ರಾಯಚೂರು(ನ.20): ಮಂತ್ರಾಲಯದಲ್ಲಿ ತುಂಗಭದ್ರಾ ಪುಷ್ಕರ ಮಹೋತ್ಸವಕ್ಕೆ ರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಇಂದು(ಶುಕ್ರವಾರ) ಚಾಲನೆ ನೀಡಿದ್ದಾರೆ. ಪುಷ್ಕರ ಹಿನ್ನೆಲೆಯಲ್ಲಿ ಮಠದಲ್ಲಿ ಪ್ರಹ್ಲಾದ ರಾಜರ ಉತ್ಸವ, ಕಳಸದ ಮೆರವಣಿಗೆಯನ್ನ ಅದ್ಧೂರಿಯಾಗಿ ನೆರವೇರಿಸಲಾಗಿದೆ ಎಂದು ತಿಳಿದು ಬಂದಿದೆ. 

ತುಂಗಭದ್ರಾ ನದಿ ತಟದಲ್ಲಿ ಉತ್ಸವ ಮೂರ್ತಿಗೆ ಸುಬುಧೇಂದ್ರ ತೀರ್ಥರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ನದಿ ತಟದಲ್ಲಿ ಮಠದಿಂದ ನಿರ್ಮಿಸಿದ ತುಂಗಭದ್ರಾ ಮಾತೆಯ ಮೂರ್ತಿಯನ್ನು ಶ್ರೀಗಳು ಅನಾವರಣಗೊಳಿಸಿದ್ದಾರೆ. ಬಳಿಕ ನದಿಗೆ ಪೂಜೆ ಸಲ್ಲಿಸಿ, ದಂಡೋದಗ ಸ್ನಾನ ಮಾಡುವುದರ ಮೂಲಕ ಪುಷ್ಕರಕ್ಕೆ ಚಾಲನೆ ನೀಡಿದ್ದಾರೆ. 

ಶಾಲಾರಂಭದ ಬಗ್ಗೆ ಸರ್ಕಾರ ಮತ್ತೊಮ್ಮೆ ಚಿಂತಿಸಲಿ: ಶ್ರೀ ಸುಬುಧೇಂದ್ರ ತೀರ್ಥರು

ಕೊರೋನಾ ನಿಯಮವನ್ನ ಪಾಲಿಸಿ ಪುಷ್ಕರ ಪುಣ್ಯ ಸ್ನಾನ ಮಾಡಲು ಸುಬುಧೇಂದ್ರ ತೀರ್ಥರು ಸಲಹೆ ನೀಡಿದ್ದಾರೆ. ವರ್ಷದಲ್ಲಿ ನದಿ ದಡದ ಮೇಲೆ ಸುಂದರ, ಎಲ್ಲ ಸವಲತ್ತುಗಳ ಸ್ನಾನ ಘಟ್ಟ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು 13 ಕೋಟಿ  ರೂ. ಮಠಕ್ಕೆ ದೇಣಿಗೆಯಾಗಿ ನೀಡಿದ್ದಾರೆ.  ಇದೇ ದೇಣಿಗೆಯಿಂದ ನದಿ ದಡದ ಮೇಲೆ ಸ್ನಾನ ಘಟ್ಟ ನಿರ್ಮಾಣ ಮಾಡುತ್ತಿರುವುದಾಗಿ ಶ್ರೀಗಳು ಮಾಹಿತಿ ನೀಡಿದ್ದಾರೆ.