Puneeth Rajkumar Inspiration : ಪುನೀತ್ ಹೆಸರಿನಲ್ಲಿ ಉಚಿತ ಗ್ರಂಥಾಲಯ ತೆರೆದ ಯಾದಗಿರಿ ಪೊಲೀಸ್
* ಪುನೀತ್ ರಾಜ್ ಕುಮಾರ್ ಅಭಿಮಾನಿಯಿಂದ ಮಾದರಿ ಕಾರ್ಯ
*ಸ್ಪರ್ಧಾತ್ಮಕ ಪರೀಕ್ಷೆ ವಿದ್ಯಾರ್ಥಿಗಳಿಗೆ ಉಚಿತ ಗ್ರಂಥಾಲಯ
* ವೈಫೈ ಮತ್ತು ಕುಡಿಯುವ ನೀರಿನ ವ್ಯವಸ್ಥೆ
* ಗೃಹ ಸಚಿವ ಆರಗ ಜ್ಞಾನೇಂದ್ರರಿಂದ ಮೆಚ್ಚುಗೆ
ಶಹಾಪುರ( ಫೆ. 07) ಪುನೀತ್ ರಾಜ್ ಕುಮಾರ್ (Puneeth Rajkumar)ಅಗಲಿಕೆ ನಂತರ ಅದೆಷ್ಟೋ ಜನರು ನೇತ್ರದಾನಕ್ಕೆ ಹೆಸರು ನೋಂದಾಯಿಸಿದರು. ರಕ್ತದಾನ ಶಿಬಿರಗಳು ನಡೆದವು. ಸಾಮಾಜಿಕ ಕೆಲಸಗಳು ಪುನೀತ್ ಹೆಸರಿನಲ್ಲಿ ಒಂದೊಂದಾಗಿ ನಡೆಯುತ್ತಲೇ ಬಂದವು. ಈಗ ಅದೇ ಸಾಲಿಗೆ ಮತ್ತೊಂದು ಸೇರ್ಪಡೆ.
ಯಾದಗಿರಿ (Yadagiri) ಜಿಲ್ಲೆಯ ಪೊಲೀಸ್ ಕಾನ್ ಸ್ಟೇಬಲ್ ಅತ್ಯುತ್ತಮ ಮಾದರಿಗೆ ಅಡಿಪಾಯ ಹಾಕಿದ್ದಾರೆ. ಸಿಬ್ಬಂದಿ ನಾಗರಾಜ ದಿಂಡವಾರ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತ ಮಾಹಿತಿ ಒಳಗೊಂಡ ಗ್ರಂಥಾಲಯ (Library) ತೆರೆದು ಅದಕ್ಕೆ ಪುನೀತ್ ರಾಜ್ ಕುಮಾರ್ ಹೆಸರು ಇಟ್ಟಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಸಿಬ್ಬಂದಿಯ ಕೆಲಸವನ್ನು ಕೊಂಡಾಡಿದ್ದಾರೆ.
ಪುನೀತ್ ಜೇಮ್ಸ್ ಗೆ ದನಿ ನೀಡಿದ ಶಿವಣ್ಣ
ಶಹಾಪುರದ ಪೊಲೀಸ್ ಕಾನ್ಸ್ಟೇಬಲ್ ನಾಗರಾಜ ದಿಂಡವಾರ ಅವರು ಕರ್ತವ್ಯದ ಜೊತೆಗೆ ಜ್ಞಾನಪ್ರಸಾರದ ಕಾರ್ಯವನ್ನೂ ಮಾಡುತ್ತಿರುವುದು ಶ್ಲಾಘನೀಯ. ನಟ ಪುನೀತ್ ರಾಜ್ ಕುಮಾರ್ ಅವರ ಹೆಸರಿನ ಈ ಶಿಕ್ಷಣ ಸೇವೆ ನಿರಂತರವಾಗಿರಲಿ ಎಂದು ಹೇಳಿದ್ದಾರೆ.
ಶಹಾಪುರ ಬಸ್ ನಿಲ್ದಾಣದ ಬಳಿ ಬಾಡಿಗೆ ಅಂಗಡಿಯೊಂದನ್ನು ಪಡೆದು ವಿದ್ಯಾರ್ಥಿಗಳು ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಪಿಯುಸಿ ಶಿಕ್ಷಣ ಪಡೆದುಕೊಂಡ ನಂತರ ಎದುರಾಗಬಹುದಾದ ಎಲ್ಲ ಬಗೆಯ ಕಾಂಪಿಟೇಟಿವ್ ಪರೀಕ್ಷೆಗೆ ಪೂರ್ವತಯಾರಿ ನಡೆಸಲು ಬೇಕಾಗುವ ಅಧ್ಯಯನ ಸಾಮಗ್ರಿ, ದಿನಪತ್ರಿಕೆ, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಈ ಗ್ರಂಥಾಲಯದ ನೆರವಿನಲ್ಲಿ ಪಡೆದುಕೊಳ್ಳಬಹುದು.
ವೈಫೈ ಸೌಲಭ್ಯವನ್ನು ನೀಡಲಾಗಿದ್ದು ಕುಡಿಯುವ ನೀರನ್ನು ಸಹ ಉಚಿತವಾಗಿ ಒದಗಿಸಿಕೊಟ್ಟಿದ್ದಾರೆ. ನಟ ಪುನೀತ್ ಅವರ ಅಭಿಮಾನಿಯಾಗಿದ್ದುಕೊಂಡು ಅವರ ಪ್ರೇರಣೆಯಿಂದ ಈ ಕೆಲಸ ಮಾಡುತ್ತಿದ್ದೇನೆ ಎಂದು ಸಿಬ್ಬಂದಿ ನಾಗರಾಜ ತಿಳಿಸಿದ್ದಾರೆ. ಇಂಥ ಮಾದರಿ ಕೆಲಸಕ್ಕೆ ಪ್ರತಿಯೊಬ್ಬರ ಪ್ರೋತ್ಸಾಹ ಅತ್ಯಗತ್ಯ .
ಪುನೀತ್ ರಾಜ್ ಕುಮಾರ್ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿಕೊಂಡೇ ಬಂದಿದ್ದರು. ಅವರ ಸಾವಿನ ನಂತರ ಎಲ್ಲ ಕಾರ್ಯಗಳು ಗೊತ್ತಾದವು. ಶಾಂತಿಧಾಮವನ್ನು ಮುನ್ನಡೆಸಿಕೊಂಡು ಬಂದಿದ್ದರು. ಪುನೀತ್ ಶಿಕ್ಷಣ ನೀಡುತ್ತಿದ್ದ ಎಕ್ಕ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದು ತಮಿಳು ನಟ ವಿಶಾಲ್ ಘೋಷಣೆ ಮಾಡಿದ್ದರು .
ಪ್ರತಿದಿನ ಪುನೀತ್ ಗೆ ಪೂಜೆ: ದಿವಂಗತ ಪುನೀತ್ ರಾಜ್ ಕುಮಾರ್ ಅವರನ್ನು ಪ್ರತಿ ದಿನ ಸ್ಮರಣೆ ಮಾಡಿಕೊಳ್ಳಲಾಗುತ್ತಿದೆ. ಕೊಪ್ಪಳದ ಈ ಶಾಲೆಯಲ್ಲಿ ಪ್ರತಿದಿನ ರಾಜಕುಮಾರನಿಗೆ ನಮನ ಸಲ್ಲಿಸಲಾಗುತ್ತದೆ. ಪುನೀತ್ ರಾಜ್ ಕುಮಾರ್ ಅವರ ಪೋಟೋ ಇಟ್ಟು ಅವರ ಹಾಡುಗಳ ಮೂಲಕ ಪುಟಾಣಿಗಳು (Chidren) ಆರಾಧನೆ ಮಾಡುತ್ತಲೇ ಬಂದಿದ್ದಾರೆ. ಹೃದಯ ಸ್ತಂಭನಕ್ಕೆ ಪುನೀತ್ ರಾಜ್ ಕುಮಾರ್ ಕಲಾಲೋಕವನ್ನು ಅಗಲಿದ್ದರು.