Asianet Suvarna News Asianet Suvarna News

ಬೆಂಗಳೂರು: ನಾಯಂಡಹಳ್ಳಿ-ಬನ್ನೇರುಘಟ್ಟ ರಸ್ತೆಗೆ ಪುನೀತ್‌ ಹೆಸರು

ಪುನೀತ್‌ ಸಮಾಧಿ ಬಳಿ ಸ್ಮಾರಕವನ್ನೂ ನಾವೇ ನಿರ್ಮಿಸುತ್ತೇವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

Puneeth Rajkumar Name of Nayandahalli Bannerughatta Road in Bengaluru grg
Author
First Published Feb 8, 2023, 8:26 AM IST

ಬೆಂಗಳೂರು(ಫೆ.08): ‘ಅಪ್ಪು ಹೆಸರಿನಲ್ಲಿ ಸ್ಮಾರಕ ಮಾಡಬೇಕು ಎಂದು ಎಲ್ಲರೂ ಆಸೆ ಪಡುತ್ತಿದ್ದಾರೆ. ಅಪ್ಪುಗೆ ‘ಕರ್ನಾಟಕ ರತ್ನ’ ನೀಡುವ ಭಾಗ್ಯ ನನ್ನದಾಗಿದ್ದು ಸಮಾಧಿ ಬಳಿ ಸ್ಮಾರಕವನ್ನೂ ನಾವೇ ನಿರ್ಮಿಸುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಬಿಬಿಎಂಪಿ ಸಹಯೋಗದಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಯಂಡಹಳ್ಳಿಯಿಂದ ಬನ್ನೇರುಘಟ್ಟ ರಸ್ತೆಯ ಮೆಗಾಸಿಟಿ ಮಾಲ್‌ ಜಂಕ್ಷನ್‌ವರೆಗಿನ 12 ಕಿ.ಮೀ. ರಸ್ತೆಗೆ ‘ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ರಸ್ತೆ’ ಎಂದು ನಾಮಕರಣ ಮಾಡಿದ ಬಳಿಕ ‘ಬಾನ ದಾರಿಯಲ್ಲಿ ಪುನೀತ ಪಯಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೊಡ್ಡ ಹೆಸರು ಮಾಡಿದವರೆಲ್ಲಾ ಸಣ್ಣ ವಯಸ್ಸಿನಲ್ಲೇ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಆದರೆ ಅಪ್ಪು ಎಲ್ಲರ ಹೃದಯದಲ್ಲಿ ಹೆಸರು ಕೆತ್ತಿ ಹೋಗಿದ್ದಾರೆ. ಅಪ್ಪು ನಿಧನರಾದಾಗ ಜನಸಾಗರವೇ ಹರಿದು ಬಂದಿತ್ತು. ಒಬ್ಬ ವ್ಯಕ್ತಿ ಜನರ ಪ್ರೀತಿಯನ್ನು ಎಷ್ಟುಗಳಿಸಿದ್ದಾರೆ ಎಂದು ನೀವೆಲ್ಲಾ ನೋಡಿದ್ದೀರಾ. ಅಪ್ಪು ಅವರ ಹೆಸರನ್ನು ಈಗ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಪದ್ಮನಾಭ ನಗರ ಕ್ಷೇತ್ರದಲ್ಲಿ ಚಿರಸ್ಥಾಯಿ ಆಗಿಸಿದ್ದಾರೆ ಎಂದು ಬಣ್ಣಿಸಿದರು.

ಬ್ಯಾನರಲ್ಲಿ ಪುನೀತ್‌ ಚಿತ್ರ ಬಳಸದ್ದಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಿಡಿ

ನಟ ರಾಘವೇಂದ್ರ ರಾಜ್‌ಕುಮಾರ್‌ ಮಾತನಾಡಿ, ಕೆಲವು ಕಾರ್ಯಕ್ರಮದಲ್ಲಿ ಸಂತೋಷ ಪಡಬೇಕಾ, ದುಃಖ ಪಡಬೇಕಾ ಎಂದು ಗೊತ್ತಾಗುವುದಿಲ್ಲ. ತಂದೆಗೂ ಅಪ್ಪುಗೂ ಬಹಳ ಹೊಂದಾಣಿಕೆ ಇದೆ. ಅಪ್ಪಾಜಿ 46 ವರ್ಷಕ್ಕೆ ಡಾಕ್ಟರೇಟ್‌ಗೆ ಭಾಜನರಾದರು. ಅಪ್ಪು ಕೂಡ ಅಷ್ಟೇ ವರ್ಷಕ್ಕೆ ಡಾಕ್ಟರೇಟ್‌ ಪಡೆದರು. ಅಪ್ಪು ಎಲ್ಲಿ ಹೋಗಿದ್ದಾನೆ ಎಂದರೆ, ಪವರನ್ನು ಇಲ್ಲೇ ಬಿಟ್ಟು ಸ್ಟಾರ್‌ ಆಗಿ ಮೇಲೆ ಹೋದ ಎಂದು ಸ್ಮರಿಸಿದರು.

ಪುನೀತ್‌ ರಾಜ್‌ಕುಮಾರ್‌ ಅವರ ತ್ರಿಡಿ ಭಾವಚಿತ್ರವನ್ನು ಬಸವರಾಜ ಬೊಮ್ಮಾಯಿ ಅವರು ಅನಾವರಣಗೊಳಿಸಿದರು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಲಾಂಛನವನ್ನೂ ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಕಂದಾಯ ಸಚಿವ ಆರ್‌.ಅಶೋಕ್‌, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಎಂ.ಕೃಷ್ಣಪ್ಪ, ಉದಯ ಗರುಡಾಚಾರ್‌, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ನಟ ಅಭಿಷೇಕ್‌ ಅಂಬರೀಶ್‌, ನಿರ್ಮಾಪಕರಾದ ಭಾ.ಮ.ಹರೀಶ್‌, ರಾಕ್‌ಲೈನ್‌ ವೆಂಕಟೇಶ್‌ ಇದ್ದರು.

ರೇಸ್‌ಕೋರ್ಸ್‌ ರಸ್ತೆಗೆ ಅಂಬರೀಶ್‌ ಹೆಸರು

ನಗರದ ರೇಸ್‌ಕೋರ್ಸ್‌ ರಸ್ತೆಗೆ ರೆಬಲ್‌ ಸ್ಟಾರ್‌ ಅಂಬರೀಶ್‌ ಹೆಸರನ್ನು ನಾಮಕರಣ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದ್ದು ಇದನ್ನು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ಮಾರ್ಚ್‌ ಮೊದಲ ವಾರದಲ್ಲಿ ಅಂಬರೀಶ್‌ ಸ್ಮಾರಕ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.

ಪುನೀತ್ ಕಾರ್ಯಕ್ರಮದಲ್ಲಿ ಬೊಂಬೆ ಹೇಳುತೈತೆ ಹಾಡು ಹಾಡಿದ ಸಿಎಂ ಬೊಮ್ಮಾಯಿ!

ಅಭಿವೃದ್ಧಿ ಕಾರ‍್ಯಗಳ ಲೋಕಾರ್ಪಣೆ

ವಾರ್ಡ್‌ ನಂ.182ರಲ್ಲಿ ಮೇಕ್‌ ಇನ್‌ ಇಂಡಿಯಾ ಅಭಿಯಾನದಡಿ ನಿರ್ಮಿಸಿರುವ ಅಶೋಕ ಸ್ತಂಭ ಉದ್ಯಾನವನ, ಆರ್‌.ಕೆ. ಲೇಔಟ್‌ನಲ್ಲಿ ಶ್ರೀ ಗುರು ಶಂಕರ ಉದ್ಯಾನವನ, ಕಾರ್ಮೆಲ್‌ ಶಾಲೆಯ ಪಕ್ಕದಲ್ಲಿ ನವೀಕರಣಗೊಂಡ ಅಟಲ್‌ ಬಿಹಾರಿ ವಾಜಪೇಯಿ ಆಟದ ಮೈದಾನದ ಲೋಕಾರ್ಪಣೆ, ವಾರ್ಡ್‌ ನಂ.165 ರಲ್ಲಿ ನಿರ್ಮಿಸಿರುವ ಶ್ರೀ ಹನುಮಾನ್‌ ಚಾಲೀಸ ಕ್ರೀಡಾಂಗಣ, ದೋಭಿಘಾಟ್‌ನಲ್ಲಿ ನಿರ್ಮಿಸಿರುವ ವಸತಿ ಸಮುಚ್ಛಯದ 28 ಮನೆಗಳನ್ನೂ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದರು.

ಪದ್ಮನಾಭನಗರ ವಿಧಾನ ಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಯಂಡಹಳ್ಳಿಯಿಂದ ಬನ್ನೇರುಘಟ್ಟರಸ್ತೆಯ ಮೆಗಾಸಿಟಿ ಮಾಲ್‌ ಜಂಕ್ಷನ್‌ವರೆಗಿನ ರಸ್ತೆಗೆ ‘ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ರಸ್ತೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಕರಣ ಮಾಡಿದರು. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಕಂದಾಯ ಸಚಿವ ಆರ್‌.ಅಶೋಕ್‌, ನಟ ರಾಘವೇಂದ್ರ ರಾಜ್‌ಕುಮಾರ್‌ ಇದ್ದರು.

Follow Us:
Download App:
  • android
  • ios