ವಿತಾ ಸಿಮೆಂಟ್ ಬೋರ್ಡ್ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಪ್ರಾಣ ಚೆಲ್ಲಿದ್ದಾರೆ. ಇಡೀ ಗ್ರಾಮವೇ ಸಂಭ್ರಮದಿಂದ ಬಯಲಾಟ ವೀಕ್ಷಿಸುತ್ತಿದ್ದಾಗ ಕ್ಷಣಾರ್ಧದಲ್ಲಿ ಈ ಸಾವು ಸಂಭವಿಸಿದ್ದು, ಹಬ್ಬದ ಮನೆಗಳಲ್ಲಿ ಸೂತಕದ ಛಾಯೆ ಆವರಿಸಿದೆ.
ತಾಯಿ-ಮಗಳ ಕಾಲುಗಳು ಕಟ್!
ನಾಮಫಲಕ ಕುಸಿದ ತೀವ್ರತೆಗೆ ಕೆಳಗೆ ಕುಳಿತಿದ್ದವರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಬಸಮ್ಮ (28) ಎಂಬುವವರ ಒಂದು ಕಾಲು ಕತ್ತರಿಸಲ್ಪಟ್ಟಿದ್ದರೆ, ಅವರ ಮಗಳಾದ ಲಕ್ಷ್ಮಿ (17) ಎಂಬಾಕೆಯ ಎರಡೂ ಕಾಲುಗಳು ತುಂಡಾಗಿವೆ. ಗಂಭೀರವಾಗಿ ಗಾಯಗೊಂಡಿರುವ ವಿಶಾಲಮ್ಮ (20) ಮತ್ತು ಯಲ್ಲಮ್ಮ (4) ಸೇರಿದಂತೆ ನಾಲ್ವರನ್ನು ರಾಯಚೂರಿನ ಓಪೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದುರಂತ ಸಂಭವಿಸಿದ್ದು ಹೇಗೆ?
ಗ್ರಾಮದ ಸಮುದಾಯ ಭವನದ ಆವರಣದಲ್ಲಿ ನಿನ್ನೆ ರಾತ್ರಿ ಬಯಲಾಟ ನಡೆಯುತ್ತಿತ್ತು. ಗ್ರಾಮಸ್ಥರೆಲ್ಲರೂ ಸಮುದಾಯ ಭವನದ ಮುಂಭಾಗದಲ್ಲಿ ಕುಳಿತು ಆಟ ವೀಕ್ಷಿಸುತ್ತಿದ್ದರು. ಈ ವೇಳೆ ಕಟ್ಟಡದ ಮೇಲ್ಭಾಗದಲ್ಲಿದ್ದ ಭಾರಿ ತೂಕದ ಸಿಮೆಂಟ್‌ನ ನಾಮಫಲಕ (ಬೋರ್ಡ್) ಇದ್ದಕ್ಕಿದ್ದಂತೆ ಕುಸಿದು ಕೆಳಗೆ ಕುಳಿತಿದ್ದವರ ಮೇಲೆ ಬಿದ್ದಿದೆ. ಕಟ್ಟಡದ ಕಳಪೆ ಕಾಮಗಾರಿಯೇ ಈ ದುರ್ಘಟನೆಗೆ ಕಾರಣ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸ್ಥಳಕ್ಕೆ ಮಾನ್ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿಷಾದ ವ್ಯಕ್ತಪಡಿಸಿದ ಶಾಸಕ
ದುರಂತದ ವಿಷಯ ತಿಳಿಯುತ್ತಿದ್ದಂತೆಯೇ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಕೂಡಲೇ ಓಪೆಕ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ನಂತರ ಮಾನ್ವಿ ತಾಲೂಕು ಆಸ್ಪತ್ರೆಗೆ ತೆರಳಿ ಮೃತ ಮಕ್ಕಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಶಾಸಕರು, "ಗ್ರಾಮಸ್ಥರೆಲ್ಲರೂ ಕುಳಿತು ಬಯಲಾಟ ನೋಡುತ್ತಿದ್ದಾಗ ಏಕಾಏಕಿ ನಾಮಫಲಕ ಬಿದ್ದು ಇಬ್ಬರು ಮಕ್ಕಳ ಸಾವು ಸಂಭವಿಸಿರುವುದು ಅತ್ಯಂತ ನೋವಿನ ಸಂಗತಿ. ಗ್ರಾಮದ ಇತಿಹಾಸದಲ್ಲಿ ಇಂತಹ ಘಟನೆ ಎಂದೂ ಸಂಭವಿಸಿರಲಿಲ್ಲ, ಇದು ಆಕಸ್ಮಿಕವಾಗಿ ನಡೆದ ದುರ್ಘಟನೆಯಾಗಿದೆ. ಮೃತರ ಕುಟುಂಬಸ್ಥರಿಗೆ ಹಾಗೂ ಗ್ರಾಮಸ್ಥರಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ" ಎಂದು ವಿಷಾದ ವ್ಯಕ್ತಪಡಿಸಿದರು.


