ನರಗುಂದ[ಡಿ.20]: ರಾಜ್ಯದ ಉತ್ತರ ಕರ್ನಾಟಕ ಭಾಗದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರು ಬಳಕೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ನೀಡಿರುವ ಅನುಮತಿಗೆ ತಡೆ ನೀಡಿರುವುದನ್ನು ಖಂಡಿಸಿ ಮಹದಾಯಿ ಹೋರಾಟಗಾರರು ದೆಹಲಿ ರಾಷ್ಟ್ರಪತಿ ಭವನದ ಎದುರು ಅಹೋರಾತ್ರಿ ಧರಣಿ ಪ್ರಾರಂಭಿಸುವುದಾಗಿ ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀಗಳು ಹೇಳಿದ್ದಾರೆ.

1617ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಹೋರಾಟ ವೇದಿಕೆಯಲ್ಲಿ ಮಾತನಾಡಿದ ಅವರು, ರಾಜ್ಯದ ರೈತ ಹೋರಾಟದ ಬಂಡಾಯ ನೆಲದಲ್ಲಿ ಮಹದಾಯಿ ಹೋರಾಟಗಾರರು ಕಳೆದ 5 ವರ್ಷಗಳಿಂದ ಹಲವಾರು ರೀತಿಯ ಹೋರಾಟ ಮಾಡಿ 12 ಜನ ಮಹದಾಯಿ ಹೋರಾಟಗಾರರನ್ನು ಕಳೆದುಕೊಂಡು, ರಾಜಕೀಯ ಪಕ್ಷದವರಿಂದ ಹಲ್ಲೆ ಮಾಡಿಸಿಕೊಂಡು ನಾವು ಹೋರಾಟ ಮಾಡಿದ್ದರಿಂದ ಈ ಮಹದಾಯಿ ಜಲ ವಿವಾದಕ್ಕೆ ನೇಮಕವಾದ ನ್ಯಾಯಾಧಿಕರಣದ ನ್ಯಾಯಾಧೀಶರು ಕರ್ನಾಟಕ ರಾಜ್ಯಕ್ಕೆ 2018ರ ಆಗಸ್ಟ ತಿಂಗಳಲ್ಲಿ 13.42 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿತ್ತು, ಮೇಲಾಗಿ ಇದಕ್ಕೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದ್ದು ಈ ಭಾಗದ ರೈತ ಸಮುದಾಯಕ್ಕೆ ಹರ್ಷ ತಂದಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆದರೆ, ಗೋವಾ ರಾಜ್ಯದ ಮುಖ್ಯಮಂತ್ರಿಗಳ ಒತ್ತಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಧಿಡೀರನೆ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿಯನ್ನು ತಡೆ ಮಾಡಿರುವುದು ಈ ಭಾಗದ ರೈತರಿಗೆ ನೋವುಂಟು ಮಾಡಿದೆ. ಈಗಲೂ ಕಾಲ ಮಿಂಚಿಲ್ಲ ನಮಗೆ ನಮ್ಮ ನೆಲದಲ್ಲಿ ಹರಿಯುವ ನೀರು ಬಳಕೆ ಮಾಡಿಕೊಳ್ಳಲು ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಬೇಕು. ಒಂದು ವೇಳೆ ಅನುಮತಿ ನೀಡದಿದ್ದರೆ, ಜನವರಿ ತಿಂಗಳಲ್ಲಿ ಈ ಭಾಗದ 10 ಸಾವಿರಕ್ಕೂ ಹೆಚ್ಚು ಮಹದಾಯಿ ಹೋರಾಟಗಾರರು ದೆಹಲಿ ಚಲೋ ಹಮ್ಮಿಕೊಂಡು ರಾಷ್ಟ್ರಪತಿಗಳ ಭವನದ ಮುಂದೆ ಅಹೋರಾತ್ರಿ ಧರಣಿ ಪ್ರಾರಂಭಿಸಿ ನಮ್ಮ ಪಾಲಿನ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡುವ ವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ. ಅನುಮತಿ ನೀಡದೇ ಇದ್ದಲ್ಲಿ ನಮಗೆ ದಯಾಮರಣ ನೀಡುವಂತೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ಹಿಂದೆ ರಾಜ್ಯದ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡೆಯೂರಪ್ಪ ಅವರು ನಾನು ಮುಖ್ಯಮಂತ್ರಿಯಾದರೆ ಕೇವಲ 24 ಗಂಟೆಯಲ್ಲಿ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡುತ್ತೇನೆಂದು ಹೇಳಿದ್ದರು ಅಲ್ಲವೇ? ಏಕೆ ಅವರು ಮುಖ್ಯಮಂತ್ರಿಗಳಾದರು ಈ ಯೋಜನೆ ಜಾರಿ ಮಾಡುತ್ತಿಲ್ಲವೆಂದು ಪ್ರಶ್ನಿಸಿದರು.

ವೀರಬಸಪ್ಪ ಹೂಗಾರ, ಎಸ್‌.ಬಿ. ಜೋಗಣ್ಣವರ, ಶ್ರೀಶೈಲ ಮೇಟಿ, ಸಂಗಪ್ಪ ಶಾನವಾಡ, ಹನಮಂತ ಸರನಾಯ್ಕರ, ವೆಂಕಪ್ಪ ಹುಜರತ್ತಿ, ಎಲ್‌.ಬಿ. ಮನನೇಕೊಪ್ಪ, ಯಲ್ಲಪ್ಪ ಚಲವಣ್ಣವರ, ಅರ್ಜುನ ಮಾನೆ, ಚನ್ನಬಸಪ್ಪ ಆಯಿಟ್ಟಿ, ಜಗನ್ನಾಥ ಮುಧೋಳೆ, ಚನ್ನಪ್ಪಗೌಡ ಪಾಟೀಲ, ಮಲ್ಲವ್ವ ಭೋವಿ, ದೇವಕ್ಕ ಚಲವಣ್ಣವರ, ಮಂಜುಳಾ ಸರನಾಯ್ಕರ, ಯಲ್ಲಪ್ಪ ಗುಡದೇರಿ, ಮಲ್ಲೇಶಪ್ಪ ಅಣ್ಣಗೇರಿ, ನಾಗರತ್ನ ಸವಳಭಾವಿ, ಅನಸವ್ವ ಶಿಂದೆ, ಶಾಂತವ್ವ ಭೂಸರಡ್ಡಿ, ಚನ್ನಬಸವ್ವ ಆಯಿಟ್ಟಿ, ರಾಮಚಂದ್ರ ಸಾಬಳೆ, ಮಲ್ಲಪ್ಪ ಐನಾಪೂರ, ಕೆ.ಎಚ್‌.ಮೊರಬದ, ಈರಣ್ಣ ಗಡಗಿ, ವಾಸು ಚವಾಣ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.