ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯಲ್ಲಿ ಮಾಮೂಲಿ ಹಣ ವಸೂಲಿ ಪ್ರಕರಣ ಬೆಳಕಿಗೆ ಬಂದಿದೆ. ಲೋಕಾಯುಕ್ತ ದಾಳಿಯಲ್ಲಿ ಪೇದೆ ಸುರೇಶ್ ₹10,000 ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು, PSI ಅರ್ಜುನ್ ಗೌಡ ಅವರ ಸೂಚನೆಯ ಮೇರೆಗೆ ಈ ಹಣ ಸಂಗ್ರಹವಾಗುತ್ತಿತ್ತು ಎಂದು ಹೇಳಲಾಗಿದೆ.
ಕೋಲಾರ (ಜೂ. 11): ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯಲ್ಲಿ ತಿಂಗಳ ಮಾಮೂಲಿ ಹಣ ಪಡೆಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಲೋಕಾಯುಕ್ತ ವಿಭಾಗ ಭರ್ಜರಿ ದಾಳಿ ನಡೆಸಿದ್ದು, ಠಾಣೆಯ ಸಿಬ್ಬಂದಿ ಹಾಗೂ ಪಿಎಸ್‌ಐ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ .
ಮಾಮೂಲಿ ಹಣ ಪಡೆಯುವ ವೇಳೆ ಲೈವ್ ಸಿಕ್ಕಿದ ಪೇದೆ:
ನಂಗಲಿ ಪೊಲೀಸ್ ಠಾಣೆಯ ಪೇದೆ ಸುರೇಶ್ ಎಂಬವರು ಸ್ಥಳೀಯ ಬಾರ್ ಮಾಲೀಕರಿಂದ ಪ್ರತಿ ತಿಂಗಳು ನಿಯಮಿತವಾಗಿ ಮಾಮೂಲಿ ಹಣ ವಸೂಲಿ ಮಾಡುತ್ತಿದ್ದಂತೆ ಶಂಕೆಯಿದ್ದು, ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಗೂಢಚರ್ಯೆಯಿಂದ ಮಾಹಿತಿಯನ್ನು ಸಂಗ್ರಹಿಸಿದ್ದರು. ಸೋಮವಾರ ನಡೆದ ದಾಳಿಯ ವೇಳೆ ಬಾರ್ ಮಾಲೀಕ ಪ್ರಶಾಂತ್ ಎಂಬವರಿಂದ ₹10,000 ಲಂಚ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಪೇದೆ ಸುರೇಶ್ ತಕ್ಷಣವೇ ಬಲೆಗೆ ಬಿದ್ದಿದ್ದಾರೆ.
PSI ಸೂಚನೆ ಮೇರೆಗೆ ಹಣ ಸಂಗ್ರಹ?
ಲೋಕಾಯುಕ್ತರ ವಶದಲ್ಲಿರುವ ಸುರೇಶ್ ಪ್ರಾಥಮಿಕ ವಿಚಾರಣೆ ವೇಳೆ ನೀಡಿದ ಮಾಹಿತಿಯ ಪ್ರಕಾರ, ಈ ಹಣ ಸಂಗ್ರಹವನ್ನು ನಂಗಲಿ ಠಾಣೆಯ PSI ಅರ್ಜುನ್ ಗೌಡ ಅವರ ಸೂಚನೆಯ ಮೇರೆಗೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು PSI ಅರ್ಜುನ್ ಗೌಡ ಅವರನ್ನು ಕೂಡ ನಂಗಲಿ ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.
ಅಧಿಕಾರಿಗಳ ದಾಳಿ ಮತ್ತು ಮೇಲ್ವಿಚಾರಣೆ:
ದಾಳಿ ಕಾರ್ಯಾಚರಣೆಗೆ ರಾಮನಗರ ಲೋಕಾಯುಕ್ತ ಡಿವೈಎಸ್ಪಿ ಶಿವಪ್ರಸಾದ್ ನೇತೃತ್ವ ನೀಡಿದ್ದು, ಕೋಲಾರ ಲೋಕಾಯುಕ್ತ ಎಸ್ಪಿ ಧನುಂಜಯ ಕೂಡ ನಂಗಲಿ ಠಾಣೆಗೆ ಆಗಮಿಸಿ ತನಿಖೆಯ ಪರಿಶೀಲನೆ ನಡೆಸಿದ್ದಾರೆ. ಇದೀಗ ಠಾಣೆಯಲ್ಲಿ ನಡೆಯುತ್ತಿರುವ ತನಿಖೆಯ ನಂತರ ಇನ್ನಷ್ಟು ಅಂಶಗಳು ಬಹಿರಂಗವಾಗುವ ಸಾಧ್ಯತೆ ಇದೆ. ನ್ಯಾಯಕ್ಕಾಗಿ ಜನರು ಮೊರೆ ಹೋಗುವ ಸ್ಥಳವಾಗಿರುವ ಪೊಲೀಸ್ ಠಾಣೆಯಲ್ಲೇ ತಿಂಗಳ ಲಂಚ ಸಂಸ್ಕೃತಿ ಆಚರಣೆ ಸಾರ್ವಜನಿಕರಲ್ಲಿ ಆಕ್ರೋಶವನ್ನು ಉಂಟುಮಾಡಿದೆ.
