Asianet Suvarna News Asianet Suvarna News

ಬೆಂಗ್ಳೂರಿನ ಪ್ರತಿ ಮರಕ್ಕೂ ಕ್ಯೂಆರ್‌ ಕೋಡ್‌..!

ಮರಗಳ ಗಣತಿ ಪ್ರಾರಂಭಿಸಲಾಗಿದೆ. ಮರಗಳ ಗಣತಿಗೆ ಬಿಬಿಎಂಪಿಯು ವಿಶೇಷವಾಗಿ ಆ್ಯಪನ್ನು ಅಭಿವೃದ್ಧಿ ಪಡಿಸಿದ್ದು, ಈ ಆ್ಯಪ್‌ ಬಳಸಿಕೊಂಡು ಗಣತಿ ನಡೆಸಲಾಗುತ್ತಿದೆ. ವಿಶೇಷ ಎಂದರೆ, ಗಣತಿಗೆ ಒಳಪಟ್ಟ ಪ್ರತಿ ಮರಕ್ಕೂ ಕ್ಯೂಆರ್‌ ಕೋಡ್‌ ಅಂಟಿಸಲಾಗುತ್ತದೆ. 

QR Code for Every Tree in Bengaluru grg
Author
First Published Dec 4, 2022, 9:00 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಡಿ.04):  ಹಲವಾರು ವರ್ಷದಿಂದ ನೆನೆಗುದಿಗೆ ಬಿದ್ದ ಸಿಲಿಕಾನ್‌ ಸಿಟಿ ಬೆಂಗಳೂರಿನ ಮರಗಳ ಗಣತಿ ಕೊನೆಗೂ ಆರಂಭಗೊಂಡಿದ್ದು, ಪ್ರಾಯೋಗಿಕವಾಗಿ ಎರಡು ವಾರ್ಡ್‌ಗಳಲ್ಲಿ ಮರಗಳ ಗಣತಿ ಪ್ರಾರಂಭಿಸಲಾಗಿದೆ. ಮರಗಳ ಗಣತಿಗೆ ಬಿಬಿಎಂಪಿಯು ವಿಶೇಷವಾಗಿ ಆ್ಯಪನ್ನು ಅಭಿವೃದ್ಧಿ ಪಡಿಸಿದ್ದು, ಈ ಆ್ಯಪ್‌ ಬಳಸಿಕೊಂಡು ಗಣತಿ ನಡೆಸಲಾಗುತ್ತಿದೆ. ವಿಶೇಷ ಎಂದರೆ, ಗಣತಿಗೆ ಒಳಪಟ್ಟ ಪ್ರತಿ ಮರಕ್ಕೂ ಕ್ಯೂಆರ್‌ ಕೋಡ್‌ ಅಂಟಿಸಲಾಗುತ್ತದೆ. ಈ ಕ್ಯೂಆರ್‌ ಕೋಡನ್ನು ಯಾರು ಬೇಕಾದರೂ ತಮ್ಮ ಮೊಬೈಲ್‌ ಮೂಲಕ ಸ್ಕ್ಯಾನ್‌ ಮಾಡಬಹುದಾಗಿದೆ. ಸ್ಕ್ಯಾನ್‌ ಮಾಡಿದರೆ ಮರದ ಜಾತಿ ಸೇರಿದಂತೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಉದ್ಯಾನ ನಗರಿ ಬೆಂಗಳೂರಿನ ಮರಗಳ ಗಣತಿ ಕಾರ್ಯ 2015ರಲ್ಲೇ ಆರಂಭವಾಗಬೇಕಿತ್ತು. ರಾಜ್ಯ ಅರಣ್ಯ ಇಲಾಖೆ ಹಾಗೂ ಪಾಲಿಕೆಯ ಅರಣ್ಯ ಘಟಕದ ನಡುವಿನ ಸಮನ್ವಯ ಕೊರತೆಯಿಂದಾಗಿ ಈ ಕಾರ್ಯ ವಿಳಂಬವಾಗಿತ್ತು. ಈ ನಡುವೆ ಕೆಲವು ಸಂಸ್ಥೆಗಳ ಸಹಯೋಗದಲ್ಲಿ ಬಿಬಿಎಂಪಿ ಮರಗಳ ಗಣತಿ ಆರಂಭಿಸುವುದಕ್ಕೆ ಮುಂದಾಗಿತ್ತು. ಆದರೆ, ಗಣತಿ ನಡೆಸುವಲ್ಲಿ ವಿಫಲವಾಗಿತ್ತು. ಈ ನಡುವೆ ನ್ಯಾಯಾಲಯವೂ ಮರಗಳ ಗಣತಿ ನಡೆಸುವಂತೆ ಬಿಬಿಎಂಪಿಗೆ ತರಾಟೆ ತೆಗೆದುಕೊಂಡಿತ್ತು. ಅಂತಿಮವಾಗಿ ಇದೀಗ ಬಿಬಿಎಂಪಿ ಅರಣ್ಯ ವಿಭಾಗವು ಮರಗಳ ಗಣತಿ ಕಾರ್ಯ ಆರಂಭಿಸಿದೆ.

ಸಿಲಿಕಾನ್ ಸಿಟಿಯಲ್ಲಿ ಅಚ್ಚರಿ: ಬೂರ್ಗದ ಮರದಲ್ಲಿ ಸೋರುತ್ತಿದೆ ರಕ್ತದಂಥ ದ್ರವ

ನಿನ್ನೆಯಿಂದಲೇ ಗಣತಿ ಶುರು:

ಇದೀಗ ಬಿಬಿಎಂಪಿ ಪ್ರಾಯೋಗಿಕವಾಗಿ ಎರಡು ವಾರ್ಡ್‌ಗಳಲ್ಲಿ ಮರಗಳ ಗಣತಿ ನಡೆಸುವುದಕ್ಕೆ ತೀರ್ಮಾನಿಸಿದೆ. ಪಶ್ಚಿಮ ವಲಯದ ವ್ಯಾಪ್ತಿಯ ಮಲ್ಲೇಶ್ವರ ವಾರ್ಡ್‌ (61) ಹಾಗೂ ಮಹದೇವಪುರ ವಲಯದ ವ್ಯಾಪ್ತಿಯ ಎಇಸಿಎಸ್‌ ಲೇಔಟ್‌ ವಾರ್ಡ್‌ನಲ್ಲಿ (109) ಪ್ರಾಯೋಗಿಕ ಗಣತಿಗೆ ನಿರ್ಧರಿಸಲಾಗಿದೆ. ಶನಿವಾರ ಮಲ್ಲೇಶ್ವರ ವಾರ್ಡ್‌ನಲ್ಲಿ ಮರಗಳ ಗಣತಿಗೆ ಚಾಲನೆ ನೀಡಲಾಗಿದೆ. ಒಂದೆರಡು ದಿನದಲ್ಲಿ ಎಇಸಿಎಸ್‌ ಲೇಔಟ್‌ ವಾರ್ಡ್‌ನಲ್ಲಿ ಗಣತಿ ಆರಂಭಿಸಲಾಗುತ್ತದೆ ಎಂದು ಪಾಲಿಕೆ ಅರಣ್ಯ ವಿಭಾಗದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಆ್ಯಪ್‌ ಆಧಾರಿತ ಗಣತಿ

ಬಿಬಿಎಂಪಿ ವ್ಯಾಪ್ತಿಯ ರಸ್ತೆ, ಉದ್ಯಾನವನ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯ ಆವರಣದಲ್ಲಿರುವ ಮರಗಳು, ಖಾಸಗಿ ಆಸ್ತಿಯಲ್ಲಿರುವ ಮರಗಳು ಸೇರಿದಂತೆ ಪ್ರತಿಯೊಂದು ಮರಗಳನ್ನು ಗಣತಿ ಮಾಡಲಾಗುತ್ತದೆ. ಗಣತಿ ಮಾಡುವುದಕ್ಕೆ ಬಿಬಿಎಂಪಿ ವಿಶೇಷ ಆ್ಯಪ್‌ ಒಂದನ್ನು ಅಭಿವೃದ್ಧಿ ಪಡಿಸಿದೆ. ಈ ಆ್ಯಪ್‌ನಲ್ಲಿ ಮರ ಹೆಸರು, ಎತ್ತರ, ಗಾತ್ರ, ವಯಸ್ಸು, ಯಾವ ಜಾತಿಗೆ ಸೇರಿದ ಮರ, ಮರದ ಸದೃಢತೆ ಸೇರಿದಂತೆ ಒಟ್ಟು 20ರಿಂದ 25 ಅಂಶದ ಮಾಹಿತಿ ಸಂಗ್ರಹಿಸಲಾಗುತ್ತದೆ. ಪ್ರತಿ ಮರಕ್ಕೂ ನಂಬರ್‌ ಸಹ ಹಾಕಲಾಗುತ್ತದೆ.

Namma Metro: ಮೆಟ್ರೋಗಾಗಿ ಕತ್ತರಿಸಿದ ಮರಕ್ಕೆ ಪ್ರತಿಯಾಗಿ ನೆಟ್ಟಸಸಿಗಳು ಎಷ್ಟು?

ಪ್ರಾಯೋಗಿಕ ಗಣತಿ ಬಳಿಕ ಸಮಗ್ರ ಯೋಜನೆ

ಬಿಬಿಎಂಪಿ ಕೇಂದ್ರ ಹಾಗೂ ಹೊರ ವಲಯದ ತಲಾ 2 ವಾರ್ಡ್‌ಗಳನ್ನು ಪ್ರಾಯೋಗಿಕ ಮರಗಳ ಗಣತಿ ಕಾರ್ಯಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಎರಡು ವಾರ್ಡ್‌ನ ಮರಗಳ ಗಣತಿಗೆ ಎಷ್ಟು ದಿನ ಬೇಕಾಗಲಿದೆ. ಎಷ್ಟುಸಿಬ್ಬಂದಿ ಬೇಕಾಗಲಿದೆ. ವೆಚ್ಚದ ಪ್ರಮಾಣ ಎಲ್ಲವನ್ನೂ ಗಮನಿಸಿ ಉಳಿದ 241 ವಾರ್ಡ್‌ಗಳ ಗಣತಿಗೆ ಸಮಗ್ರ ಯೋಜನೆ ರೂಪಿಸಲು ಪಾಲಿಕೆ ಅರಣ್ಯ ವಿಭಾಗ ನಿರ್ಧರಿಸಿದೆ.

ಕ್ಯೂಆರ್‌ ಕೋಡ್‌ ಅಳವಡಿಕೆ ಮತ್ತು ಆ್ಯಪ್‌ ಆಧರಿಸಿ ರಾಜ್ಯದಲ್ಲಿ ಇದೇ ಮೊದಲ ಬಾರಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮರಗಳ ಗಣತಿ ಕಾರ್ಯ ಆರಂಭಿಸಲಾಗಿದೆ. ಪ್ರಾಯೋಗಿಕವಾಗಿ ಮರಗಳ ಗಣತಿ ನಡೆಸುವುದಕ್ಕೆ 243 ವಾರ್ಡ್‌ಗಳ ಪೈಕಿ ಎರಡು ವಾರ್ಡ್‌ ಆಯ್ಕೆ ಮಾಡಿಕೊಳ್ಳಲಾಗಿದೆ. ಸಾಧಕ-ಬಾಧಕ ಅಂಶಗಳನ್ನು ಪರಿಶೀಲಿಸಿ ಎಲ್ಲ ವಾರ್ಡ್‌ಗಳ ಗಣತಿ ನಡೆಸಲಾಗುತ್ತದೆ ಅಂತ ಬಿಬಿಎಂಪಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios