ರೋಣ(ಮೇ.22): ನನ್ನ ಕ್ವಾರಂಟೈನ್‌ ಅವಧಿ ಮುಗಿದಿದ್ದು, ಈ ದಿನವೇ ನನ್ನನ್ನು ನಮ್ಮೂರಿಗೆ ಕಳುಹಿಸಿ, ಇಲ್ಲವಾದಲ್ಲಿ ಇಲ್ಲಿಂದ ಹೇಳದೇ ಕೇಳದೇ ಪರಾರಿಯಾಗುತ್ತೇನೆಂದು ಪಟ್ಟಣದ ತಾಪಂ ಕಚೇರಿ ಹಿಂದೆ ಇರುವ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನ ಕ್ವಾರಂಟೈನ್‌ನಲ್ಲಿರುವ ಯುವಕ ಕಳೆದೆರಡು ದಿನಗಳಿಂದ ಅಲ್ಲಿನ ಸಿಬ್ಬಂದಿಯೊಂದಿಗೆ ಗಲಾಟೆ ಮಾಡುತ್ತಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ.

ಗುಜರಾತ್‌ ರಾಜ್ಯದಿಂದ ಬಂದಿರುವ ತಾಲೂಕಿನ ಕರ್ಕಿಕಟ್ಟಿ ಗ್ರಾಮದ ಕ್ವಾರಂಟೈನ್‌ ವ್ಯಕ್ತಿ, ತನ್ನ ಸಂಬಂಧಿಕರ ಮದುವೆ ಇನ್ನೆರಡು ದಿನದಲ್ಲಿ ಇದ್ದು, ನಾ ಆ ಮದುವೆಗೆ ಹೋಗಬೇಕು. ಜತೆಗೆ ನನ್ನ ಕ್ವಾರಂಟೈನ್‌ ಅವಧಿಯೂ ಮುಗಿದಿದ್ದು, ಮೇ 8ರಂದು ನರಗುಂದದಲ್ಲಿ ನನ್ನ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಕೆಲದಿನ ಹೋಂ ಕ್ವಾರಂಟೈನ್‌ ಮಾಡಿದ್ದರೂ, ಆ ವರದಿಯೂ ಈಗ ನೆಗಟಿವ್‌ ಎಂದು ಬಂದಿದೆ. ಅವಧಿ ಮುಗಿದರೂ ನನ್ನನ್ನು ಕ್ವಾರಂಟೈನ್‌ನಿಂದ ಏಕೆ ಬಿಡುಗಡೆಗೊಳಿಸುತ್ತಿಲ್ಲ? ಇಲ್ಲಿಂದ ನನ್ನನ್ನ ಬಿಡುಗಡೆ ಮಾಡದಿದ್ದಲ್ಲಿ ಗೋಡೆ ಜಿಗಿದು ಪರಾರಿಯಾಗುತ್ತೇನೆ ಎಂದು ಗುರುವಾರ ಬೆಳಗ್ಗೆಯಿಂದ ನಿರಂತರವಾಗಿ ಗಲಾಟೆ ಮಾಡಿದ್ದಾನೆ.

ಲಾಕ್‌ಡೌನ್‌: ತುತ್ತು ಅನ್ನಕ್ಕೂ KSRTC ಸಿಬ್ಬಂದಿ ಪರದಾಟ

ಮನವೊಲಿಸಿದ ಪೊಲೀಸರು:

ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಗೆ ಅಲ್ಲಿನ ಸಿಬ್ಬಂದಿ ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಕೇಳದೆ ಒಂದೇ ಸಮನೇ ಮನೆ ಹೋಗುವುದಾಗಿ ಹಟ ಹಿಡಿದು ಗಲಾಟೆ ಮಾಡಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಎಎಸ್‌ಐ (ಪಿಎಸ್‌ಐ ಉಸ್ತುವಾರಿ) ಮಹೇಶ ಹೇರಕಲ್ಲ, ನೀವು ಇಲ್ಲಿನ ಕ್ವಾರಂಟೈನ್‌ಗೆ ಬಂದಿದ್ದು ಮೇ 12ಕ್ಕೆ, ನಿಮ್ಮ ಅವಧಿ ಮೇ 24ಕ್ಕೆ ಮುಗಿಯುತ್ತದೆ. ಅಲ್ಲಿಯ ವರೆಗೂ ನೀವು ಇಲ್ಲಿಯೇ ಇರುವ ಮೂಲಕ ನಿಯಮ ಪಾಲಿಸಬೇಕು. ನೀವು ಈ ರೀತಿ ಮಾಡಿದಲ್ಲಿ ಇತರರೂ ನಿಮ್ಮಂತೆ ತಕರಾರು ಮಾಡುತ್ತಾರೆ. ಇನ್ನೆರಡು ದಿನ ಸಹಕರಿಸಬೇಕು ಎಂದು ಮನವೊಲಿಸಲು ಯತ್ನಿಸಿದರು. ಆಗ ಆ ವ್ಯಕ್ತಿ, ನನ್ನ ಗಂಟಲು ದ್ರವ ಮಾದರಿಯನ್ನು ಮೇ 8ರಂದು ಸಂಗ್ರಹಿಸಿದ್ದು, ಅಲ್ಲಿಂದ ಇಲ್ಲಿಯ ವರೆಗೆ 14 ದಿನವಾಗುತ್ತದೆ. ಇನ್ನೆರಡು ದಿನದಲ್ಲಿ ನಮ್ಮ ಮನೆಯಲ್ಲಿ ಮದುವೆ ಇದೆ ಎಂದು ವಾದ ಮಾಡಿದಾಗ, ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ತಿಳಿಸುತ್ತೇನೆ, ಅಲ್ಲಿಯ ವರೆಗೂ ಕ್ವಾರಂಟೈನ್‌ ನಿಯಮ ಪಾಲಿಸಿ. ಹಿರಿಯ ಅಧಿಕಾರಿಗಳು ನಿಮ್ಮನ್ನು ಕಳುಹಿಸಲು ಸೂಚಿಸಿದರೆ ಕಳಿಸುತ್ತೇವೆ ಎಂದು ಎಎಸ್‌ಐ ಮಹೇಶ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯ ಮನವೊಲಿಸಿದರು.

ಗೊಂದಲದ ಗೂಡಾದ ಕ್ವಾರಂಟೈನ್‌:

ಕ್ವಾರಂಟೈನ್‌ಗೆ ಒಳಪಡುವ ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿಡಬೇಕು ಎಂಬ ನಿಯಮವಿದೆ. ಆದರೆ, ರೋಣ ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿರುವ ಕ್ವಾರಂಟೈನ್‌ನಲ್ಲಿ ಕೆಲವು ರೂಮಗಳಲ್ಲಿ ಮೂರು, ನಾಲ್ಕು ಮತ್ತು ಐದು ಜನರಿದ್ದಾರೆ. ಇದರಿಂದಾಗಿ ಕೆಲವರು ನಮ್ಮನ್ನು ಪ್ರತ್ಯೇಕವಾಗಿಡಿ ಎಂದು ತಾಲೂಕು ಆಡಳಿತಕ್ಕೆ ವಿನಂತಿಸಿದರೂ ಪ್ರಯೋಜನವಾಗಿಲ್ಲ ಎಂದು ಕ್ವಾರಂಟೈನ್‌ಲ್ಲಿರುವವರು ಆರೋಪಿಸುತ್ತಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಸೂರತ್‌ನಿಂದ ಬಂದಿರುವ ವ್ಯಕ್ತಿಯೂ ಕ್ವಾರಂಟೈನ್‌ನಲ್ಲಿ ನನಗೆ ಪ್ರತ್ಯೇಕ ರೂಂ ಕಲ್ಪಿಸಿ, ಇಲ್ಲವಾದಲ್ಲಿ ನಾನು ಮನೆಯಲ್ಲಿ ಸ್ವಯಂ ಕ್ವಾರಂಟೈನ್‌ನಲ್ಲಿ ಇರುತ್ತೇನೆ, ಅವಕಾಶ ಕೊಡಿ ಎಂದು ವಾದ ಮಾಡಿದ್ದಲ್ಲದೇ, ಒಬ್ಬರಿಗಿಂತ ಹೆಚ್ಚಿರುವ ಜನರ ರೂಮಿನಲ್ಲಿ ಇರುವುದಿಲ್ಲ ಎಂದು ನಿರಾಕರಿಸಿದ್ದಾನೆ.

ಹೀಗೆ ಇಲ್ಲಿಗೆ ಬರುವವರು ಕ್ವಾರಂಟೈನ್‌ ಸಿಬ್ಬಂದಿಯೊಂದಿಗೆ ಒಂದಿಲ್ಲೊಂದು ರೀತಿಯಲ್ಲಿ ವಾದ ಮಾಡುತ್ತಲೇ ಇದ್ದಾರೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಕ್ವಾರಂಟೈನ್‌ ವ್ಯವಸ್ಥೆ ಒದಗಿಸದೇ, ತಾಲೂಕು ಆಡಳಿತ ಒಂದೇ ಕಟ್ಟಡದಲ್ಲಿ ವ್ಯವಸ್ಥೆ ಕಲ್ಪಿಸಿದ್ದು ನಾನಾ ರೀತಿಯ ಗೊಂದಲ ಮೂಡಿಸಿದೆ. ಸದ್ಯ ಕ್ವಾರಂಟೈನ್‌ನಲ್ಲಿ 37 ಪುರುಷರು, 9 ಮಹಿಳೆಯರು ಸೇರಿ ಒಟ್ಟು 46 (ಇದರಲ್ಲಿ ಪುಟಾಣಿ ಮಕ್ಕಳು ಇದ್ದಾರೆ) ಜನರಿದ್ದಾರೆ.

ಪಟ್ಟಣದ ಮಧ್ಯ ಭಾಗದಲ್ಲಿ, ಅದರಲ್ಲೂ ತಾಪಂ ಸಮೀಪವೇ ಕ್ವಾರಂಟೈನ್‌ ವ್ಯವಸ್ಥೆ ಕಲ್ಪಿಸಿದ್ದು ಅವೈಜ್ಞಾನಿಕವಾಗಿದ್ದು, ಕೂಡಲೇ ಕ್ವಾರಂಟೈನ್‌ ಕೇಂದ್ರ ಸ್ಥಳಾಂತರಿಸಬೇಕು. ಜತೆಗೆ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಕಟ್ಟಡ ವ್ಯವಸ್ಥೆ ಕಲ್ಪಿಸಬೇಕು. ಈ ಕೂಡಲೇ ತಾಲೂಕು ಆಡಳಿತ, ಕೊರೋನಾ ಟಾಸ್ಕ್‌ಫೋರ್ಸ್‌ ಸಮಿತಿ ಗಮನ ಹರಿಸಬೇಕು ಎಂದು ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ ಆಗ್ರಹಿಸಿದ್ದಾರೆ.