ರಾಯಚೂರಿನ ಸ್ಮಶಾನದಲ್ಲಿ ಹೂತ ಶವಗಳನ್ನು ಹೊರತೆಗೆದು ಬುರುಡೆ ಮತ್ತು ಎಲುಬುಗಳನ್ನು ಕಳ್ಳತನ ಮಾಡುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವೋದಯ ವೈದ್ಯಕೀಯ ಕಾಲೇಜಿನ ಸಿಬ್ಬಂದಿಗೆ ಹಣದ ಆಸೆಗೆ ಈ ಅಸ್ತಿಪಂಜರಗಳನ್ನು ಮಾರಾಟ ಮಾಡುತ್ತಿರುವುದು ಪೊಲೀಸ್ ವಿಚಾರಣೆಯಲ್ಲಿ ಬಯಲಾಗಿದೆ.

 ರಾಯಚೂರು (ಅ.25): ಸ್ಮಶಾನದಲ್ಲಿ ಹೂತ ಶವಗಳನ್ನು ಹೊರಗಡೆ ತೆಗೆದು ಅವುಗಳ ಬುರುಡೆ, ಎಲಬು ಹಾಗೂ ಇತರೆ ಭಾಗಗಳನ್ನು ಕಳ್ಳತನ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಮೂವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ನವೋದಯ ಆಸ್ಪತ್ರೆಗೆ ಬುರುಡೆ ನೀಡುತ್ತಿರುವುದು ಬಯಲು

ನಗರದ ಸ್ಮಶಾನದಲ್ಲಿ ಕೆಲಸ ಮಾಡುತ್ತಿರುವ ಹನುಮಯ್ಯ ತಳವಾರ, ನವೋದಯ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ರಾಜು ಮತ್ತು ಅಫ್ಸರ್ ಅವರನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಸಮಯದಲ್ಲಿ ಹನುಮಯ್ಯ ತಳವಾರ ಹೂತ ಶವಗಳನ್ನು ಹೊರಗಡೆ ತೆಗೆದು ನವೋದಯ ವೈದ್ಯಕೀಯ ಕಾಲೇಜಿನ ಸಿಬ್ಬಂದಿಗೆ ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಹೂತ ಶವಗಳ ಕಳ್ಳ ಸಾಗಾಟ!

ಹಲವು ದಿನಗಳಿಂದ ಹೂತ ಶವಗಳ ಕಳ್ಳಸಾಗಾಟವು ಸಾಗಿರುವುದರ ಕುರಿತು ಗಮನಿಸಿದ ಸ್ಥಳೀಯರು ನೇತಾಜಿನಗರ ಠಾಣೆಗೆ ದೂರು ನೀಡಿದ್ದು, ಅದನ್ನಾಧರಿಸಿ ಪೊಲೀಸರು ರುದ್ರಭೂಮಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಈ ವೇಳೆ ಮನುಷ್ಯನ ಬುರುಡೆ, ಎಲುಬು ಹಾಗೂ ದೇಹದ ಇತರೆ ಭಾಗಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದ್ದರಿಂದ ಮೂರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಸ್ಮಶಾನ ಕಾಯುವವನಿಗೆ ಹಣ ನೀಡಿ ಮೃತದೇಹ ಖರೀದಿಸುವ ಆಸ್ಪತ್ರೆ!

ಸ್ಥಳಕ್ಕೆ ಬಂದ ಪೊಲೀಸರು ನವೋದಯ ವೈದ್ಯಕೀಯ ಕಾಲೇಜಿನ ಇಬ್ಬರು ಸಿಕ್ಕಿಹಾಕಿಕೊಂಡಿದ್ದು, ಸ್ಮಶಾನ ಕಾಯುವ ವ್ಯಕ್ತಿಗೆ ಹಣ ನೀಡಿ ಅಸ್ತಿಪಂಜರ ಹಾಗೂ ಬಿಡಿ ಭಾಗಗಳನ್ನು ಪಡೆದು ಅದನ್ನು ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೆ ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ.