ಎಚ್ಚೆತ್ತುಕೊಳ್ಳದ ಜನತೆ: ಮಾರ್ಷಲ್‌ಗಳ ಜತೆ ಮಾಸ್ಕ್ ಧರಿಸದವರ ಜಗಳ..!
ಮಾಸ್ಕ್ ಹಾಕದ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ಪ್ರಯೋಗ| ಪಾಲಿಕೆ ಕ್ರಮಕ್ಕೆ ಆಕ್ರೋಶ| ದಂಡ ಪಾವತಿ ಮಾಡುವುದಿಲ್ಲ ಎಂದು ವಾದ| ಜಗಳ ಮಾಡುವವರ ವಿರುದ್ಧ ಪೊಲೀಸ್ ಠಾಣೆಗೆ ದೂರು|
ಬೆಂಗಳೂರು(ಅ.02): ನಗರದಲ್ಲಿ ಕೊರೋನಾ ಸೋಂಕು ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದವರ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸುತ್ತಿರುವ ಮಾರ್ಷಲ್‌ಗಳೊಂದಿಗೆ ಸಾರ್ವಜನಿಕರು ಜಗಳಕ್ಕೆ ಇಳಿಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಲಕ್ಷ್ಯ ವಹಿಸುತ್ತಿರುವ ಪರಿಣಾಮ ನಗರದಲ್ಲಿ ಪ್ರತಿದಿನ ನಾಲ್ಕು ಸಾವಿರಕ್ಕೂ ಅಧಿಕ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗುತ್ತಿವೆ. ಸಕ್ರಿಯ ಸೋಂಕಿತರ ಸಂಖ್ಯೆ 48 ಸಾವಿರಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಸೋಂಕು ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುತ್ತಿದ್ದಾರೆ.
ಈ ರೀತಿ ದಂಡ ವಿಧಿಸುವ ಸಂದರ್ಭದಲ್ಲಿ ಸಾರ್ವಜನಿಕರು ಬಿಬಿಎಂಪಿ ಮಾರ್ಷಲ್‌ಗಳೊಂದಿಗೆ ಜಗಳಕ್ಕೆ ಇಳಿಯುತ್ತಿದ್ದಾರೆ. ದಂಡ ಪಾವತಿ ಮಾಡುವುದಿಲ್ಲ ಎಂದು ವಾದಕ್ಕೆ ಇಳಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ರೀತಿ ವರ್ತನೆ ತೋರುವ ವ್ಯಕ್ತಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದು ಹಾಗೂ ಸ್ಥಳೀಯ ಪೊಲೀಸರ ನೆರವು ಪಡೆದು ದಂಡ ವಸೂಲಿ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾಸ್ಕ್ ಹಾಕದಿದ್ರೆ ಒಂದು ಸಾವಿರ ರುಪಾಯಿ ದಂಡಕ್ಕೆ ಸಿಎಂ ಬಿಎಸ್‌ವೈ ಅನುಮತಿ..!
ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವಂತೆ ಸೂಚನೆ ನೀಡಲಾಗಿದೆ. ಆದರೆ ದಂಡ ವಿಧಿಸುವ ವೇಳೆ ಮಾರ್ಷಲ್‌ಗಳೊಂದಿಗೆ ಜಗಳ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
200 ರು. ದಂಡ ನೀಡುತ್ತಿಲ್ಲ
ಮಾಸ್ಕ್ ಧರಿಸದವರು 200 ರು. ದಂಡ ವಿಧಿಸಿದರೆ ಜಗಳ ಮಾಡುತ್ತಿದ್ದಾರೆ. ಇನ್ನು ದಂಡ ಪ್ರಮಾಣವನ್ನು ಒಂದು ಸಾವಿರ ರು.ಗೆ ಏರಿಕೆ ಮಾಡಿದರೆ ದಂಡ ವಸೂಲಿ ಮಾಡುವುದು ಕಷ್ಟವಾಗಲಿದೆ. ಕಳೆದ ಬುಧವಾರ ಚಾಮರಾಜಪೇಟೆಯಲ್ಲಿ ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ದಂಡ ವಿಧಿಸಿದಕ್ಕೆ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೆಸರು ಹೇಳದ ಮಾರ್ಷಲ್ ತಿಳಿಸಿದ್ದಾರೆ.