ರಬಕವಿ-ಬನಹಟ್ಟಿ(ಮೇ.09): ಗುಜರಾತಿನ ಅಹ್ಮದಾಬಾದ್‌ನಿಂದ ಬನಹಟ್ಟಿಗೆ ಬಂದಿಳಿದ 15 ತಬ್ಲಿಘಿಗಳ ಆರೋಗ್ಯ ಪರೀಕ್ಷಿಸಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲವೆಂದು ತಹಸೀಲ್ದಾರ್‌ ಪ್ರಶಾಂತ ಚನಗೊಂಡ ತಿಳಿಸಿದ್ದಾರೆ.

ಗುಜರಾತ್‌ ರಾಜ್ಯದ ಕಾಟಗೆವಾಡಿ ಮಸೀದಿ, ಅಹ್ಮದಾಬಾದ್‌ನ ಸಿದ್ದಕಿ, ಆಸಿಯಾನಾ, ಮಹ್ಮಿದಿ, ಕೂಬಾ ಹಾಗೂ ಕಾಂಜಾನ ಮಸೀದಿಯಲ್ಲಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಲ್ಲಿನ 15 ಜನ ಲಾಕ್‌ಡೌನ್‌ ಮುಂಚೆಯೇ ಹೋಗಿದ್ದರು. ಆದರೆ, ಲಾಕ್‌ಡೌನ್‌ ಜಾರಿಯಾದ ಕಾರಣದಿಂದಾಗಿ ತಾಲೂಕಿಗೆ ಹಿಂದಿರುಗಲು ಸಾಧ್ಯವಾಗಿರಲಿಲ್ಲ ಎಂದರು.

ಮದ್ಯ ಯಾಕೆ ಬಂದ್ ಮಾಡಿಸ್ತಿಲ್ಲ ಯಡಿಯೂರಪ್ಪಜ್ಜ ಉತ್ತರ ಕೊಡಿ ಎಂದ ಬಾಲಕಿ..!

ಲಾಕ್‌ಡೌನ್‌ ಸಡಿಲಿಕೆ ಕಾರಣದಿಂದಾಗಿ ಅಹ್ಮದಾಬಾದನ ಜಿಲ್ಲಾಡಳಿತದಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿವರೆಗೂ ಅನುಮತಿ ಪಡೆದು ತಮ್ಮ ಸ್ವಂತ ವಾಹನದಲ್ಲಿ ಕೊಲ್ಲಾಪುರ, ಸಾಂಗ್ಲಿ ಮಾರ್ಗವಾಗಿ ಬಂದಿದ್ದಾರೆ. ಚಿಕ್ಕೋಡಿಯಲ್ಲಿ 4 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದು, ಅಲ್ಲಿಯ ಜಿಲ್ಲಾಡಳಿತದ ಅನುಮತಿ ಪಡೆದು ಶುಕ್ರವಾರ ಬೆಳಗ್ಗೆ ಬನಹಟ್ಟಿಗೆ ಪ್ರವೇಶ ಮಾಡಿದ್ದಾರೆ ಎಂದು ತಹಸೀಲ್ದಾರ್‌ ಚನಗೊಂಡ ವಿವರಿಸಿದರು.

ಶುಕ್ರವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಚೆಕ್‌ಪೋಸ್ಟ್‌ಗೆ ಆಗಮಿಸಿದ್ದ ಇವರನ್ನು ಮತ್ತೊಮ್ಮೆ ಆರೋಗ್ಯ ತಪಾಸಣೆ ನಡೆಸಿ, ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದೆ. ಎಲ್ಲ ತಬ್ಲೀಘಿಗಳ ಆರೋಗ್ಯ ತಪಾಸಣೆ ನಡೆಸಿ ಗಂಟಲು ದ್ರವ ಸಂಗ್ರಹಿಸಿ ಈಗಾಗಲೇ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.

ಬನಹಟ್ಟಿ ವೃತ್ತ ನಿರೀಕ್ಷಕ ರವಿಕುಮಾರ ಧರ್ಮಟ್ಟಿ ನೇತೃತ್ವದಲ್ಲಿ ಕ್ವಾರಂಟೈನ್‌ ಸುತ್ತ ಭದ್ರತೆ ಒದಗಿಸಲಾಗಿದ್ದು, ಪಟ್ಟಣದ ಜನತೆ ಸುತ್ತಮುತ್ತ ಸಂಚರಿಸಬಾರದೆಂದು ತಿಳಿಸಿದ್ದಾರೆ.