ಬೆಂಗಳೂರು [ಜು.31]:  ಗೋವಾ ಮಾದರಿಯಲ್ಲಿ ಬೆಂಗಳೂರು ನಗರವನ್ನು ‘ರೇಬಿಸ್‌ ಮುಕ್ತ’ ಮಾಡಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.

ರೇಬಿಸ್‌ ಒಂದು ಗಂಭೀರವಾದ ಸೋಂಕಾಗಿದ್ದು, ಮಾರಣಾಂತಿಕ ರೋಗವಾಗಿದೆ. ಹೆಚ್ಚಾಗಿ ನಾಯಿ ಕಡಿತದಿಂದ ಬರುವ ರೋಗವಾಗಿದೆ. ಆದರೆ, ಈ ರೇಬಿಸ್‌ ವೈರಾಣು ನಾಯಿಗಳಲ್ಲಿ ಇರುವುದಿಲ್ಲ. ರೇಬಿಸ್‌ ಸೋಂಕಿತ ಪ್ರಾಣಿಯಿಂದ ಕಚ್ಚಿಸಿಕೊಂಡಾಗ ಅಥವಾ ರೇಬಿಸ್‌ ಹೊಂದಿದ ಪ್ರಾಣಿಗಳಿಂದ ಯಾವುದೇ ಜೀವಿಗಳ ರಕ್ತಕ್ಕೆ ವೈರಾಣು ಪ್ರವೇಶಿಸಿದಾಗ ಈ ರೋಗ ಹರಡುತ್ತದೆ. ಹಾಗಾಗಿ, ನಗರದಲ್ಲಿರುವ ನಾಯಿಗಳಿಗೆ ರೇಬಿಸ್‌ ರೋಗ ನಿರೋಧಕ ಲಸಿಕೆ ಹಾಕುವ ಮೂಲಕ ಬೆಂಗಳೂರು ನಗರವನ್ನು ರೇಬಿಸ್‌ ರೋಗ ನಿಯಂತ್ರಣಕ್ಕೆ ಬಿಬಿಎಂಪಿ ಸಿದ್ಧಗೊಂಡಿದೆ.

ರೇಬಿಸ್‌ ಮುಕ್ತ ಗೊಳಿಸುವ ನಿಟ್ಟಿನಲ್ಲಿ ಗೋವಾ ಸರ್ಕಾರ ಕೆಲವು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದೆ. ಹಾಗಾಗಿ, ಬಿಬಿಎಂಪಿ ಅಧಿಕಾರಿಗಳು ಗೋವಾಗೆ ತೆರಳಿ ಅಧ್ಯಯನ ನಡೆಸಿ ರೇಬಿಸ್‌ ನಿಯಂತ್ರಣಕ್ಕೆ ಮಾಹಿತಿ ಸಂಗ್ರಹಿಸಿದ್ದಾರೆ. ಗೋವಾ ಅತ್ಯಂತ ಚಿಕ್ಕ ರಾಜ್ಯವಾಗಿದ್ದು, ಇಡೀ ರಾಜ್ಯದಲ್ಲಿ 1.40 ಲಕ್ಷ ನಾಯಿಗಳಿವೆ. ಆದರೆ, ಬೆಂಗಳೂರಿನಲ್ಲಿಯೇ 2012ರ ಗಣತಿ ಪ್ರಕಾರ 1.85 ಲಕ್ಷ ನಾಯಿಗಳಿರುವುದರಿಂದ ಹೇಗೆ ನಗರದಲ್ಲಿ ಅನುಷ್ಠಾನಗೊಳಿಸುವುದು ಎಂಬುದರ ಬಗ್ಗೆ ಪಾಲಿಕೆ ಪಶುಪಾಲನಾ ವಿಭಾಗದ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಅದಕ್ಕಾಗಿ ಆ.2ರಂದು ಸಭೆ ನಡೆಸಿ ಹಿರಿಯ ಅಧಿಕಾರಿಗಳಿಂದ ಸಲಹೆ ಪಡೆಯಲು ತೀರ್ಮಾನಿಸಿದೆ.

ಮೊದಲನೇ ಹಂತದಲ್ಲಿ ರೇಬಿಸ್‌ ರೋಗದ ಬಗ್ಗೆ ಜಾಗೃತಿ ಶಿಬಿರಗಳನ್ನು ಶಾಲಾ-ಕಾಲೇಜು ಸೇರಿದಂತೆ ಇತರೆಡೆ ಹಮ್ಮಿಕೊಳ್ಳುವುದು. ಮೂರು ವರ್ಷ ನಿರಂತರವಾಗಿ ನಗರದ ಬೀದಿ ಹಾಗೂ ಸಾಕು ನಾಯಿಗಳಿಗೆ ಕಡ್ಡಾಯವಾಗಿ ರೇಬಿಸ್‌ ರೋಗ ನಿರೋಧಕ ಲಸಿಕೆ ಹಾಕುವುದು. ಜತೆಗೆ ಸಂತಾನಹರಣ ಚಿಕಿತ್ಸೆ ನೀಡುವುದು ಸೇರಿದಂತೆ ವಿವಿಧ ಕಾರ್ಯಕ್ರಮ ಹಾಕಿಕೊಂಡು ಕೆಲಸ ಮಾಡುತ್ತಿದೆ. ಇದನ್ನೇ ನಗರದಲ್ಲಿ ಅಳವಡಿಕೆಗೆ ಪಾಲಿಕೆ ಪಶುಸಂಗೋಪನಾ ವಿಭಾಗ ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿ ಅತ್ಯಂತ ದೊಡ್ಡದಾಗಿರುವುದರಿಂದ ಸ್ಥಳೀಯ ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆಗಳ ಸಹಕಾರ ಪಡೆಯಲೂ ಚಿಂತನೆ ನಡೆಸಿದೆ.

ಸಾಕು ನಾಯಿಗಳಿಗೂ ಉಚಿತ ಲಸಿಕೆ

ರೇಬಿಸ್‌ ರೋಗ ನಿರೋಧಕ ಲಸಿಕೆಯನ್ನು ಕೇವಲ ಬೀದಿ ನಾಯಿಗಳಿಗೆ ಮಾತ್ರವಲ್ಲ. ಸಾಕು ನಾಯಿಗಳಿಗೂ ಪಾಲಿಕೆ ಉಚಿತವಾಗಿ ಹಾಕುವುದಕ್ಕೆ ತೀರ್ಮಾನಿಸಿದೆ. ವರ್ಷಕ್ಕೆ ಒಂದರಂತೆ ಮೂರು ವರ್ಷ ನಿರಂತರವಾಗಿ ಲಸಿಕೆ ಹಾಕುವುದು. ಈಗಾಗಲೇ ಲಸಿಕೆ ವ್ಯವಸ್ಥೆ ಸೇರಿದಂತೆ 15 ದಿನಗಳಲ್ಲಿ ರೇಬಿಸ್‌ ಮುಕ್ತ ಬೆಂಗಳೂರು ಕಾರ್ಯಕ್ರಮ ಅನುಷ್ಠಾನಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪಶುಪಾಲನಾ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಮಿಷನ್‌ ರೇಬಿಸ್‌’

ವಿಶ್ವ ಆರೋಗ್ಯಸಂಸ್ಥೆ 2025ರಿಂದ 2030ರ ಒಳಗಾಗಿ ವಿಶ್ವವನ್ನು ರೇಬಿಸ್‌ ರೋಗ ಮುಕ್ತವಾಗಿಸಲು ‘ಮಿಷನ್‌ ರೇಬಿಸ್‌’ ಯೋಜನೆ ಹಾಕಿಕೊಂಡಿದೆ. ಈ ನಿಟ್ಟನಲ್ಲಿ ಗೋವಾದ ವಲ್ಡ್‌ ವೈಡ್‌ ವೆಟನರಿ ಸವೀರ್‍ಸ್‌ ಸೆಂಟರ್‌ ಭಾರತದಲ್ಲಿ ರೇಬಿಸ್‌ ಮುಕ್ತ ಕಾರ್ಯಕ್ರಮ ಹಾಕಿಕೊಂಡಿದೆ. ನಗರದಲ್ಲಿ ನಾಯಿ ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಗೋವಾದ ಈ ಸೆಂಟರ್‌ನಲ್ಲಿ ಎರಡು ದಿನದ ತರಬೇತಿ ಪಡೆದು, ಇದೀಗ ಬೆಂಗಳೂರಿನಲ್ಲಿ ರೇಬಿಸ್‌ ಮುಕ್ತಗೊಳಿಸುವುದಕ್ಕೆ ಮುಂದಾಗಿದ್ದಾರೆ.

ನಗರದಲ್ಲಿ ನಾಯಿ ದಾಳಿ ಪ್ರಕರಣ ತಡೆಗಟ್ಟುವುದರ ಜತೆಗೆ ರೇಬಿಸ್‌ ಮುಕ್ತವಾಗಿಸಲು ಬಿಬಿಎಂಪಿ ಈ ಕಾರ್ಯಕ್ರಮ ಹಾಕಿಕೊಂಡಿದೆ. ಮೂರು ವರ್ಷ ಸತತವಾಗಿ ಕೆಲಸ ಮಾಡಿದರೆ ನಗರದಲ್ಲಿ ನಾಯಿ ದಾಳಿ ಮತ್ತು ರೇಬಿಸ್‌ ರೋಗ ಎರಡನ್ನು ನಿಯಂತ್ರಿಸಬಹುದು.

-ಶಶಿಕುಮಾರ್‌, ಜಂಟಿ ನಿರ್ದೇಶಕರು, ಪಾಲಿಕೆ ಪಶುಪಾಲನಾ ವಿಭಾಗ.