Asianet Suvarna News Asianet Suvarna News

ಡಿಸಿ ರೋಹಿಣಿ ಸಿಂಧೂರಿಯಿಂದ ಖಡಕ್ ಎಚ್ಚರಿಕೆ ಸಂದೇಶ

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಖಡಕ್ ಎಚ್ಚರಿಕೆ ಒಂದನ್ನು ರವಾನಿಸಿದ್ದಾರೆ. ಏನದು ಎಚ್ಚರಿಕೆ ಸಂದೇಶ..?

Publics Entry prohibited to Dasara Says DC Rohini sindhuri snr
Author
Bengaluru, First Published Oct 15, 2020, 11:27 AM IST
  • Facebook
  • Twitter
  • Whatsapp

ಮೈಸೂರು( ಅ.15):  ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ನಡೆಯುವ ಉದ್ಘಾಟನೆ, ಜಂಬೂಸವಾರಿ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದು, ನೇರಪ್ರಸಾರ (ವರ್ಚುವಲ್‌) ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಕೊರೋನಾ ಸೋಂಕಿನ ಪ್ರಮಾಣ ಮತ್ತು ದಸರಾ ಆಚರಣೆ ಸಂಬಂಧ ಬುಧವಾರ ಸಂಜೆ ಫೇಸ್‌ ಲೈವ್‌ ಮೂಲಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ದಸರಾ ಮಾಡಬೇಕಾದರೆ ಹೆಚ್ಚಿನ ಜನ ಸಂಗ್ರಹಣೆ ಆಗಬಾರದು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿಯೂ ಕೆಲವೊಂದು ತೀರ್ಮಾನವಾಗಿತ್ತು. ಆದರೆ, ಆರೋಗ್ಯ ಇಲಾಖೆಯಿಂದ ತಾಂತ್ರಿಕ ತಂಡ ಬಂದು ಪರೀಕ್ಷಿಸಿದೆ. ಈ ತಂಡವು ಚಾಮುಂಡಿಬೆಟ್ಟ, ಅರಮನೆ ಆವರಣ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದ ಎಲ್ಲೆಡೆಗೆ ಭೇಟಿ ನೀಡಿದೆ. ಅದರ ಪ್ರಕಾರ ಈ ಹಿಂದೆ ದಸರಾ ಸಂದರ್ಭದಲ್ಲಿ ಒಂದು ದಿನಕ್ಕೆ ಕನಿಷ್ಠ ಒಂದು ಲಕ್ಷ ಮಂದಿ ಸೇರುತ್ತಿದ್ದರು. ಬೇರೆಡೆಯಿಂದ ಬಹಳ ಮಂದಿ ಬರುತ್ತಿದ್ದರು. ಆ ಮಟ್ಟಕ್ಕೆ ದಸರಾ ಆಚರಿಸುವುದು ಸವಾಲಿನ ಕೆಲಸ. ಆ ತಂಡ ನೀಡಿದ ವರದಿ ಅನ್ವಯ ಹೆಚ್ಚಿನ ಜನ ಸೇರುವಂತಿಲ್ಲ ಎಂದರು.

ಚಾಮುಂಡಿ ಬೆಟ್ಟಕ್ಕೆ ಅ.14 ರಿಂದ 3 ದಿನಗಳ ಕಾಲ ನಿಷೇಧ ...

ಈ ಹಿನ್ನೆಲೆಯಲ್ಲಿ ಈ ಬಾರಿ ಸರಳ, ವರ್ಚುವಲ್‌ ಮತ್ತು ಸಾಂಪ್ರದಾಯಿಕ ದಸರ ಆಚರಿಸುತ್ತಿದ್ದು, ಅದನ್ನು ನೇರ ಪ್ರಸಾರ ಮಾಡುತ್ತೇವೆ. ಮನೆಯಲ್ಲಿಯೇ ಕುಳಿತು ಸಾರ್ವಜನಿಕರು ವೀಕ್ಷಿಸಬೇಕು. ನಗರದಲ್ಲಿನ ವಿದ್ಯುತ್‌ ದೀಪಾಲಂಕಾರ ವ್ಯವಸ್ಥೆಯನ್ನು ಶೇ. 50ಕ್ಕೆ ಇಳಿಸಲಾಗಿದೆ. ಈ ತಿಂಗಳಲ್ಲಿ ಸಾಲು ಸಾಲು ರಜೆ ಇರುವುದರಿಂದ ಜನರು ಹೆಚ್ಚು ಮಂದಿ ಸೇರಬಹುದು. ಆದ್ದರಿಂದ ಚಾಮುಂಡಿಬೆಟ್ಟ, ಮೃಗಾಲಯ, ಅರಮನೆ ಮತ್ತು ನಂಜನಗೂಡಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅ. 14 ರಿಂದ 17 ಮತ್ತು ಅ. 23 ರಿಂದ 26 ರವರೆಗೆ ಚಾಮುಂಡಿಬೆಟ್ಟಕ್ಕೆ, ಅರಮನೆ ಮತ್ತು ಮೃಗಾಲಯಕ್ಕೆ ಅ.17 ರಿಂದ 1 ರವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದರು.

ಅ. 17 ರಂದು ಬೆಳಗ್ಗೆ ಮುಖ್ಯಮಂತ್ರಿಗಳು ಮತ್ತು ಉದ್ಘಾಟಕರು, ಕೊರೋನಾ ವಾರಿಯರ್ಸ್‌ಗಳು ದಸರಾ ಉದ್ಘಾಟಿಸಲಿದ್ದು, ಅಂದು ಸಂಜೆಯಿಂದ ಅ. 26 ರವರಗೆ ಅರಮನೆ ಆವರಣದಲ್ಲಿ ಪ್ರತಿದಿನ 2 ಗಂಟೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನೂ ಕೂಡ ನೇರ ಪ್ರಸಾರ ಮಾಡಲಾಗುತ್ತಿದೆ. ಜಂಬೂಸವಾರಿ ಅರಮನೆ ಒಳಗೆ ಮಾತ್ರ ನಡೆಯಲಿದ್ದು, ಸುಮಾರು ಅರ್ಧ ಕಿ.ಮೀ. ಇರುತ್ತದೆ. ಸಾಂಪ್ರದಾಯಕವಾಗಿ ಏನೆಲ್ಲ ಕಾರ್ಯಕ್ರಮ ನಡೆಸಬೇಕೋ ಅದನ್ನು ಮಾಡುತ್ತೇವೆ. ನಂಜನಗೂಡು ಮತ್ತು ಚಾಮುಂಡಿಬೆಟ್ಟದೇವಸ್ಥಾನ ಮುಚ್ಚಿದರೂ ದೇವಾಲಯದ ಒಳಗೆ ನಡೆಯುವ ಪೂಜೆಗೆ ತೊಂದರೆ ಆಗುವುದಿಲ್ಲ ಎಂದು ವಿವರಿಸಿದರು.

ಮೈಸೂರು ಜಿಲ್ಲೆಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಸಂಬಂಧ ಜಿಲ್ಲಾಡಳಿತ ಸಾಕಷ್ಟುಸುಧಾಕರಣ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್‌ ನಡುವೆಯು ದಸರಾ ಆಚರಿಸಬೇಕಿದೆ. ಮಾಚ್‌ರ್‍ನಿಂದ ಈವರೆಗೆ ಜಿಲ್ಲೆಯಲ್ಲಿ ಸುಮಾರು 42,789 ಮಂದಿಗೆ ಸೋಂಕು ತಗುಲಿದೆ. ಅಂದರೆ ಪ್ರತಿದಿನ ಸರಾಸರಿ 500 ರಿಂದ 600 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಸಾವಿನ ಪ್ರಮಾಣವನ್ನು ಅಂದಾಜಿಸುವುದಾದರೆ ರಾಜ್ಯದಲ್ಲಿ ಈವರೆಗೆ 10 ಸಾವಿರ ಮಂದಿ ಮೃತಪಟ್ಟಿದ್ದರೆ, ಈ ಪೈಕಿ ಜಿಲ್ಲೆಯಲ್ಲಿ 900 ಮಂದಿ ಮೃತಪಟ್ಟಿದ್ದು, ಶೇ. 10ರಷ್ಟುಪ್ರಮಾಣ ಮೈಸೂರಿನಲ್ಲಿಯೇ ಆಗಿದೆ ಎಂದು ಆಂತಕ ವ್ಯಕ್ತಪಡಿಸಿದರು.

ಬೆಂಗಳೂರು ನಂತರ ಹೆಚ್ಚು ಸೋಂಕಿತರ ಪ್ರಮಾಣ ಮೈಸೂರಿನಲ್ಲಿ ಕಂಡುಬರುತ್ತಿದೆ. ಕಳೆದ ಒಂದು, ಒಂದೂವರೆ ತಿಂಗಳಿಂದ ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಜಿಲ್ಲಾಡಳಿತವು ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಹೆಚ್ಚು ಜನಸಂದಣಿ ಸೇರಿದರೆ ತೊಂದರೆಯಾಗಲಿದೆ. ಈಗ ಮೈಸೂರಿನಲ್ಲಿ 43 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಅವರು ಒಂದು ವಾರಕಾಲ ಯಾವುದೇ ಪರೀಕ್ಷೆ ಪಡೆಯದೆ ಮನೆಯಲ್ಲಿಯೇ ಇದ್ದರು. ಅವರಿಗೆ ಉಸಿರಾಟದ ತೊಂದರೆ ಕಂಡುಬಂದ ಬಳಿಕ ಆಸ್ಪತ್ರೆ ಸೇರಿದ್ದಾರೆ. ಆದ್ದರಿಂದ ಸಾಧ್ಯವಾದರೆ ಸಾರ್ವಜನಿಕರು ಆಮ್ಲಜನಕ ಪ್ರಮಾಣ ಪರೀಕ್ಷಿಸುವ ಸಾಧನವನ್ನು ಖರೀದಿಸಿ ಇಟ್ಟುಕೊಂಡರೆ ಒಳ್ಳೆಯದು. ಈ ಪ್ರಮಾಣವು 90ಕ್ಕಿಂತ ಕಡಿಮೆ ಆಗಬಾರದು ಎಂದರು.

Follow Us:
Download App:
  • android
  • ios