ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶೀಘ್ರ ತಡೆಗೋಡೆ: ಸಂಸದ ಮಂಜುನಾಥ್

ತಾಲೂಕಿನ ಅರಣ್ಯ ವ್ಯಾಪ್ತಿ ಸಮೀಪದ ಗಡಿ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಿಸಲು ಶಾಶ್ವತ ತಡೆಗೋಡೆಗಳನ್ನು ನಿರ್ಮಿಸುವಂತೆ ವಲಯ ಅರಣ್ಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು. 

Quick barrier to control wild elephant menace Says MP Dr CN Manjunath gvd

ಕನಕಪುರ (ಆ.25): ತಾಲೂಕಿನ ಅರಣ್ಯ ವ್ಯಾಪ್ತಿ ಸಮೀಪದ ಗಡಿ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಿಸಲು ಶಾಶ್ವತ ತಡೆಗೋಡೆಗಳನ್ನು ನಿರ್ಮಿಸುವಂತೆ ವಲಯ ಅರಣ್ಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು. ನಗರದಲ್ಲಿನ ವಲಯ ಅರಣ್ಯ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಆವರಣದಲ್ಲಿ ಸಸಿ ನೆಟ್ಟು, ಕಾಡಾನೆಗಳ ಹಾವಳಿ ಹಾಗೂ ನಿಯಂತ್ರಣದ ಬಗ್ಗೆ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳ ಜೊತೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾತನೂರು ಅರಣ್ಯ ವಲಯ ಹಾಗೂ ಚನ್ನಪಟ್ಟಣ, ಕನಕಪುರ ಅರಣ್ಯ ವಲಯದ ಗ್ರಾಮಗಳ ಮೇಲೆ ಕಾಡಾನೆಗಳು ನಿರಂತರ ದಾಳಿ ನಡೆಸುತ್ತಿರುವುದರಿಂದ ಅಮಾಯಕ ರೈತರು ಮತ್ತು ಗ್ರಾಮಸ್ಥರ ಸಾವು ಹಾಗೂ ಬೆಳೆಗಳ ನಾಶದಿಂದಾಗಿ ಈ ಭಾಗದ ಜನ ಪರಿತಪಿಸುತ್ತಿದ್ದಾರೆ. ಆನೆ ದಾಳಿಯಿಂದ ನೊಂದ ರೈತರಿಗೆ ಈವರೆಗೂ 17 ಕೋಟಿ ರು.ಗಳ ಪರಿಹಾರ ನೀಡಲಾಗಿದೆ ಎಂದರು. ಬನ್ನೇರುಘಟ್ಟದಿಂದ ಚನ್ನಪಟ್ಟಣದವರೆಗೂ ಅರಣ್ಯ ಪ್ರದೇಶವಿದ್ದು, ಇದರ ವ್ಯಾಪ್ತಿ 280 ಕಿಮೀ, ಈಗಾಗಲೇ 80 ಕಿಮೀ ಗಡಿ ಸಮೀಪ ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಿಸಲಾಗಿದೆ, ಉಳಿದ 200 ಕಿಮೀ ತಡೆಗೋಡೆ ನಿರ್ಮಿಸಲು 300 ಕೋಟಿ ರು. ಖರ್ಚಾಗಲಿದೆ, ಇದರಲ್ಲಿ ರಾಜ್ಯ ಸರ್ಕಾರದ ಪಾಲು ಸಹ ಇರುವುದಾಗಿ ತಿಳಿಸಿದರು,

ರೈಲು ಕಂಬಿಗಳನ್ನು ಮಾರುಕಟ್ಟೆಯಲ್ಲಿ ಕೊಂಡಲ್ಲಿ ದುಪ್ಪಟ್ಟು ಹಣ ನೀಡಬೇಕಾಗುತ್ತದೆ, ಇದರಿಂದ ಹೆಚ್ಚಿನ ಹಣ ಖರ್ಚಾಗುವುದನ್ನು ತಪ್ಪಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ ಸಚಿವ ಸೋಮಣ್ಣ ಅವರೊಂದಿಗೆ ಚರ್ಚಿಸಿ ಮಾರುಕಟ್ಟೆಯ ಶೇಕಡಾ 50 ರಷ್ಟು ಕಡಿಮೆ ದರದಲ್ಲಿ ಕಂಬಿಗಳನ್ನು ಒದಗಿಸುವಂತೆ ಮನವಿ ಮಾಡಿದ್ದರಿಂದ ಕೇಂದ್ರ ಸಚಿವರು ಒಪ್ಪಿಗೆ ನೀಡಿದ್ದಾರೆ, ಮುಂದಿನ ದಿನಗಳಲ್ಲಿ ಮಾನವ ಹಾಗೂ ಕಾಡು ಪ್ರಾಣಿಗಳ ನಡುವಿನ ಸಂಘರ್ಷ ತಪ್ಪಿಸಲು ಶಾಶ್ವತ ತಡೆಗೋಡೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು. ನಂತರ ಹಾರೋಹಳ್ಳಿ ಹೋಬಳಿಯ ತಟ್ಟೆಕೆರೆ, ಕೋಡಿಹಳ್ಳಿ ಹೋಬಳಿಯ ಕಾಡುಶಿವನಹಳ್ಳಿ, ಜವಳಗೆರೆ ಹುಣಸನಹಳ್ಳಿ, ಪುಟ್ಟದಾಸುದೊಡ್ಡಿ, ಬನ್ನಿಮಕೊಡ್ಲು, ಕೊಳಗೊಂಡನಹಳ್ಳಿ ಹಾಗೂ ಕಸಬಾ ಹೋಬಳಿಯ ಗೌಡಹಳ್ಳಿ ಅರಣ್ಯ ಗಡಿ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡರು.

ಬಡ ಕುಟುಂಬಗಳ ಆರ್ಥಿಕ ಸದೃಢತೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿ: ಮಾಜಿ ಸಚಿವ ಎಚ್.ಎಂ.ರೇವಣ್ಣ

ಜಿಲ್ಲಾ ಅರಣ್ಯ ಅಧಿಕಾರಿ ರಾಮಕೃಷ್ಣಪ್ಪ, ಬನ್ನೇರುಘಟ್ಟ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್, ವನ್ಯಜೀವಿ ವಲಯ ಸಂರಕ್ಷಣಾಧಿಕಾರಿ ನಾಗೇಂದ್ರ ಪ್ರಸಾದ್, ಕನಕಪುರ ವಲಯ ಸಂರಕ್ಷಣಾಧಿಕಾರಿ ಪುಟ್ಟಮ್ಮ, ಕನಕಪುರ ವಲಯ ಅರಣ್ಯ ಅಧಿಕಾರಿ ದಾಳೇಶ್ ಸೇರಿ ಸಿಬ್ಬಂದಿ ಗಣೇಶ್, ಮನ್ಸೂರ್, ಆಂತೋನಿ, ಅನಿಲ್ ಕುಮಾರ್, ಆಂತೋನಿ, ತಾಲೂಕು ಜೆಡಿಎಸ್ ಅಧ್ಯಕ್ಷ ಬಿ. ನಾಗರಾಜು, ಯುವ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಚಿನ್ನಸ್ವಾಮಿ, ಹಿರಿಯ ಮುಖಂಡರಾದ ಸಿದ್ಧಮರಿಗೌಡ, ಜೆಡಿಎಸ್ ಯುವ ಮುಖಂಡ ಅರಳಾಳು ರಾಜೇಂದ್ರ, ಕೊತ್ತನೂರು ನಾರಾಯಣ, ಗ್ರಾಮೀಣ ಬಿಜೆಪಿ ಅಧ್ಯಕ್ಷ ಕೆ.ಪಿ.ಕುಮಾರ್, ಬೊಮ್ಮನಹಳ್ಳಿ ಕುಮಾರ, ಅಶ್ವತ್ಥ್, ಬೆಟ್ಟೆಗೌಡನದೊಡ್ಡಿ ಮಂಜುನಾಥ್, ವಕೀಲ ಜೈರಾಮು, ನಗರಸಭಾ ಸದಸ್ಯ ಚಂದ್ರು, ರಾಜೇಶ ಸೇರಿ ಅನೇಕ ಮುಖಂಡರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios