ಕುಷ್ಟಗಿ: (ಸೆ.23) ಸಿಂಧನೂರ- ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ನಿತ್ಯ ಒಂದಲ್ಲ ಒಂದು ಗ್ರಾಮದ ರೈತರು ವಿವಿಧ ಆಹಾರ ಧಾನ್ಯಗಳ ರಾಶಿ ನಡೆಸುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಸೇರಿದಂತೆ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದ್ದರೂ ಸಹ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಭಾನುವಾರ ಬೆಳಗಿನ ಜಾವದಲ್ಲಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕನಕೊಪ್ಪ ಕ್ರಾಸ್‌ ಬಳಿ ಸಾಕಷ್ಟು ಪ್ರಮಾಣ ಸಜ್ಜೆ ತೆನೆಗಳನ್ನು ರಾಜ್ಯ ಹೆದ್ದಾರಿಯಲ್ಲಿ ಹಾಕಿಕೊಂಡು ರೈತರು ರಾಶಿ ಮಾಡುತ್ತಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳು ಸೇರಿದಂತೆ ಇತರೆ ವಾಹನ ಸವಾರರಿಗೆ ಇದರಿಂದ ತೀವ್ರ ಸಮಸ್ಯೆಯಾಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜತೆಗೆ ವಾಹನ ಸವಾರರು ಈ ಮಾರ್ಗದಿಂದ ಸಂಚರಿಸುತ್ತಿರುವಾಗ ಮೂಗು ಮುಚ್ಚಿಕೊಂಡೆ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಇಷ್ಟಿದ್ದರೂ ಸಹ ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾಗಲಿ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ ಈ ಕುರಿತು ಯಾವುದೆ ಕಾಳಜಿ ವಹಿಸಿದಿರುವ ಹಿನ್ನಲೆಯಲ್ಲಿ ನಿತ್ಯ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಈ ಮಾರ್ಗದಿಂದ ಸಂಚರಿಸುತ್ತಿದ್ದ ವಾಹನ ಸವಾರರಾದ ಮಂಜುನಾಥ, ಶರಣಪ್ಪ, ಬಸವರಾಜ ಸೇರಿದಂತೆ ಇತರರು ಹೇಳಿದರು.

ಕಳೆದ ಕೆಲ ದಿನಗಳಿಂದ ರಾಜ್ಯ ಹೆದ್ದಾರಿ ರಸ್ತೆಗಳಲ್ಲಿ ಮತ್ತು ಕೆಲ ಗ್ರಾಮೀಣ ರಸ್ತೆಗಳಲ್ಲಿ ಈ ಸಂಪ್ರದಾಯ ಮುಂದುವರೆದಿದ್ದು, ಇದರಿಂದಾಗಿ ವಾಹನ ಸವಾರರು ಸುಗಮವಾಗಿ ಸಂಚರಿಸಲು ತೀವ್ರ ತೊಂದರೆಯಾಗುತ್ತಿದ್ದು, ಈಗಲಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ವಾಹನ ಸವಾರರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.