PSI ಮರು ಪರೀಕ್ಷೆ: ಸರ್ಕಾರ ತೀರ್ಮಾನಕ್ಕೆ ಪಾಸಾದ ಅಭ್ಯರ್ಥಿಗಳ ಕಣ್ಣೀರು..!
* ಪಿಎಸ್ಐ ನೇಮಕಾತಿ ಮರು ಪರೀಕ್ಷೆಗೆ ಸರಕಾರ ನಿರ್ಧಾರ
* ಪಿಎಸ್ಐ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳ ಕಣ್ಣೀರು..!
* ಕೆಲವರು ಮಾಡಿದ ತಪ್ಪಿಗೆ ಹಲವರು ಬಲಿ ಎಂದ ನೊಂದ ಅಭ್ಯರ್ಥಿ
ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ, (ಏ.29): ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ಸಿಐಡಿ ನಡೆಸುತ್ತಿದೆ. ಈಗಾಗಲೇ ಕಿಂಗ್ ಪಿನ್ ಗಳು ಸೇರಿದಂತೆ ಅಕ್ರಮ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ 21 ಜನ ಆರೋಪಿಗಳನ್ನು ಸಿಐಡಿ ತಂಡ ಬಂಧಿಸಿ ವಿಚಾರಣೆ ನಡೆಸುತ್ತಿದೆ. ತನಿಖೆ ಇನ್ನು ವಿಚಾರಣೆ ಹಂತದಲ್ಲಿರುವಾಗಲೇ ಗೃಹ ಸಚಿವ ಅರಗ ಜ್ಞಾನೆಂದ್ರ ಅವರು 545 ಪಿಎಸ್ ಐ ನೇಮಕಾತಿ ರದ್ದು ಮಾಡಿ ಮರು ಪರೀಕ್ಷೆ ನಡೆಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಇದಕ್ಕೆ ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿಭಾವಂತ ಅಭ್ಯರ್ಥಿಗಳಿಗೆ ಗಾಯದ ಮೇಲೆ ಬರೆ
ಸರಕಾರದ ಈ ನಿರ್ಧಾರದಿಂದ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಗಲು ರಾತ್ರಿಯನ್ನದೇ ಕಷ್ಟ ಪಟ್ಟು ಓದಿ ಪಿಎಸ್ಐ ನೇಮಕಾತಿ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳು ಈಗ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಯಾರದೋ ಮಾಡಿದ್ದ ತಪ್ಪಿಗೆ ಇನ್ನಾರಿಗೋ ಶಿಕ್ಷೆಯಾದಂತಾಗಿದೆಂದು ನೊಂದ ಅಭ್ಯರ್ಥಿಗಳ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ ಸರ್ವಿಸ್ ನಲ್ಲಿದ್ದು ಕಷ್ಟಪಟ್ಟು ನೌಕರಿ ಕೂಡ ಗಿಟ್ಟಿಸಿಕೊಂಡಿದ್ದಾರೆ. ಸರಕಾರದ ಈ ನಿರ್ಧಾರದಿಂದ ಅಭ್ಯರ್ಥಿಗಳು ಕಣ್ಣೀರು ಹಾಕುವಂತಾಗಿದೆ.
PSI ಮರು ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ, ಹೈಕೋರ್ಟ್ ಮೆಟ್ಟಿಲೇರಲು ಅಭ್ಯರ್ಥಿಗಳು ತೀರ್ಮಾನ
ಸಿಐಡಿ ಅಧಿಕಾರಿಗಳು ಪಿಎಸ್ಐ ಅಕ್ರಮ ನೇಮಕಾತಿಯ ಪ್ರಮುಖ ಕಿಂಗ್ ಪೀನ್ ಗಳನ್ನು ಅರೆಸ್ಟ್ ಮಾಡಿದೆ. ಅದರಲ್ಲೂ 18 ದಿನಗಳ ಕಾಲ ಖಾಕಿಯಿಂದ ತಪ್ಪಿಸಿಕೊಂಡಿದ್ದ ದಿವ್ಯಾ ಹಾಗರಗಿಯನ್ನು ಸಿಐಡಿ ತಂಡ ಪುಣೆಯಲ್ಲಿ ಬಂದಿಸಿದೆ. ಜೊತೆಗೆ ಇನ್ನು ಕೆಲವು ಕಿಂಗ್ ಪೀನ್ ಗಳಿಗಾಗಿ ಸಿಐಡಿ ಶೋಧ ಮುಂದುವರೆದಿದೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಅದೆಷ್ಟು ಜನ ಭಾಗಿಯಾಗಿದ್ದಾರೋ ಅವರಿಗಾಗಿ ಸಿಐಡಿ ಅಧಿಕಾರಿಗಳು ತನಿಖೆ ಜಾಡು ಹಿಡಿದು ಅಕ್ರಮದಲ್ಲಿ ಭಾಗಿಯಾದವರ ಶೋಧ ನಡೆಸುತ್ತಿದ್ದಾರೆ. ಇನ್ನೂ ತನಿಖೆ ಹಂತದಲ್ಲಿರುವಾಗಲೇ ಸರಕಾರ ಮರು ಪರೀಕ್ಷೆಗೆ ನಿರ್ಧಾರ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಯಾದಗಿರಿಯಲ್ಲಿ ಅಭ್ಯರ್ಥಿಗಳಿಂದ ಆಕ್ರೋಶ
ಯಾದಗಿರಿ ಜಿಲ್ಲೆಯಲ್ಲಿ ಕೂಡ ಪಿಎಸ್ಐ ನೇಮಕವಾದ ಅಭ್ಯರ್ಥಿಗಳು ಸರಕಾರದ ನಡೆಯಿಂದ ಆಕ್ರೋಶಗೊಂಡಿದ್ದಾರೆ.
ಪಿಎಸ್ಐ ನೇಮಕಾತಿ ಹಗರಣದಲ್ಲಿ ಭಾಗಿಯಾದ ಅಭ್ಯರ್ಥಿಗಳು ಇರಲಿ ಯಾರೇ ಇರಲಿ ಸಿಐಡಿ ಅಧಿಕಾರಿಗಳು ಇದನ್ನು ತನಿಖೆ ನಡೆಸುತ್ತಿದೆ. ಆಯ್ಕೆಯಾದವರಿಗೆ ಸಾವಿರ ಬಾರಿ ಕರೆದು ವಿಚಾರಣೆ ನಡೆಸಿ ನಮಗೆ ಅಭ್ಯಂತರವಿಲ್ಲ. ತಪ್ಪಿತಸ್ಥರಸ್ಥರನ್ನು ಪತ್ತೆ ಹಚ್ಚಿ ಅವರಿಗೆ ತಕ್ಕ ಶಿಕ್ಷೆ ನೀಡಿ, ಕಷ್ಟ ಪಟ್ಟು ಹಗಲು ರಾತ್ರಿಯನ್ನದೇ ಓದಿ ನೌಕರಿ ಗಿಟ್ಟಿಸಿಕೊಂಡವರಿಗೆ ಸರಕಾರ ಮರು ಪರೀಕ್ಷೆ ನಡೆಸಿ ಅನ್ಯಾಯ ಮಾಡಿದರೆ ಹೇಗೆ..? ಎಂದು ಪ್ರಶ್ನಿಸಿದ್ದಾರೆ.
ನಾವು ನಿಯತ್ತಾಗಿ ಓದಿ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದೆ. ಸರಕಾರ ಇಂತಹ ನಿರ್ಧಾರ ಮಾಡಿದ್ದು ನಿಜವಾದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಸರಕಾರ ಈ ಬಗ್ಗೆ ಪರಿಶೀಲನೆ ಮಾಡಿ ನಿಜವಾದ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮಕೈಗೊಳ್ಳಬೇಕೆಂದು ಅಭ್ಯರ್ಥಿ ಶರಣಗೌಡ ನೋವು ತೊಡಿಕೊಂಡಿದ್ದಾನೆ. ಯಾದಗಿರಿ ಜಿಲ್ಲೆಯ ಮೂಲದವರು ಏಳು ಜನರು ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದರು ಎನ್ನಲಾಗಿದೆ. ನಾಗರತ್ನ, ಸಾಲಿಬಾಯಿ, ಅನೀತಾ ಜಾಧವ್, ರೇಣುಕಾ ರಾಠೋಡ್, ಸಿದ್ದಪ್ಪ ಜಂಗ್ಲಿ, ಶರಣಗೌಡ, ಸೋಮಶೇಖರcಯಾದಗಿರಿ ಜಿಲ್ಲೆಯ ಮೂಲದವರು ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದಾರೆ.
ನಾವು ತಪ್ಪು ಮಾಡಿಲ್ಲ, ಕಷ್ಟಪಟ್ಟು ಓದಿದ್ದೇವೆ: ನೊಂದ ಅಭ್ಯರ್ಥಿ ಅಳಲು
ಸಿಐಡಿ ತಂಡ ಪಿಎಸ್ಐ ಅಕ್ರಮದ ಕುರಿತು ತನಿಖೆ ನಡೆಸುತ್ತಿದೆ. ಈಗಾಗಲೇ ಸಿಐಡಿ ನೀಡಿದ್ದ ನೊಟೀಸ್ ಗೆ ವಿಚಾರಣಗೆ ಹಾಜರಾಗಿ ಬಂದಿದ್ದೆವೆ ನಾವು ಯಾವುದೇ ತಪ್ಪು ಮಾಡಿಲ್ಲ. ನಾವು ಕಷ್ಟಪಟ್ಟು ಓದಿದ್ದೆವೆ. ಓದಿದವರ ಪರಿಸ್ಥಿತಿ ಹೀಗಾದರೆ ಹೇಗೆ..? ಎಂದು ನೊಂದ ಅಭ್ಯರ್ಥಿ ನಾಗರತ್ನ ನೋವು ತೊಡಿಕೊಂಡಿದ್ದಾಳೆ. ಈ ಬಗ್ಗೆ ನಾಗರತ್ನ ಮಾತನಾಡಿ, ನಾವು ಕಷ್ಟಪಟ್ಟು ಓದಿದ್ದೆವೆ ಯಾರೋ ಕೆಲವರು ಮಾಡಿದ್ದ ತಪ್ಪಿಗೆ ನಮಗೆ ಅನ್ಯಾಯವಾದರೆ ಹೇಗೆ..? ಸಿಐಡಿ ತನಿಖೆ ನಡೆಯುವ ಹಂತದಲ್ಲಿಯೇ ಸರಕಾರ ಏಕಾಏಕಿ ಮರು ಪರೀಕ್ಷೆಗೆ ನಿರ್ಧಾರ ಮಾಡಿದ್ದು ಸರಿಯಲ್ಲ. ಕಷ್ಟಪಟ್ಟು ಓದಿದವರಿಗೆ ಇದು ಅನ್ಯಾಯವಾಗುತ್ತದೆ. ಸರಕಾರ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ತಕ್ಕ ಪಾಠ ಕಲಿಸಬೇಕಿತ್ತು. ಆದರೆ, ಈಗ ಯಾವುದು ತಪ್ಪು ಮಾಡದವರು ಮತ್ತೆ ಮರು ಪರೀಕ್ಷೆ ಬರೆಯಬೇಕೆಂದರೆ ಹೇಗೆ..? ಕಾರಣ ಸರಕಾರ ನಿಜವಾದ ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕೆಂದು ನೊಂದ ಅಭ್ಯರ್ಥಿ ನಾಗರತ್ನ ನೋವು ತೊಡಿಕೊಂಡಿದ್ದಾಳೆ.