ಕೋಲಾರ ನಗರದ ಆರ್‌ಟಿಒ ಕಚೇರಿ ಬಳಿ ಬೀದಿನಾಯಿಯೊಂದು ಏಕಾಏಕಿ ದಾಳಿ ನಡೆಸಿ, ಒಂದೇ ದಿನದಲ್ಲಿ 21 ಜನರನ್ನು ಕಚ್ಚಿ ಗಾಯಗೊಳಿಸಿದೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೊನೆಗೆ ಸ್ಥಳೀಯರೇ ನಾಯಿಯನ್ನು ಹೊಡೆದು ಸಾಯಿಸಿದ್ದಾರೆ.

ಕೋಲಾರ: 2025ರ ಕೊನೆಯ ದಿನವೇ ಕೋಲಾರ ನಗರದಲ್ಲಿ ಭೀತಿಯ ವಾತಾವರಣ ನಿರ್ಮಾಣಗೊಂಡಿದೆ. ನಗರದ ಆರ್‌ಟಿಒ (RTO) ಕಚೇರಿ ಸಮೀಪ ಬೀದಿನಾಯಿ ಏಕಾಏಕಿ ದಾಳಿ ನಡೆಸಿ, ಒಂದೇ ದಿನ ಸುಮಾರು 21 ಜನರನ್ನು ಕಚ್ಚಿ ಗಾಯಗೊಳಿಸಿದ ಘಟನೆ ನಗರವನ್ನು ಬೆಚ್ಚಿಬೀಳಿಸಿದೆ. ಬೆಳಿಗ್ಗೆಯಿಂದಲೇ ಆರಂಭವಾದ ಈ ಅವಘಡದಲ್ಲಿ, ಆರ್‌ಟಿಒ ಕಚೇರಿ ಬಳಿ ಕುಳಿತಿದ್ದ ಹಾಗೂ ಕಚೇರಿ ಕಾರ್ಯಕ್ಕಾಗಿ ಆಗಮಿಸಿದ್ದ ಜನರ ಮೇಲೆ ಬೀದಿನಾಯಿ ಏಕಾಏಕಿ ದಾಳಿ ನಡೆಸಿದೆ. ಯಾವುದೇ ಮುನ್ಸೂಚನೆಯಿಲ್ಲದೆ ಸಿಕ್ಕಿ ಸಿಕ್ಕವರನ್ನು ಕಚ್ಚುತ್ತಾ ಬೀದಿನಾಯಿ ಅಟ್ಟಹಾಸ ಮೆರೆದಿದ್ದು, ಕ್ಷಣಾರ್ಧದಲ್ಲೇ ನಾಲ್ಕೈದು ಮಂದಿಗೆ ಗಾಯಗಳಾಗಿವೆ. ನಾಯಿ ದಾಳಿಯ ನಂತರ ಜನ ಭಯಭೀತರಾಗಿ ಓಡಿ ಹೋಗಿದ್ದಾರೆ.

ಸಿಸಿ ಟಿವಿಯಲ್ಲಿ ನಾಯಿ ದಾಳಿಯ ದೃಶ್ಯ ದಾಖಲೆ

ಬೀದಿನಾಯಿ ದಾಳಿ ನಡೆಸಿದ ಭೀಕರ ದೃಶ್ಯಗಳು ಆರ್‌ಟಿಒ ಕಚೇರಿ ಸಮೀಪ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ದಾಖಲಾಗಿವೆ. ದೃಶ್ಯಗಳಲ್ಲಿ, ರಸ್ತೆಯ ಬದಿಯಲ್ಲಿ ಕುಳಿತಿದ್ದ ಹಾಗೂ ನಡೆದುಕೊಂಡು ಹೋಗುತ್ತಿದ್ದ ಜನರ ಮೇಲೆ ನಾಯಿ ಏಕಾಏಕಿ ಜಿಗಿದು ಕಚ್ಚುತ್ತಿರುವುದು, ಜನರು ಭಯದಿಂದ ಓಡಿಹೋಗುತ್ತಿರುವುದು ಕಾಣಿಸುತ್ತದೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ.

ದಿನವಿಡೀ ಮುಂದುವರಿದ ನಾಯಿ ಅಟ್ಟಹಾಸ

ಬೆಳಿಗ್ಗೆಯಿಂದ ಸಂಜೆವರೆಗೆ ನಗರದ ವಿವಿಧೆಡೆ ಅಲೆದಾಡಿದ ಈ ಬೀದಿನಾಯಿ, ಸುಮಾರು 21 ಜನರನ್ನು ಕಚ್ಚಿ ಗಾಯಗೊಳಿಸಿದೆ ಎನ್ನಲಾಗಿದೆ. ಗಾಯಗೊಂಡವರನ್ನು ತಕ್ಷಣವೇ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನವರಿಗೆ ಕೈ, ಕಾಲು ಹಾಗೂ ಕಾಲಿನ ಭಾಗದಲ್ಲಿ ಗಾಯಗಳಾಗಿದ್ದು, ರೇಬೀಸ್ ಸೋಂಕಿನ ಭೀತಿಯಿಂದ ಲಸಿಕೆ ಚಿಕಿತ್ಸೆ ನೀಡಲಾಗಿದೆ.

ಸ್ಥಳೀಯರಿಂದ ಬೀದಿನಾಯಿ ಹತ್ಯೆ

ನಾಯಿ ದಾಳಿಯಿಂದ ಬೆಚ್ಚಿಬಿದ್ದ ಸ್ಥಳೀಯರು, ಸಂಜೆ ವೇಳೆಗೆ ಕೋಲಾರ ಬೈಪಾಸ್ ರಸ್ತೆ ಸಮೀಪ ಬೀದಿನಾಯಿಯನ್ನು ಹಿಡಿದು ಹೊಡೆದು ಸಾಯಿಸಿದ್ದಾರೆ ಎನ್ನಲಾಗಿದೆ. ನಿರಂತರ ದಾಳಿಯಿಂದ ಜನರ ಜೀವಕ್ಕೆ ಅಪಾಯ ಉಂಟಾಗಿದ್ದ ಕಾರಣ ಈ ಕ್ರಮ ಕೈಗೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ನಗರಸಭೆ ನಿರ್ಲಕ್ಷ್ಯದ ಆರೋಪ

ಸತತ ಬೀದಿನಾಯಿ ಸಮಸ್ಯೆ ಬಗ್ಗೆ ನಗರಸಭೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಮಕ್ಕಳಿಗೂ ವೃದ್ಧರಿಗೂ ಅಪಾಯ ಎದುರಾಗುತ್ತಿದೆ. ಇದಕ್ಕೂ ಮುನ್ನ ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಅಧಿಕಾರಿಗಳ ಕ್ರಮಕ್ಕೆ ಒತ್ತಾಯ

ಈ ಘಟನೆ ಬಳಿಕವಾದರೂ ನಗರಸಭೆ ಮತ್ತು ಆರೋಗ್ಯ ಇಲಾಖೆ ಬೀದಿನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಗಾಯಗೊಂಡವರಿಗೆ ಸಮರ್ಪಕ ಚಿಕಿತ್ಸೆ ಮತ್ತು ಪರಿಹಾರ ನೀಡಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಹೊಸ ವರ್ಷಕ್ಕೆ ಕಾಲಿಡುವ ಮುನ್ನವೇ ಕೋಲಾರದಲ್ಲಿ ನಡೆದ ಈ ಅವಘಡ, ಆಡಳಿತ ವ್ಯವಸ್ಥೆಯ ಮೇಲಿನ ಪ್ರಶ್ನೆಗಳನ್ನು ಎಬ್ಬಿಸಿದೆ.