ಬೆಂಗಳೂರು(ಫೆ.13): ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶ ಪತ್ರ (ಹಾಲ್‌ಟಿಕೆಟ್‌) ಇಲಾಖೆಯ ವೆಬ್‌ಪೋರ್ಟಲ್‌ನಲ್ಲಿ ಲಭ್ಯವಿದ್ದು, ಪ್ರಾಂಶುಪಾಲರು ತಮ್ಮ ಕಾಲೇಜು ಹಂತದಲ್ಲೇ ತಮಗೆ ನೀಡಿರುವ ಗುಪ್ತ ಕೋಡ್‌ ಬಳಸಿ ಡೌನ್‌ಲೌಡ್‌ ಮಾಡಿಕೊಳ್ಳಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಫೆ.12ರಿಂದ ಹಾಲ್‌ಟಿಕೆಟ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಪ್ರಾಂಶುಪಾಲರು ತಮ್ಮ ಕಾಲೇಜು ವಿದ್ಯಾರ್ಥಿಗಳ ಹಾಲ್‌ಟಿಕೆಟ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ವಿತರಿಸಬೇಕು. ಯಾವುದೇ ವಿದ್ಯಾರ್ಥಿಗೆ ಇದುವರೆಗೂ ಹಾಲ್‌ಟಿಕೆಟ್‌ ಬಾರದೆ ಇದ್ದಲ್ಲಿ ಅಥವಾ ಹಾಲ್‌ಟಿಕೆಟ್‌ನಲ್ಲಿ ತಪ್ಪುಗಳಿದ್ದಲ್ಲಿ ಫೆ.15ರೊಳಗೆ ಮಲ್ಲೇಶ್ವರದಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು. ಹಾಜರಾತಿ ಕೊರತೆ ಇರುವ ವಿದ್ಯಾರ್ಥಿಗಳಿಗೆ ಹಾಲ್‌ಟಿಕೆಟ್‌ ವಿತರಿಸಬಾರದು ಎಂದು ತಿಳಿಸಿದೆ.

SSLC, ಪಿಯು ವಿದ್ಯಾರ್ಥಿಗಳಿಗೆ ಬೆಳಗ್ಗೆ ತಿಂಡಿ

ಹಾಲ್‌ಟಿಕೆಟ್‌ ವಿಚಾರವಾಗಿ ಕಳೆದ ಡಿ.27ರಂದು ಮೊಲದ ಹಂತದಲ್ಲಿ ಕರಡು ಪ್ರವೇಶ ಪತ್ರಗಳನ್ನು ಬಿಡಗುಡೆ ಮಾಡಲಾಗಿತ್ತು. ನಂತರ ಮೊದಲ ಹಂತದ ತಿದ್ದುಪಡಿ ಮಾಡಿ ಜ.17ರಂದು ಕರಡು ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಈ ಎರಡು ಹಂತದಲ್ಲಿ ಒಟ್ಟು 1 ಲಕ್ಷ ತಿದ್ದುಪಡಿ ಮಾಡಲಾಗಿದೆ. ಇನ್ನೂ ಯಾವುದಾದರೂ ತಿದ್ದುಪಡಿ ಅಗತ್ಯವಿದ್ದರೆ ಕೂಡಲೇ ಪ್ರಾಂಶುಪಾಲರು ಇಲಾಖೆಯನ್ನು ಸಂಪರ್ಕಿಸಿ ತಿದ್ದುಪಡಿ ಮಾಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.