ಪುತ್ತೂರು(ಜು.01): ಕೊರೋನಾ ಪ್ರಕರಣ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಯನ್ನು ವಾರದೊಳಗೆ ಕೊರೋನಾ ಚಿಕಿತ್ಸೆಗೆ ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಮಂಗಳವಾರ ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಕೊರೋನಾ ನಿಯಂತ್ರಣದ ಕುರಿತು ಕೈಗೊಳ್ಳಬೇಕಾದ ಮುನ್ನೆಚ್ಚೆರಿಕೆ ಕ್ರಮಗಳ ಬಗ್ಗೆ ಧಾರ್ಮಿಕ ಮುಖಂಡರು, ಸಂಘ-ಸಂಸ್ಥೆ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

'ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಕೊರೋನಾ ರೋಗಿಗಳ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿ'

ಪುತ್ತೂರು ನಗರ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲಿಯೂ ಮಾಸ್ಕ್‌ ರಹಿತ ಸಂಚಾರಕ್ಕೆ ದಂಡ ವಿಧಿಸಬೇಕು. ಕ್ರಮ ಬದ್ದವಲ್ಲದ ಧರಿಸುವಿಕೆ ಕಂಡಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಕೊರೊನಾ ನಿಯಂತ್ರಣಕ್ಕೆ ಬರುವ ತನಕ ಸರಕಾರಿ ಸಭೆ-ಸಮಾರಂಭೆ, ಧಾರ್ಮಿಕ ಕಾರ್ಯಕ್ರಮವನ್ನು ಸೀಮಿತ ಸಂಖ್ಯೆಯಲ್ಲಿ ಆಯೋಜಿಸಬೇಕು ಎಂದು ಈ ಸಂದರ್ಭದಲ್ಲಿ ಶಾಸಕರು ಸೂಚಿಸಿದರು.

ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ. ಯತೀಶ್‌ ಉಳ್ಳಾಲ್‌ ಮಾತನಾಡಿದರು. ಪುತ್ತೂರು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ವೈದ್ಯ ಡಾ. ಶ್ರೀಪತಿ ರಾವ್‌, ಡಾ. ಗಣೇಶ ಪ್ರಸಾದ್‌ ಮುದ್ರಾಜೆ, ಧರ್ಮಗುರು ಆಲೆಡ್‌ ಜೆ. ಪಿಂಟೋ, ಧರ್ಮಗುರು ಹುಸೈನ್‌ ದಾರಿಮಿ ರೆಂಜಲಾಡಿ, ಶಂಕರ ಭಟ್‌ ಸೇರಿದಂತೆ ಹಲವರು ವಿವಿಧ ಸಲಹೆ ಸೂಚನೆ ನೀಡಿದರು. ವೇದಿಕೆಯಲ್ಲಿ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಡಿವೈಎಸ್‌ಪಿ ದಿನಕರ ಶೆಟ್ಟಿ, ತಹಶೀಲ್ದಾರ್‌ ರಮೇಶ್‌ ಬಾಬು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್‌ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ ಸಿ. ಉಪಸ್ಥಿತರಿದ್ದರು.