ಸಾರ್ವಜನಿಕ ಆಸ್ತಿ ವಿರೂಪಗೊಳಿಸಿದರೆ ಶಿಕ್ಷೆ: ಡೀಸಿ

ಸಾರ್ವಜನಿಕ ಆಸ್ತಿ ವಿರೂಪಗೊಳಿಸಿದರೆ ಶಿಕ್ಷೆ: ಡೀಸಿ

ಚುನಾವಣಾ ಆಯೋಗದ ಆದೇಶ ಉಲ್ಲಂಘಿಸಿದರೆ ಕ್ರಮ

18ರೊಳಗೆ ವಿಕಲಚೇತನರು, 80 ವರ್ಷ ಮೇಲ್ಪಟ್ಟವರು ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಸಿ

Punishment for defacement of public property: D C snr

  ತುಮಕೂರು :  ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಯಲ್ಲಿನ ಸಾರ್ವಜನಿಕ ಆಸ್ತಿ ಹಾಗೂ ತೆರೆದ ಸ್ಥಳಗಳನ್ನು ವಿರೂಪಗೊಳಿಸುವುದು ಶಿಕ್ಷಾರ್ಹ ಅಪರಾಧವೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್‌. ಪಾಟೀಲ ಸೂಚನೆ ನೀಡಿದ್ದಾರೆ.

ಕರ್ನಾಟಕ ಓಪನ್‌ ಪ್ಲೇಸಸ್‌ ಪ್ರಿವೆನ್ಶನ್‌ ಆಫ್‌ ಡಿಸ್‌ಫಿಗರ್‌ಮೆಂಟ್‌ ಕಾಯ್ದೆ 3, 4, 5, 6 ಮತ್ತು 8ರನ್ವಯ ಯಾವುದೇ ವ್ಯಕ್ತಿ ಅಥವಾ ಮತ್ತೊಬ್ಬ ವ್ಯಕ್ತಿ ಮೂಲಕ ಸ್ಥಳೀಯ ಆಡಳಿತದ ಲಿಖಿತ ಅನುಮತಿಯಿಲ್ಲದೆ ಸಾರ್ವಜನಿಕ ವೀಕ್ಷಣೆಗೆ ತೆರೆದಿರುವ ಸ್ಥಳಗಳಲ್ಲಿ ಯಾವುದೇ ಜಾಹೀರಾತನ್ನು ಅಂಟಿಸಿದರೆ ಅಥವಾ ನಿರ್ಮಿಸಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಭಾರತ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.ಚುನಾವಣಾ ಆಯೋಗದ ನಿರ್ದೇಶನದಂತೆ ಸ್ಥಳೀಯ ಆಡಳಿತದ ಲಿಖಿತ ಅನುಮತಿಯಿಲ್ಲದೆ ಯಾವುದೇ ವ್ಯಕ್ತಿ ಯಾವುದೇ ಸ್ಥಳದಲ್ಲಿ ಯಾವುದೇ ಜಾಹೀರಾತನ್ನು ಸಾರ್ವಜನಿಕ ವೀಕ್ಷಣೆಗೆ ಪ್ರಚುರಪಡಿಸುವುದನ್ನು ನಿಷೇಧಿಸಲಾಗಿದ್ದು, ಈ ನಿಷೇಧವನ್ನು ವಿರೋಧಿಸುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದರು.

ಚುನಾವಣಾ ಪ್ರಚಾರ ಸಮಯದಲ್ಲಿ ರಾಜಕೀಯ ಪಕ್ಷಗಳು/ಅಭ್ಯರ್ಥಿಗಳು ಪ್ರಚಾರಕ್ಕಾಗಿ ಸಾರ್ವಜನಿಕ/ಖಾಸಗಿ ಕಟ್ಟಡ, ತೆರೆದ ಸ್ಥಳ, ಗೋಡೆಗಳ ಮೇಲೆ ಅನಿಯಂತ್ರಿತವಾಗಿ ಬರೆದ ಪೋಸ್ಟರ್‌/ಜಾಹೀರಾತು ಅಂಟಿಸಿ ವಿರೂಪಗೊಳಿಸುವುದು ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ಸಾರ್ವಜನಿಕ ಆಸ್ತಿಗೆ ಹಾನಿ ಉಂಟಾಗುವುದಲ್ಲದೆ ಕಟ್ಟಡದ ಸೌಂದರ್ಯ ಹಾಳಾಗಿ ಜನರಿಗೆ ತೊಂದರೆ ಉಂಟಾಗುತ್ತದೆ ಎಂದು ಮನಗಂಡ ಆಯೋಗ ಈ ನಿದೇರ್ಶನ ನೀಡಿದೆ.

ಏಪ್ರಿಲ್‌ 18ರವರೆಗೂ ಅವಕಾಶ:

ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಈ ಬಾರಿ ಗೈರು ಮತ(ವಿಕಲಚೇತನರು ಮತ್ತು 80 ವರ್ಷ ಮೇಲ್ಪಟ್ಟವರು)ದಾರರು ಅಂಚೆ ಮೂಲಕ ಮತದಾನ ಮಾಡಲು ಹೊಸದಾಗಿ ಪರಿಚಯಿಸಲಾಗಿರುವ ನಮೂನೆ 12ಡಿಯನ್ನು ಭರ್ತಿ ಮಾಡಿ ಹಿಂದಿರುಗಿಸಲು ಏಪ್ರಿಲ್‌ 18ರವರೆಗೂ ಅವಕಾಶ ನೀಡಬೇಕೆಂದು ವೈ.ಎಸ್‌. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಲ್ಲಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮತಗಟ್ಟೆವಾರು ಗೈರು ಮತದಾರರ ಪಟ್ಟಿತಯಾರಿಸಿ ಅದಕ್ಕನುಗುಣವಾಗಿ ಎಲ್ಲ ಗೈರು ಮತದಾರರಿಗೂ ನಮೂನೆ 12ಡಿಯನ್ನು ವಿತರಣೆ ಮಾಡಲು ಬೂತ್‌ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಚುನಾವಣಾಧಿಕಾರಿಗಳಿಗೆ ಸೂಚಿಸಿದರಲ್ಲದೆ ಚುನಾವಣೆಗೆ ಸಂಬಂಧಿಸಿದಂತೆ ರಚಿಸಿರುವ ವಾಟ್ಸಪ್‌ ಗ್ರೂಪ್‌ ಅನ್ನು ಅಧಿಕಾರಿಗಳು ತಪ್ಪದೇ ಗಮನಿಸಿ ಯಾವುದೇ ಸಬೂಬು ಹೇಳದೆ ಜಿಲ್ಲಾ ಚುನಾವಾಣಾಧಿಕಾರಿಗಳು ನೀಡುವ ನಿರ್ದೇಶನವನ್ನು ಪಾಲಿಸಬೇಕು ಎಂದು ತಿಳಿಸಿದರು.

ನಮೂನೆ 12ಡಿಯನ್ನು ಮತಗಟ್ಟೆಮಟ್ಟದ ಅಧಿಕಾರಿಗಳು ಗೈರು ಮತದಾರರ ಮನೆಗೆ ಭೇಟಿ ನೀಡಿ ತಲುಪಿಸಬೇಕು. ಭರ್ತಿ ಮಾಡಿದ ನಮೂನೆಯನ್ನು ಏಪ್ರಿಲ್‌ 18ರೊಳಗೆ ಹಿಂಪಡೆಯಬೇಕು. ಏಪ್ರಿಲ್‌ 18ರ ನಂತರ ಸಲ್ಲಿಸಿದ ನಮೂನೆಗಳು ತಿರಸ್ಕೃತಗೊಳ್ಳುತ್ತದೆ ಎಂದು ಮತದಾರರಿಗೆ ಮಾಹಿತಿ ನಿಡಬೇಕು. ನಮೂನೆ 12ಡಿ ವಿತರಿಸುವ ಹಾಗೂ ಅರ್ಹ ಗೈರು ಮತದಾರರಿಂದ ಭರ್ತಿ ಮಾಡಿದ ನಮೂನೆಯನ್ನು ಹಿಂಪಡೆಯುವ ಪ್ರಕ್ರಿಯೆ ಕುರಿತು ಬಿಎಲ್‌ಒಗಳಿಗೆ ತರಬೇತಿ ನೀಡಬೇಕೆಂದು ನಿರ್ದೇಶನ ನೀಡಿದರು.

ಬಿಎಲ್‌ಒಗಳು ನಮೂನೆ 12ಡಿಯನ್ನು ಮತದಾರರಿಗೆ ನೀಡುವ ಸಂದರ್ಭದಲ್ಲಿ ಅವರ ಸಹಿ ಪಡೆದು ಮೊಬೈಲ್‌ ನಂಬರ್‌ಗಳನ್ನು ವಹಿಯಲ್ಲಿ ದಾಖಲಿಸಬೇಕು ಎಂದು ನಿರ್ದೇಶನ ನೀಡಿದರಲ್ಲದೆ ಮತದಾನ ದಿನದಂದು ಮತಗಟ್ಟೆಗೆ ಭೇಟಿ ನೀಡಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಗೈರು ಮತದಾರರಿಗೆ ಉತ್ತೇಜನ ನೀಡಬೇಕು. ಮತಗಟ್ಟೆಗೆ ಭೇಟಿ ನೀಡಲು ಸಾಧ್ಯವಿಲ್ಲದಿರುವವರಿಗೆ ನಮೂನೆ 12ಡಿಯನ್ನು ನೀಡಿ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಇಚ್ಛೆ ಪಟ್ಟವರಿಗೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಬೇಕು. ಒಮ್ಮೆ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದ ನಂತರ ಮತಗಟ್ಟೆಗೆ ಭೇಟಿ ನೀಡಿ ಮತದಾನ ಮಾಡಲು ಅವಕಾಶ ಇರುವುದಿಲ್ಲವೆಂದು ಮನವರಿಕೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಪಾಲಿಕೆ ಆಯುಕ್ತ ಎಚ್‌.ವಿ.ದರ್ಶನ್‌, ಉಪವಿಭಾಗಾಧಿಕಾರಿ ಎಚ್‌. ಶಿವಪ್ಪ, ತಹಸೀಲ್ದಾರ್‌ ಸಿದ್ದೇಶ್‌ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.

ಕೋಟ್‌.....1

ಚುನಾವಣಾ ಆಯೋಗದ ನಿಷೇಧ ಆದೇಶವನ್ನು ಉಲ್ಲಂಘಿಸಿದವರಿಗೆ 6 ತಿಂಗಳವರೆಗೆ ವಿಸ್ತರಿಸಬಹುದಾದ ಸೆರೆವಾಸ ಅಥವಾ 1000 ರು.ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು. ವಿರೂಪಗೊಳಿಸುವಿಕೆಯಿಂದ ಯಾವುದೇ ವ್ಯಕ್ತಿಗೆ ಅಡಚಣೆ, ಕಿರಿಕಿರಿ ಅಥವಾ ಹಾನಿ ಉಂಟು ಮಾಡಿದರೆ ಅಪರಾಧವೆಂದು ಪರಿಗಣಿಸಲಾಗುವುದು. ಅಲ್ಲದೆ ವಿರೂಪಗಳಿಸುವಿಕೆಯ ಮರುಸ್ಥಾಪನೆಯ ಸಂಪೂರ್ಣ ವೆಚ್ಚವನ್ನು ಅಪರಾಧಿಯಿಂದ ವಸೂಲಿ ಮಾಡಲಾಗುವುದು. ಈ ಆದೇಶವು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಜಾರಿಯಲ್ಲಿರುತ್ತದೆ.

ಪಾಟೀಲ ಜಿಲ್ಲಾಧಿಕಾರಿ

ಮತದಾನದ ಗೌಪ್ಯತೆ ಕಾಪಾಡಿ: ಸುಜಯ್‌

ಭೂದಾಖಲೆಗಳ ಉಪನಿರ್ದೇಶಕ ಸುಜಯ್‌ಕುಮಾರ್‌ ಮಾತನಾಡಿ ಜಿಲ್ಲೆಯಲ್ಲಿರುವ 29720 ವಿಕಲಚೇತನ ಹಾಗೂ 80 ವರ್ಷ ಮೇಲ್ಪಟ್ಟ55827 ಗೈರು ಮತದಾರರಿಗೆ ನಮೂನೆ 12ಡಿಯನ್ನು ವಿತರಣೆ ಮಾಡಲಾಗುವುದು. ನಮೂನೆ ವಿತರಣೆ ಮಾಡುವುದು, ಹಿಂಪಡೆಯುವುದು, ಮತದಾನದ ಪ್ರಕ್ರಿಯೆ ಬಗ್ಗೆ ವಿವರಣೆ ನೀಡಿದರಲ್ಲದೆ ಮತದಾನದ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ವೀಡಿಯೋಗ್ರಫಿ ಮಾಡಿಸಬೇಕು. ಗೈರು ಮತದಾರರು ಮತದಾನ ಮಾಡುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸಂಬಂಧಿಸದವರು ಇರಬಾರದು. ಆದರೆ ಮತದಾರನು ದೈಹಿಕ ದುರ್ಬಲತೆ ಇದ್ದು, ಸ್ವತಃ ಮತದಾನ ಮಾಡಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಮಾತ್ರ ವಯಸ್ಕ ವ್ಯಕ್ತಿಯ ಸಹಾಯ ಪಡೆಯಲು ಅವಕಾಶವಿದೆ. ಮತದಾನವನ್ನು ಬಹಿರಂಗ ಪಡಿಸದೆ ಗೌಪ್ಯವಾಗಿಡುವುದು ಕಡ್ಡಾಯ. ಚುನಾವಣಾ ಅಭ್ಯರ್ಥಿಗಳ ಏಜೆಂಟ್‌ಗಳು ದೂರದಿಂದ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಬಹುದೆಂದು ತಿಳಿಸಿದರು. 

Latest Videos
Follow Us:
Download App:
  • android
  • ios