ಎರಡು ಸೋಲಿನ ಬೆನ್ನಲ್ಲೇ ಡಿಕೆಶಿಗೆ ಮತ್ತೊಂದು ಸೋಲಿನ ಆಘಾತ
ರಾಜ್ಯದಲ್ಲಿ ಎರಡು ಉಪ ಚುನಾವಣೆ ಕ್ಷೇತ್ರಗಳನ್ನು ಕಳೆದುಕೊಂಡ ಬೆನ್ನಲ್ಲೇ ಇದೀಗ ಡಿಕೆಶಿ ಮತ್ತೊಂದು ಸೋಲಿನ ಆಘಾತ ಎದುರಾಗಿದೆ.
ವರದಿ : ಎಂ ಅಫ್ರೋಜ್ ಖಾನ್
ರಾಮನಗರ (ನ.11): ತೀವ್ರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ನ ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ವೈಯಕ್ತಿಕ ವರ್ಚಸ್ಸಿನಿಂದ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಕಂಡಿದ್ದ ಪುಟ್ಟಣ್ಣ ನಾಲ್ಕನೇ ಬಾರಿಗೆ ಕಮಲ ಹಿಡಿದು ಮೇಲ್ಮನೆ ಪ್ರವೇಶಿಸುತ್ತಿದ್ದಾರೆ. ಈ ಮೂಲಕ ವಿರೋಧಿಗಳಿಗೆ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಏನೆಂಬುದನ್ನು ಸಾಬೀತುಪಡಿಸಿ ತೋರಿಸಿದ್ದಾರೆ.
"
ಜೆಡಿಎಸ್ನಿಂದ ಉಚ್ಛಾಟನೆಗೊಂಡಿದ್ದ ಪುಟ್ಟಣ್ಣ ಅವರನ್ನು ಬಿಜೆಪಿ ತನ್ನತ್ತ ಸೆಳೆದುಕೊಂಡು ಅಭ್ಯರ್ಥಿಯಾಗಿ ಘೋಷಿಸಿತು. ಜೆಡಿಎಸ್ ವರಿಷ್ಠರು ಕ್ಷೇತ್ರದಲ್ಲಿ ಪಾರಮ್ಯ ಮುಂದುವರಿಸಲು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಅವರಿಗೆ ಮಣೆ ಹಾಕಿದರೆ, ಕಾಂಗ್ರೆಸ್ ಪಕ್ಷ ಹೊಸ ಮುಖ ಪ್ರವೀಣ್ ಕುಮಾರ್ ಅವರನ್ನು ಅಖಾಡಕ್ಕೆ ಇಳಿಸಿತು. ಈ ಚುನಾವಣೆಯಲ್ಲಿ ಸಾಮಾನ್ಯವಾಗಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ನಡೆಯುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಕಾಂಗ್ರೆಸ್ ಕೂಡ ಹೊಸ ಮುಖಕ್ಕೆ ಅವಕಾಶ ನೀಡಿದ್ದರಿಂದ ಪೈಪೋಟಿ ಕಂಡು ಬಂದಿತು. ಮೂರು ಪಕ್ಷಗಳು ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರತಿಷ್ಠೆಯನ್ನು ಪಣಕ್ಕಿರಿಸಿ ಪ್ರಬಲ ಪಟ್ಟುಗಳನ್ನು ಹಾಕಿದ್ದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟು ಗಮನ ಸೆಳೆದಿತ್ತು.
ಬೆನ್ನಿಗೆ ನಿಂತ ಆಡಳಿತ ಮಂಡಳಿಗಳು:
2002ರಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಪುಟ್ಟಣ್ಣ ಅವರು, ಮೂರು ಬಾರಿ ನಿರಂತರವಾಗಿ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಂಡಿದ್ದರು. ಪಕ್ಷ, ಜಾತಿ, ಧರ್ಮದ ಹಂಗಿಲ್ಲದೆ ಮಾಡಿರುವ ನಿಸ್ವಾರ್ಥ ಸೇವೆ ಜತೆಗೆ ಪಕ್ಷದ ವರ್ಚಸ್ಸು ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ಪುಟ್ಟಣ್ಣರವರ ನಂಬಿಕೆ ಹುಸಿಯಾಗಲಿಲ್ಲ. ಆದರೆ, ಈ ಚುನಾವಣೆಯಲ್ಲಿ ಪಕ್ಷಕ್ಕಿಂತ ಪುಟ್ಟಣ್ಣರವರ ವೈಯಕ್ತಿಕ ವರ್ಚಸ್ಸು ಮತಗಳಾಗಿ ಪರಿವರ್ತನೆಯಾದವು ಎನ್ನುತ್ತಾರೆ ಮತದಾರ ಶಿಕ್ಷಕರು.
'ನಿಖಿಲ್ ಕುಮಾರಸ್ವಾಮಿ ವಿರುದ್ಧ ಗರಂ : ಅನಿತಾ ವಿರುದ್ಧವೂ ಅಸಮಾಧಾನ'
ಮಂಡಿಯೂರಿದ ರಂಗ - ಪ್ರವೀಣ:
ಕ್ಷೇತ್ರದಲ್ಲಿ ಪುಟ್ಟಣ್ಣ ಜೆಡಿಎಸ್ನಿಂದಲೇ ಗೆಲ್ಲುತ್ತಾ ಬಂದಿದ್ದವರು. ಹೀಗಾಗಿ ತಮ್ಮ ಗೆಲುವು ಸುಲಭವೆಂದು ಜೆಡಿಎಸ್‌ನ ರಂಗನಾಥ್ ಭಾವಿಸಿದ್ದರು. ವೈಯಕ್ತಿಕ ಬಲಕ್ಕಿಂತಲೂ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವರ್ಚಸ್ಸನ್ನು ನಂಬಿಕೊಂಡಿದ್ದರು. ಆದರೂ ಚುನಾವಣೆಯಲ್ಲಿ 5107 ಮತಗಳನ್ನು ಪಡೆದಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದ ನಾಮಬಲವನ್ನೇ ಶ್ರೀರಕ್ಷೆ ಮಾಡಿಕೊಂಡಿದ್ದ ಪ್ರವೀಣ್ ಕುಮಾರ್ ಶಿಕ್ಷಕರ ನಿರೀಕ್ಷೆಯಂತೆ ಕ್ಷೇತ್ರದಲ್ಲಿ ಹೆಚ್ಚಿನ ಸದ್ದು ಮಾಡಲೇ ಇಲ್ಲ. ಕೇವಲ 782 ಮತಗಳನ್ನು ಪಡೆದು ತೀರಾ ಕಳಪೆ ಪ್ರದರ್ಶನ ತೋರಿದ್ದಾರೆ.
ಈ ಹಿಂದೆ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದರೂ ಪುಟ್ಟಣ್ಣ ಜೆಡಿಎಸ್ನಿಂದ ಮೂರು ಬಾರಿ ಗೆಲುವು ಸಾಧಿಸಿದ್ದರು. ಆದರೀಗ ತೆನೆ ಭಾರ ಇಳಿಸಿ ಕಮಲ ಹಿಡಿದ ಪುಟ್ಟಣ್ಣ ಅವರ ರಾಜಕೀಯ ಅನುಭವದ ಎದುರು ಪಾಠ ಕಲಿಸುವ ಹಂಬಲದಲ್ಲಿದ್ದ ದಳದ ರಂಗನಾಥ್ ಹಾಗೂ ಕೈ ಪಾಳಯದ ಪ್ರವೀಣ್ ಕುಮಾರ್ ಸೋತು ಮಂಡಿಯೂರಿದ್ದಾರೆ.