Asianet Suvarna News Asianet Suvarna News

ಗಡಿಭಾಗದ ಗ್ರಾಮಗಳಿಗೆ ಸರ್ಕಾರಿ ಬಸ್‌ ವ್ಯವಸ್ಥೆ ಕಲ್ಪಿಸಿ

ತುಮಕೂರು ಪಾವಗಡ ಹಾಗೂ ಹಿರಿಯೂರು ಸೇರಿದಂತೆ ತಾಲೂಕಿನ ಗಡಿ ಗ್ರಾಮಗಳಿಗೆ ಹೆಚ್ಚಿನ ಸರ್ಕಾರಿ ಬಸ್‌ ಕಲ್ಪಿಸುವಂತೆ ಇಲ್ಲಿನ ಆನೇಕ ಮಂದಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Provide government bus system to border villages snr
Author
First Published Jan 23, 2024, 10:50 AM IST

  ಪಾವಗಡ:  ಇಲ್ಲಿನ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಚ್‌.ವಿ. ವೆಂಕಟೇಶ್‌ ಆದೇಶ ಸೇರಿದಂತೆ ಇಲ್ಲಿನ ಸಾರ್ವಜನಿಕರು ಆನೇಕ ಬಾರಿ ಒತ್ತಾಯಿಸಿದರೂ ತುಮಕೂರು ಜಿಲ್ಲಾ ಸಾರಿಗೆ ಘಟಕದ ಡೀಸಿ ಹಾಗೂ ಇಲ್ಲಿನ ಪಾವಗಡ ಘಟಕದ ವ್ಯವಸ್ಥಾಪಕರೊಬ್ಬರ ನಿರ್ಲಕ್ಷ್ಯದ ಪರಿಣಾಮ ಸಂಜೆ ವೇಳೆ ತುಮಕೂರಿನಿಂದ ಪಾವಗಡಕ್ಕೆ ಬರಲು ತೀವ್ರ ಸಮಸ್ಯೆ ಎದುರಾಗಿದೆ. ಹೀಗಾಗಿ ಸಂಜೆ 5.30ಗಂಟೆಯ ಬಳಿಕ ತುಮಕೂರು ಪಾವಗಡ ಹಾಗೂ ಹಿರಿಯೂರು ಸೇರಿದಂತೆ ತಾಲೂಕಿನ ಗಡಿ ಗ್ರಾಮಗಳಿಗೆ ಹೆಚ್ಚಿನ ಸರ್ಕಾರಿ ಬಸ್‌ ಕಲ್ಪಿಸುವಂತೆ ಇಲ್ಲಿನ ಆನೇಕ ಮಂದಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಂಜೆ 5.30 ಹಾಗೂ 6ಗಂಟೆಯ ನಂತರ ತುಮಕೂರಿನಿಂದ ಪಾವಗಡಕ್ಕೆ ಸರ್ಕಾರಿ ಬಸ್‌ ಸೌಲಭ್ಯವಿಲ್ಲದ ಪರಿಣಾಮ ಖಾಸಗಿ ಬಸ್‌ ಅವಲಂಭಿಸುವ ಅನಿರ್ವಾಯತೆ ಇದೆ. ಈ ಖಾಸಗಿ ಬಸ್‌ಗಳಲ್ಲಿ ಮಧುಗಿರಿಗೆ ಆಗಮಿಸಿ ಅಲ್ಲಿಂದ ಕೊರಟಗೆರೆ ಮೂಲಕ ಬೆಂಗಳೂರಿನಿಂದ ಬರುವ ಸರ್ಕಾರಿ ಬಸ್‌ ಹಿಡಿದು ಪಾವಗಡಕ್ಕೆ ಬರಬೇಕು. ಈ ಬಸ್‌ ಸಿಗದಿದ್ದರೆ ರಾತ್ರಿಯಿಡೀ ಮಧುಗಿರಿ ಖಾಸಗಿ ಬಸ್‌ ನಿಲ್ದಾಣದಲ್ಲಿಯೇ ಕಾಯಬೇಕು. ಶಾಲಾ ಕಾಲೇಜು ಹಾಗೂ ಇತರೆ ಕೆಲಸ ಕಾರ್ಯಗಳ ನಿಮಿತ್ತ ಪಾವಗಡದಿಂದ ತುಮಕೂರಿಗೆ ನಿತ್ಯ ನೂರಾರು ಮಂದಿ ರೈತರು ಮತ್ತು ವಿದ್ಯಾರ್ಥಿಗಳು ತೆರಳುತ್ತಾರೆ. ಕೆಲಸ ಮುಗಿಸಿ 5.30 ಗಂಟೆಗೆ ತುಮಕೂರಿನ ಸರ್ಕಾರಿ ಬಸ್‌ ನಿಲ್ದಾಣಕ್ಕೆ ಹೋದರೆ ಪಾವಗಡ ಮಾರ್ಗದಲ್ಲಿ ಯಾವುದೇ ಬಸ್ ಇರುವುದಿಲ್ಲ.

ಸಂಜೆ 6ಗಂಟೆಯ ಬಳಿಕ ರಾತ್ರಿ 10ಗಂಟೆಯವರೆವಿಗೆ ತುಮಕೂರು-ಪಾವಗಡ ಮಾರ್ಗಕ್ಕೆ ಸರ್ಕಾರಿ ಬಸ್‌ ಸೌಲಭ್ಯ ಕಲ್ಪಿಸಬೇಕು. ಹಾಗೆಯೇ ಈ ಹಿಂದೆ ಸಂಜೆ 6ಗಂಟೆ ಬಳಿಕ ತುಮಕೂರು ತಿಪಟೂರು ಹಾಸನ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗಲು ಸರ್ಕಾರಿ ಸಾರಿಗೆಯ ಬಸ್‌ ಸೌಲಭ್ಯ ಕಲ್ಪಿಲಾಗಿತ್ತು. ಅದನ್ನು ನಿಲ್ಲಿಸಲಾಗಿದೆ. ಪುನರಾರಂಭ ಮಾಡಬೇಕೆಂದು ಒತ್ತಾಯಿಸಿದರು.

ಇಲ್ಲಿನ ಶನೇಶ್ವರಸ್ವಾಮಿ ಹಾಗೂ ನಾಗಲಮಡಿಕೆಯ ಸುಬ್ರಮಣ್ಯಸ್ವಾಮಿ, ಕೋಟೆ ಅಂಜನೇಯಸ್ವಾಮಿ ದೇವಸ್ಥಾನಗಳಿಗೆ ನಿತ್ಯ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದು, ತಾಲೂಕಿನ ತಿರುಮಣಿ ಹಾಗೂ ವೆಂಕಟಮ್ಮನಹಳ್ಳಿಯ ಗಡಿ ಭಾಗದ ಸೇರಿದಂತೆ ಪಾವಗಡದಿಂದ ಮಂಗಳವಾಡ, ಅರಸೀಕೆರೆ ಮಾರ್ಗ ಹಿರಿಯೂರು ಶಿರಾ ಕಡೆ ಹೆಚ್ಚಿನ ಸರ್ಕಾರಿ ಬಸ್‌ ಸೌಲಭ್ಯ ಕಲ್ಪಿಸಬೇಕು. ಬಡ್ತಿ ಹೊಂದಿದ ಇಲ್ಲಿನ ಸಾರಿಗೆ ಘಟಕದ ಡಿಪೋ ವ್ಯವಸ್ಥಾಪಕ ಹನುಮಂತರಾಯಪ್ಪ ಇಲ್ಲಿಯೇ ಸೇವೆ ಸಲ್ಲಿಸುತ್ತಿದ್ದು, ಈ ಭಾಗದಲ್ಲಿ ಹೆಚ್ಚು ಸರ್ಕಾರಿ ಬಸ್‌ ಸೌಲಭ್ಯದ ಅಗತ್ಯತೆಯ ಕುರಿತು ಅವರಿಗೆ ಹೆಚ್ಚು ಮಾಹಿತಿ ಇದೆ. ಹೆಚ್ಚಿನ ಮಾಹಿತಿ ಪಡೆಯುವ ಮೂಲಕ ಕೂಡಲೇ ಸಂಜೆ ತುಮಕೂರು, ಪಾವಗಡ ಹಾಗೂ ಪಟ್ಟಣದಿಂದ ಹಿರಿಯೂರು ಶಿರಾ ಹಾಗೂ ಧರ್ಮಸ್ಥಳ ಮೈಸೂರು ಮಾರ್ಗಕ್ಕೆ ಹೆಚ್ಚಿನ ಸರ್ಕಾರಿ ಬಸ್‌ ನಿಯೋಜಿಸಿ, ಪ್ರಯಾಣಿಕರ ಹಿತ ಕಾಪಾಡುವಂತೆ ಸಾರಿಗೆ ಇಲಾಖೆಯ ಡೀಸಿಗೆ ಮನವಿ ಮಾಡಿದ್ದಾರೆ.

ವಿಳಂಬವಾದರೆ ಇಲ್ಲಿನ ಆನೇಕ ಪ್ರಗತಿ ಪರ ಸಂಘಟನೆಗಳಿಂದ ಉಗ್ರ ಹೋರಾಟಕ್ಕೆ ಸಜ್ಜಾಗುವುದಾಗಿ ಆನೇಕ ಮಂದಿ ರೈತರು ಹಾಗೂ ಸಂಘಟನೆಯ ಹನುಮಂತಪ್ಪ, ರಾಮಾಂಜಿನಪ್ಪ, ಮದಕರಿನಾಯಕ, ಗೋವಿಂದಪ್ಪ ಇತರೆ ಆನೇಕ ಮಂದಿ ತಿಳಿಸಿದ್ದಾರೆ.

Follow Us:
Download App:
  • android
  • ios