ಉಡುಪಿ(ಏ.08): ವಿದೇಶದಿಂದ ಬಂದವರಿಂದ ಅವರ ಕುಟುಂಬಗಳಿಗೆ ಸಂಭಾವ್ಯ ಕೊರೋನಾ ಹರಡದಂತೆ ಕ್ವಾರಂಟೈನ್‌ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತಕ್ಕೇ ಈ ಕೆಲವು ಕುಟುಂಬಗಳು ಕಿರಿಕಿರಿ ಮಾಡುತ್ತಿವೆ.

ಈ ಕುಟುಂಬದವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಅವರ ಮನೆಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿದರೆ, ಕೆಲವು ಕುಟುಂಬಗಳು ತಮಗೆ ತಾವು ಹೇಳಿದ ಬ್ರ್ಯಾಂಡೆಡ್‌ ಹೆಸರಿನ ವಸ್ತುಗಳೇ ಬೇಕು ಎಂದು ಹಠ ಮಾಡುತ್ತಿವೆ.

ಲಾಕ್ ಡೌನ್ ನಡುವೆ ಅಮೆರಿಕ ದಿಟ್ಟ ಕ್ರಮ; ದೂರದಲ್ಲಿ ಕುಳಿತು ದೊಡ್ಡಣ್ಣನ ಮಾಸ್ಟರ್ ಪ್ಲಾನ್!

ಆಶಾ ಕಾರ್ಯಕರ್ತೆಯರ ಮೂಲಕ ಜಿಲ್ಲಾಡಳಿತ ಮಾಸ್ಕ್, ಸ್ಯಾನಿಟೈಸರ್‌, ಸೋಪ್‌ ಇತ್ಯಾದಿಗಳನ್ನು ಈ ಕುಟುಂಬಗಳಿಗೆ ಕಳುಹಿಸುತ್ತಿದೆ. ಆದರೆ ವಿದೇಶದಿಂದ ಬಂದು ಕ್ವಾರಂಟೈನ್‌ನಲ್ಲಿರುವ ಕೆಲವರು, ಆಶಾ ಕಾರ್ಯಕರ್ತೆಯರು ತಂದ ಈ ವಸ್ತುಗಳು ಸರಿಯಿಲ್ಲ, ತಮಗೆ ಇಂತಹದ್ದೇ ಬ್ರ್ಯಾಂಡ್‌ನ ಸೋಪು, ಸ್ಯಾನಿಟೈಸರ್‌ ಬೇಕು, ಇಂತಹದ್ದೇ ಕಂಪನಿಯ ಅಕ್ಕಿ ,ಬೇಳೆ, ಎಣ್ಣೆ ಬೇಕು ತಂದು ಕೊಡಿ ಎಂದು ಒತ್ತಡ ಹೇರುತ್ತಿದ್ದಾರೆ ಎಂದು ಆಶಾ ಕಾರ್ಯಕರ್ತೆಯರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಜಿ. ಜಗದೀಶ್‌, ಇದು ಬ್ರ್ಯಾಂಡ್‌ ನೋಡುವಂತಹ ಸಮಯ ಅಲ್ಲ, ಜೀವವನ್ನು ಉಳಿಸಿಕೊಳ್ಳುವಂತಹ ಸಮಯ, ಜಿಲ್ಲಾಡಳಿತ ಗುಣಮಟ್ಟದ ವಸ್ತುಗಳನ್ನೇ ಪೂರೈಕೆ ಮಾಡಿದೆ, ಅದನ್ನೇ ಬಳಸಿಕೊಳ್ಳಿ ಎಂದು ಖಡಕ್ಕಾಗಿ ಹೇಳಿದ್ದಾರೆ.

ಕೊರೋನಾ  ಲಾಕ್ ಡೌನ್ ವಿಸ್ತರಣೆ ಆಗುತ್ತಾ? ಇಲ್ಲಿದೆ ನೋಡಿ ಡಿಟೇಲ್ಸ್

ಯಾರೂ ತಮಗೆ ಬೇಕಾದಂತಹ ಬ್ರ್ಯಾಂಡೆಡ್‌ ವಸ್ತುಗಳನ್ನು ಕೇಳುವಂತಿಲ್ಲ, ನಿಮ್ಮ ಹಿತದೃಷ್ಟಿಯಿಂದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿರುವುದೇ ದೊಡ್ಡ ವಿಷಯ, ಆದ್ದರಿಂದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ವರ್ತಿಸಿ ಎಂದು ಡಿಸಿ ಅವರು ಕ್ವಾರಂಟೈನ್‌ ನಲ್ಲಿರುವ ಕುಟುಂಬಗಳಿಗೆ ಕಟ್ಟುನಿಟ್ಟು ಸೂಚನೆ ನೀಡಿದ್ದಾರೆ.