ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ನೋಟಿಸ್‌ ನೀಡಲಾಗಿದೆ. ಆದರೆ ಈಗಾಗಲೇ ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಅರ್ಜಿದಾರರ ವಿರುದ್ಧದ ನೋಟಿಸ್‌ ಮಾನ್ಯತೆ ಕಳೆದುಕೊಂಡಿದೆ. ಆದ್ದರಿಂದ ಅದನ್ನು ರದ್ದುಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಿದ ನ್ಯಾಯಪೀಠ 

ಬೆಂಗಳೂರು(ಮೇ.23): ಲೋಕಸಭೆ ಚುನಾವಣೆ ವೇಳೆ ಯಾವುದೇ ಕಾನೂನು ಬಾಹಿರ ಚಟುವಟಿಕೆ ಹಾಗೂ ಚುನಾವಣಾ ಅಕ್ರಮದಲ್ಲಿ ತೊಡಗುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಡುವಂತೆ ಸೂಚಿಸಿ ಮಲ್ಲೇಶ್ವರದ ಬಿಜೆಪಿ ಕಚೇರಿಯ ಕಾರ್ಯದರ್ಶಿ ಲೋಕೇಶ ಆಂಬೇಕಲ್ಲು ಅವರಿಗೆ ನಗರ ಪಶ್ಚಿಮ ವಿಭಾಗದ ಉಪ ಪೊಲೀಸ್‌ ಆಯುಕ್ತ ಮತ್ತು ದಂಡಾಧಿಕಾರಿ ಜಾರಿ ಮಾಡಿದ್ದ ನೋಟಿಸನ್ನು ಹೈಕೋರ್ಟ್‌ ರದ್ದುಪಡಿಸಿದೆ. ನೋಟಿಸ್‌ ಪ್ರಶ್ನಿಸಿ ಲೋಕೇಶ ಅಂಬೇಕಲ್ಲು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರಿದ್ದ ರಜಾಕಾಲದ ಪೀಠ ಈ ಆದೇಶ ಮಾಡಿದೆ.

ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ನೋಟಿಸ್‌ ನೀಡಲಾಗಿದೆ. ಆದರೆ ಈಗಾಗಲೇ ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಅರ್ಜಿದಾರರ ವಿರುದ್ಧದ ನೋಟಿಸ್‌ ಮಾನ್ಯತೆ ಕಳೆದುಕೊಂಡಿದೆ. ಆದ್ದರಿಂದ ಅದನ್ನು ರದ್ದುಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.

ಹೈಕೋರ್ಟ್‌ ವೆಬ್‌ನಲ್ಲಿನ್ನು ಬಾಕಿ ಕೇಸ್‌ ಮಾಹಿತಿ ಪೂರ್ತಿ ಲಭ್ಯ..!

ಅರ್ಜಿದಾರರ ಪರ ವಕೀಲ ಎಂ.ವಿನೋದ್‌ ಕುಮಾರ್‌, ನಗರದಲ್ಲಿ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ 2024ರ ಏ.26ರಂದು ಪೂರ್ಣಗೊಂಡಿದೆ. ಆದರೆ ಮೇ 15ರಂದು ಅರ್ಜಿದಾರರಿಗೆ ನೋಟಿಸ್‌ ಜಾರಿಗೊಳಿಸಿ ಮುಚ್ಚಳಿಕೆಗೆ ಸಹಿ ಹಾಕುವಂತೆ ನಗರದ ಪಶ್ವಿಮ ವಿಭಾಗದ ಉಪ ಪೊಲೀಸ್‌ ಆಯುಕ್ತರು ವಾಟ್ಸ್‌ ಆ್ಯಪ್‌ ಮೂಲಕ ನೋಟಿಸ್‌ ಜಾರಿಗೊಳಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿನ ಘಟನೆ ಆಧರಿಸಿ ಅರ್ಜಿದಾರರ ವಿರುದ್ಧ ಆರೋಪ ಮಾಡಿದ್ದು, ಆ ಪ್ರಕರಣಕ್ಕೆ ಹೈಕೋರ್ಟ್‌ ತಡೆಯಾಜ್ಞೆ ಸಹ ನೀಡಿದೆ. ಹಾಗಾಗಿ, ಅರ್ಜಿದಾರರ ವಿರುದ್ಧ ನೋಟಿಸ್‌ ನೀಡಿರುವುದು ಕಾನೂನಿನ ಸ್ಪಷ್ಟ ದುರ್ಬಳಕೆ ಎಂದು ಕೋರ್ಟ್‌ ಗಮನಕ್ಕೆ ತಂದರು.

ಸರ್ಕಾರಿ ವಕೀಲರು, ರಾಜ್ಯದಲ್ಲಿ ಈಗಾಗಲೇ ಲೋಕಸಭೆ ಚುನಾವಣೆ ಮತದಾನ ಪೂರ್ಣಗೊಂಡಿದ್ದು, ಅರ್ಜಿದಾರರ ವಿರುದ್ಧ ಜಾರಿಗೊಳಿಸಿದ್ದ ನೋಟಿಸ್‌ ಸಹ ಮಾನ್ಯತೆ ಕಳೆದುಕೊಂಡಿದೆ ಎಂದು ಪೀಠದ ಗಮನಕ್ಕೆ ತಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ನೋಟಿಸ್‌ ರದ್ದುಪಡಿಸಿ ಅರ್ಜಿ ಇತ್ಯರ್ಥಪಡಿಸಿದೆ.