ಹೈಕೋರ್ಟ್‌ ವೆಬ್‌ನಲ್ಲಿನ್ನು ಬಾಕಿ ಕೇಸ್‌ ಮಾಹಿತಿ ಪೂರ್ತಿ ಲಭ್ಯ..!

ನೂತನ ವೆಬ್‌ಸೈಟ್‌ನಲ್ಲಿ ಹಲವು ನೂತನ ಅಂಶಗಳನ್ನು ಒಳಪಡಿಸಲಾಗಿದೆ. ಈ ಪೈಕಿ ಹೈಕೋರ್ಟ್‌ನಲ್ಲಿ ಬಾಕಿಯಿರುವ ಅರ್ಜಿಗಳ ಅಂಕಿ-ಅಂಶ ವಿವರ ಒದಗಿಸುವ ವಿಭಾಗವೂ ಒಂದಾಗಿದೆ. ಸದ್ಯ ನೂತನ ವೆಬ್‌ಸೈಟ್‌ ಪ್ರಯೋಗಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶೀಘ್ರವೇ ಅಧಿಕೃತ ಚಾಲನೆ ಪಡೆಯಲಿದೆ. 
 

All Pending Cases Information is Available on the Karnataka High Court Website grg

ವೆಂಕಟೇಶ್‌ ಕಲಿಪಿ

ಬೆಂಗಳೂರು(ಮೇ.23):  ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರತಿದಿನ ದಾಖಲಾಗುವ, ವಿಲೇವಾರಿಯಾಗುವ ಮತ್ತು ವಿಲೇವಾರಿಗೆ ಬಾಕಿಯಿರುವ ಅರ್ಜಿಗಳ ಸಂಪೂರ್ಣ ವಿವರಗಳು ಇನ್ನುಮುಂದೆ ಸಾರ್ವಜನಿಕರು ಸೇರಿದಂತೆ ನ್ಯಾಯವಾದಿಗಳಿಗೆ ಸುಲಭವಾಗಿ ಬೆರಳ ತುದಿಯಲ್ಲಿ ಲಭ್ಯವಾಗಲಿವೆ. ಹಾಲಿ ಇರುವ ಹೈಕೋರ್ಟ್‌ ವೆಬ್‌ಸೈಟ್‌ನಲ್ಲಿ ತೀರ್ಪುಗಳು, ಅಧಿಸೂಚನೆ ಸೇರಿದಂತೆ ವಿವಿಧ ಅಂಶಗಳು ಸಿಗುತ್ತಿದ್ದವು. ಈಗ ಹೊಸ ಅಂಶಗಳೊಂದಿಗೆ ನೂತನ ವೆಬ್‌ಸೈಟ್‌ ಸಿದ್ಧಪಡಿಸಲಾಗಿದೆ.

ನೂತನ ವೆಬ್‌ಸೈಟ್‌ನಲ್ಲಿ ಹಲವು ನೂತನ ಅಂಶಗಳನ್ನು ಒಳಪಡಿಸಲಾಗಿದೆ. ಈ ಪೈಕಿ ಹೈಕೋರ್ಟ್‌ನಲ್ಲಿ ಬಾಕಿಯಿರುವ ಅರ್ಜಿಗಳ ಅಂಕಿ-ಅಂಶ ವಿವರ ಒದಗಿಸುವ ವಿಭಾಗವೂ ಒಂದಾಗಿದೆ. ಸದ್ಯ ನೂತನ ವೆಬ್‌ಸೈಟ್‌ ಪ್ರಯೋಗಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶೀಘ್ರವೇ ಅಧಿಕೃತ ಚಾಲನೆ ಪಡೆಯಲಿದೆ. ಹಾಲಿಯಿರುವ ಹೈಕೋರ್ಟ್‌ ವೆಬ್‌ಸೈಟ್‌ನಲ್ಲಿ ಕೇವಲ ಜಿಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿರುವ ಮತ್ತು ನಿತ್ಯ ದಾಖಲಾಗುವ ಹಾಗೂ ವಿಲೇವಾರಿಯಾಗುತ್ತಿರುವ ಅರ್ಜಿಗಳ ಅಂಕಿ ಅಂಶ ಮಾತ್ರ ನೀಡಲಾಗುತ್ತಿದೆ. ಪ್ರಾಯೋಗಿಕವಾಗಿರುವ ನೂತನ ವೆಬ್‌ಸೈಟ್‌ನಲ್ಲಿ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ಒಟ್ಟು ಅರ್ಜಿಗಳ ಅಂಕಿ-ಅಂಶ ನೀಡಲಾಗುತ್ತಿದೆ.

ವಾಹನ ಪಾರ್ಕಿಂಗ್‌ ಪಾಲಿಸಿ ಜಾರಿಗೆ ಕ್ರಮ ಕೈಗೊಳ್ಳಿ: ಪಾಲಿಕೆಗೆ ಹೈಕೋರ್ಟ್ ಸೂಚನೆ

ಮತ್ತೊಂದು ವಿಶೇಷವೆಂದರೆ ಮೂರು ಪೀಠಗಳಲ್ಲಿ ಪ್ರತಿ ದಿನ ಹೈಕೋರ್ಟ್‌ಗೆ ದಾಖಲಾಗುವ, ವಿಚಾರಣೆಗೆ ನಿಗದಿಯಾದ ಮತ್ತು ವಿಲೇವಾರಿಗೆ ಬಾಕಿಯಿರುವ ಅರ್ಜಿಗಳು, ಒಟ್ಟು ವಿಲೇವಾರಿಗೆ ಬಾಕಿಯಿರುವ ಅರ್ಜಿಗಳಲ್ಲಿ ಹಿರಿಯ ನಾಗರಿಕರು ಮತ್ತು ಮಹಿಳೆಯರು ಸಲ್ಲಿಸಿರುವ ಅರ್ಜಿಗಳ, ಒಂದರಿಂದ 30 ವರ್ಷ ಕಾಲ ಹಳೆಯ ಪ್ರಕರಣಗಳ ಅಂಕಿ ಅಂಶ ನೀಡಲಾಗುತ್ತಿದೆ. ಈ ಅಂಕಿ-ಅಂಶ ನಿತ್ಯ ಬದಲಾಗಲಿದ್ದು, ಆ ವಿವರವನ್ನು ಪ್ರಕಟಿಸಲಾಗುತ್ತಿದೆ.

2.88 ಲಕ್ಷ ಪ್ರಕರಣ ಬಾಕಿ:

ನೂತನ ವೆಬ್‌ ಸೈಟ್‌ನಲ್ಲಿ ದಾಖಲಿಸಿರುವಂತೆ 2024ರ ಮೇ 18ಕ್ಕೆ ಬೆಂಗಳೂರು ಪ್ರಧಾನ, ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್‌ ಪೀಠಗಳಲ್ಲಿ ಒಟ್ಟು 2,88,122 ಅರ್ಜಿಗಳು ವಿಚಾರಣೆಗೆ ಬಾಕಿಯಿವೆ.

ಪೀಠವಾರು ಅಂಕಿ-ಅಂಶ:

ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅಂಕಿ-ಅಂಶದ ಪ್ರಕಾರ ಬೆಂಗಳೂರಿನ ಪ್ರಧಾನ ಪೀಠದಲ್ಲಿ 1,98,789 ಅರ್ಜಿಗಳು ವಿಲೇವಾರಿಗೆ ಬಾಕಿಯಿವೆ. ಹಾಗೆಯೇ, ಧಾರವಾಡ ಪೀಠದಲ್ಲಿ ಒಟ್ಟು 62,757 ಮತ್ತು ಕಲಬುರಗಿ ಪೀಠದಲ್ಲಿ 26,576 ಅರ್ಜಿಗಳು ವಿಲೇವಾರಿಗೆ ಬಾಕಿಯಿದೆ. ಮೂರು ಪೀಠಗಳಲ್ಲಿ ಒಟ್ಟು 1,59,351 ಸಿವಿಲ್‌ ಹಾಗೂ 39,417 ಕ್ರಿಮಿನಲ್‌ ಅರ್ಜಿಗಳು ವಿಲೇವಾರಿಗೆ ಬಾಕಿಯಿವೆ.

ಬೆಂಗಳೂರಿನ ಪ್ರಧಾನ ಪೀಠದಲ್ಲಿ 1,98,789 ಅರ್ಜಿಗಳ ಪೈಕಿ 1,59,351 ಸಿವಿಲ್‌ ಹಾಗೂ 39,417 ಕ್ರಿಮಿನಲ್‌ ಅರ್ಜಿಗಳಾಗಿವೆ. ಧಾರವಾಡ ಪೀಠದಲ್ಲಿ ಒಟ್ಟು 62,757 ಅರ್ಜಿಗಳ ಪೈಕಿ, 54,771 ಸಿವಿಲ್‌ ಮತ್ತು 7986 ಕ್ರಿಮಿನಲ್‌ ಅರ್ಜಿಗಳಾಗಿವೆ. ಕಲಬುರಗಿ ಪೀಠದಲ್ಲಿ ವಿಲೇವಾರಿಗೆ ಬಾಕಿಯಿರುವ 26,576 ಅರ್ಜಿಗಳ ಪೈಕಿ 24,494 ಸಿವಿಲ್‌ ಹಾಗೂ 2082 ಕ್ರಿಮಿನಲ್‌ ಅರ್ಜಿಗಳಾಗಿವೆ.

ಪೆಪ್ಪರ್‌ ಸ್ಪ್ರೇ ಅಪಾಯಕಾರಿ ಆಯುಧ: ಹೈಕೋರ್ಟ್‌

ಬೆಂಗಳೂರಿನ ಪೀಠದಲ್ಲಿ 20ರಿಂದ 30 ವರ್ಷಗಳ ನಡುವಿನ 188 ಹಳೆಯ, ಧಾರವಾಡದಲ್ಲಿ 2 ಮತ್ತು ಕಲಬುರಗಿಯಲ್ಲಿ 7 ಅರ್ಜಿಗಳು ವಿಲೇವಾರಿಗೆ ಬಾಕಿಯಿವೆ. ಬೆಂಗಳೂರು ಪೀಠದಲ್ಲಿ 30 ವರ್ಷ ಮೇಲ್ಪಟ್ಟ 7 ಹಳೆಯ ಅರ್ಜಿಗಳು ವಿಚಾರಣೆ ಹಂತಲ್ಲಿವೆ. ಕಲಬುರಗಿಯಲ್ಲಿ ಮತ್ತು ಧಾರವಾಡದಲ್ಲಿ 30 ವರ್ಷ ಮೇಲ್ಪಟ್ಟ ಯಾವೊಂದು ಪ್ರಕರಣವೂ ವಿಚಾರಣಾ ಹಂತದಲ್ಲಿ ಇಲ್ಲ.

ಜಿಲ್ಲಾ ಕೋರ್ಟ್‌ಗಳಲ್ಲಿ 20 ಲಕ್ಷ ಕೇಸು ಬಾಕಿ

ಕರ್ನಾಟಕದ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ ಮೇ 19ಕ್ಕೆ ಒಟ್ಟು 20,03,953 ಅರ್ಜಿಗಳು ವಿಲೇವಾರಿಗೆ ಬಾಕಿಯಿವೆ. ಹಾಗೆಯೇ, ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ಪೈಕಿ 2024ರ ಏ.1ರವರೆಗೆ ಬೆಂಗಳೂರಿನ ಎರಡು ಸೆಷನ್ಸ್‌ ಮತ್ತು ಒಂದು ಮ್ಯಾಜಿಸ್ಟ್ರೇಟ್‌ (ಜನಪ್ರತಿನಿಧಿಗಳ ವಿಶೇಷ) ನ್ಯಾಯಾಲಯದಲ್ಲಿ 261 ಪ್ರಕರಣಗಳು ವಿಲೇವಾರಿಗೆ ಬಾಕಿಯಿವೆ. ಹೈಕೋರ್ಟ್‌ನ ಹೊಸ ವೆಬ್‌ ಸೈಟ್‌ ವಿಳಾಸ https://karnatakajudiciary.kar.nic.in/newwebsite/index.php ಆಗಿದೆ.

ದೇಶದಲ್ಲಿ 5 ಕೋಟಿ ಕೇಸು ಬಾಕಿ!

ದೇಶದ 39 ಹೈಕೋರ್ಟ್‌ಗಳಲ್ಲಿ ಒಟ್ಟು 61.9 ಲಕ್ಷ ಪ್ರಕರಣಗಳು ಬಾಕಿ ಇವೆ. ದೇಶದಾದ್ಯಂತ ಇರುವ ಜಿಲ್ಲಾ ಮತ್ತು ತಾಲೂಕು ಕೋರ್ಟ್‌ಗಳಲ್ಲಿ 4.5 ಕೋಟಿ ಪ್ರಕರಣಗಳು ಬಾಕಿ ಇವೆ. ಸುಪ್ರೀಂಕೋರ್ಟ್‌ನಲ್ಲಿ ಮೇ 19ಕ್ಕೆ 80,671 ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ.

Latest Videos
Follow Us:
Download App:
  • android
  • ios