ಸಿ.ಎ.ಇಟ್ನಾಳಮಠ 

ಅಥಣಿ(ಫೆ.06): ಜನದಟ್ಟಣೆ ಹೆಚ್ಚಿರುವ ಅಥಣಿ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಿಸುವುದು ಕಷ್ಟದ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ಕಳೆದ ಒಂದು ತಿಂಗಳಿಂದ ಅಥಣಿ ಪಟ್ಟಣದ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಹುದ್ದೆ ಖಾಲಿ ಇದೆ! ಅಲ್ಲದೆ, ಕಳೆದ ನಾಲ್ಕೈದು ವರ್ಷಗಳಿಂದ ಅಪರಾಧ ವಿಭಾಗದ ಪಿಎಸ್‌ಐ ಹುದ್ದೆಯೂ ಖಾಲಿ ಬಿದ್ದಿದೆ.

ಪಟ್ಟಣದ ಸಂಚಾರ ವ್ಯವಸ್ಥೆಯಲ್ಲಿ ಅಡಚಣೆ ಉಂಟಾದರೆ ಜನತೆ ನ್ಯಾಯ ಕೇಳಲು ಪೊಲೀಸ್‌ ಠಾಣೆಗೆ ಹೋಗಬೇಕು. ಆದರೆ, ಅಲ್ಲಿ ಹಿರಿಯ ಅಧಿಕಾರಿಗಳೇ ಇಲ್ಲದಂತಾಗಿದೆ. ಇದರಿಂದ ಕಾನೂನು ವ್ಯವಸ್ಥೆಗೆ ಅಡತಡೆ ಆಗುತ್ತಿದೆ. ಈಗ್ಗೆ ಒಂದು ತಿಂಗಳ ಹಿಂದೆ ಅಥಣಿ ಪಿಎಸ್‌ಐ ಉಸ್ಮಾನ ಅವಟಿ ಅವರು ಅಮಾನತು ಆದ ಮೇಲೆ ಆ ಸ್ಥಳದಲ್ಲಿ ಇದುವರೆಗೂ ಯಾರನ್ನು ನೇಮಕ ಮಾಡಿಲ್ಲ. ಅಥಣಿ ಸಿಪಿಐ ಶಂಕರಗೌಡ ಬಸನಗೌಡ್ರ ಅವರಿಗೆ ಪ್ರಭಾರಿ ವಹಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಾಣಿಜ್ಯ ಮತ್ತು ಶೈಕ್ಷಣಿಕವಾಗಿ ಅಥಣಿ ಪಟ್ಟಣ ಬೆಳೆದಿದೆ. ಇಲ್ಲಿರುವುದು ಒಂದೇ ಪೊಲೀಸ್‌ ಠಾಣೆ. 1830ರಲ್ಲಿ ಅಥಣಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಪೊಲೀಸ್‌ ಠಾಣೆ ಹೊರತುಪಡಿಸಿದರೆ ಇಲ್ಲಿವರೆಗೆ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್‌ ಠಾಣೆಗಳನ್ನು ಹೆಚ್ಚಿಸಿಲ್ಲ. ಅಥಣಿಯಲ್ಲಿ ಈಗಿರುವ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ 54 ಗ್ರಾಮಗಳಿವೆ. ಕನಿಷ್ಠ ಪಕ್ಷ ಅಗತ್ಯ ಪೊಲೀಸ್‌ ಸಿಬ್ಬಂದಿ ಕೂಡ ಇಲ್ಲ. ಇದಕ್ಕೆ ಕಿರೀಟವಿಟ್ಟಂತೆ ನಾಲ್ಕೈದು ವರ್ಷಗಳಿದ ಅಪರಾಧ ವಿಭಾಗದ ಪಿಎಸ್‌ಐ ಸ್ಥಾನ ಕೂಡ ಖಾಲಿ ಇದೆ. ಒಬ್ಬರೇ ಪಿಎಸ್‌ಐ ಎಲ್ಲವನ್ನೂ ಸಂಬಾಳಿಸಿಕೊಂಡು ಹೋಗುತ್ತಿದ್ದರು. ಈಗ ಕಳೆದ ಒಂದ ತಿಂಗಳಿಂದ ಅವರು ಕೂಡ ಇಲ್ಲ. ಸಿಪಿಐ ಅವರು ನೋಡಿಕೊಳ್ಳುತ್ತಿದ್ದಾರೆ.

ಅಥಣಿ ಪಟ್ಟಣಕ್ಕೆ ಈಗಿನ ಪರಿಸ್ಥಿತಿಯಲ್ಲಿ ಕನಿಷ್ಟಒಂದು ಟ್ರಾಫಿಕ್‌ ಪೊಲೀಸ್‌ ಠಾಣೆ, ನಗರ ಪೊಲೀಸ್‌ ಠಾಣೆ ಹಾಗೂ ಗ್ರಾಮೀಣ ಪೊಲೀಸ್‌ ಠಾಣೆ ಅವಶ್ಯಕತೆ ಇದೆ. ಅದರೆ ಇರುವುದು ಮಾತ್ರ ಒಂದೇ ಒಂದು ಪೊಲೀಸ್‌ ಠಾಣೆ! ಎರಡು ಪೊಲೀಸ್‌ ಠಾಣೆಗಳ ಅವಶ್ಯವಿದ್ದು, ಅಷ್ಟುಕೆಲಸ ಇರುತ್ತದೆ ಎನ್ನುತ್ತಾರೆ ಪೊಲೀಸರು.

ಎರಡು ಠಾಣೆಗಳ ಸಲುವಾಗಿ ಸರ್ಕಾರದ ಮುಂದೆ ಇಲಾಖೆ ವತಿಯಿಂದ ಪ್ರಸ್ತಾಪನೆ ಸಲ್ಲಿಸಿ ಸುಮಾರು 10 ವರ್ಷಗಳೇ ಉರುಳಿದವು. ಅದು ಸಹ ಕಾರ‍್ಯ ರೂಪಕ್ಕೆ ಬಂದಿಲ್ಲ. ಕನಿಷ್ಟಪಕ್ಷ ಈಗಿರುವ 54 ಹಳ್ಳಿ ಮತ್ತು ಅಥಣಿ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲು ಅಗತ್ಯ ಇರುವ ಪೊಲೀಸ್‌ ಸಿಬ್ಬಂದಿ ಮತ್ತು ಪೊಲೀಸ್‌ ಅಧಿಕಾರಿಗಳು ಇಲ್ಲ.

ಅಥಣಿ ಪೊಲೀಸ್‌ ಠಾಣೆಗೆ ಪಿಎಸ್‌ಐ ಇಲ್ಲದ್ದಕ್ಕೆ ಅಥಣಿ ಪಟ್ಟಣದಲ್ಲಿ ಟ್ರಾಫಿಕ್‌ ಕಿರಿಕಿರಿ ಅತಿಯಾಗಿದೆ. ರಸ್ತೆ ಅತಿಕ್ರಮ ಹನುಮನ ಬಾಲದಂತೆ ಬೆಳೆಯುತ್ತಲಿದೆ. ಇದನ್ನು ತಡೆಗಟ್ಟುವ ಕೆಲಸ ಆಗುತಿಲ್ಲ.
ಈ ಠಾಣೆಗೆ ಓರ್ವ ಅಪರಾಧ ವಿಭಾಗಕ್ಕೆ ಪಿ.ಎಸ್‌.ಐ ಇರುತಿದ್ದ ಆ ಸ್ಥಳವನ್ನು ಸಹ ಸುಮಾರು ನಾಲ್ಕು ವರ್ಷಗಳಿಂದ ಭರ್ತಿ ಮಾಡಿಲ್ಲ. ಈ ಅಪರಾಧ ವಿಭಾಗಕ್ಕೆ ಯಾರೂ ಬರಲು ಸಿದ್ಧವಿಲ್ಲ ಎಂಬ ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

ಈಗಿನ ಅಥಣಿ ಶಾಸಕ ಮಹೇಶ ಕುಮಟಳ್ಳಿ, ಡಿಸಿಎಂ ಲಕ್ಷ್ಮಣ ಸವದಿ ಅವರು ಪ್ರಯತ್ನ ಮಾಡಿ ಅಥಣಿ ಪಟ್ಟಣಕ್ಕೆ ಟ್ರಾಫಿಕ್‌ ಪೊಲೀಸ್‌ ಠಾಣೆ, ಗ್ರಾಮೀಣ ಪೊಲೀಸ್‌ ಠಾಣೆ ಮತ್ತು ಅಗತ್ಯವಿರುವ ಪೊಲೀಸ್‌ ಠಾಣೆಯ ಅಗತ್ಯ ಸಿಬ್ಬಂದಿ ನೇಮಕ ಮಾಡುವಂತೆ ಕ್ರಮ ತೆಗೆದುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.

ಅಥಣಿ ನಗರ ಪೊಲೀಸ್‌ ಠಾಣೆಗೆ ಪಿ.ಎಸ್‌.ಐ. ಇಲ್ಲದ್ದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ತಕ್ಷಣ ನೇಮಿಸಬೇಕು. ಇಲ್ಲವಾದರೆ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ ಎಂದು ಕರವೇ ಕಾರ‍್ಯದರ್ಶಿ ಜಗನಾಥ ಭಾಮನೆ ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ಡಿ.ಎಸ್‌.ಪಿ. ಎಸ್‌.ವ್ಹಿ. ಗಿರೀಶ ಅವರು, ಈ ವಾರದಲ್ಲಿ ನೇಮಕ ಮಾಡುತ್ತಾರೆ. ಓರ್ವ ಅಪರಾಧ ವಿಭಾಗಕ್ಕೆ ಪಿ.ಎಸ್‌.ಐ. ಅತಿ ಅವಶ್ಯಕತೆ ಇದೆ. ಕಳೆದ 5 ವರ್ಷಗಳಿಂದ ಆ ಸ್ಥಳಕ್ಕೆ ಯಾರೂ ನೇಮಕವಾಗಿಲ್ಲ. ಅವಶ್ಯವಿದೆ ಎಂದು ನಾವು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಆದರೂ ನೇಮಕ ಆಗಿಲ್ಲ ಎಂದು ಹೇಳಿದ್ದಾರೆ. 

ಅಥಣಿ ಪೊಲೀಸ್‌ ಠಾಣೆಯ ಉಸ್ತುವಾರಿಯನ್ನು ಅಥಣಿ ಸಿಪಿಐ ಶಂಕರಗಗೌಡ ಬಸನಗೌಡ್ರ ಅವರಿಗೆ ವಹಿಸಲಾಗಿದೆ. ಆಡಳಿತಾತ್ಮಕವಾದ ಯಾವುದೇ ಸಮಸ್ಯೆ ಉಂಟಾಗಿಲ್ಲ. ಶೀಘ್ರ ಪಿಎಸ್‌ಐ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.