Asianet Suvarna News Asianet Suvarna News

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

Chikkamagaluru Elephant Attack Problem: ಮೂಡಿಗೆರೆ ತಾಲೂಕಿನಲ್ಲಿ ದಶಕದಲ್ಲಿ ಹತ್ತಕ್ಕೂ ಹೆಚ್ಚು ಜನರ ಬಲಿಯಾದ್ರೆ ತಿಂಗಳಲ್ಲಿ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. 

Protest over death in elephant attack in Chikkamagaluru Mudigere mnj
Author
First Published Sep 9, 2022, 11:08 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು (ಸೆ. 09) :ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ  ತಿಂಗಳ ಅವಧಿಯಲ್ಲಿ ಇಬ್ಬರು ಕಾಡಾನೆಗೆ ಬಲಿಯಾಗಿದ್ದಾರೆ. ಆನೆ ಓಡಿಸಲು ವಿಫಲವಾಗಿರುವ  ಅರಣ್ಯಾಧಿಕಾರಿಗಳ (Forest Officers) ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ಬಾಗಿಲಲ್ಲಿ ಶವ ಇಟ್ಟು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದ್ದಾರೆ.

ಅರಣ್ಯ ಇಲಾಖೆ ಮುತ್ತಿಗೆ ಯತ್ನ: ಪರಿಸ್ಥಿತಿ ನಿಯಂತ್ರಿಸಲು ಲಾಠಿಪ್ರಹಾರ:  ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಜನರು ಅರಣ್ಯ ಇಲಾಖೆ ವಿರುದ್ದ ಗರಂ ಆಗಿದ್ದರು. ಪ್ರತಿ ಬಾರಿ ಮೂಗಿಗೆ ತುಪ್ಪ ಸವರುತ್ತಿದ್ದ ಅರಣ್ಯ ಅಧಿಕಾರಿಗಳ ವಿರುದ್ಧ ಸ್ಥಳಿಯರು ಅಕ್ಷರಶಃ ಕೆಂಡಾಮಂಡಲರಾಗಿದ್ದರು. 

ಮೃತದೇಹವನ್ನ ಅರಣ್ಯ ಇಲಾಖೆ ಬಾಗಿಲಲ್ಲಿ ಇಟ್ಟು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ, ಪೊಲೀಸರು-ಅರಣ್ಯಾಧಿಕಾರಿಗಳು ಹಾಗೂ ಸ್ಥಳಿಯರು ಮಧ್ಯೆ ತೀವ್ರ ವಾಕ್ಸಮರ ಉಂಟಾಗಿದ್ದು, ಸ್ಥಳಿಯರು ಪೊಲೀಸ್ ಜೀಪನ್ನೇ ಪಲ್ಟಿ ಮಾಡಿ, ಅರಣ್ಯ ಇಲಾಖೆ ಗೇಟ್ ಮುರಿಯಲು ಯತ್ನಿಸಿದ್ದಾರೆ.  ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮನಸ್ಸೋ ಇಚ್ಛೆ ಲಾಠಿ ಬೀಸಿದ್ದಾರೆ. 

ಮೂಡಿಗೆರೆ ತಾಲೂಕಿನಲ್ಲಿ ದಶಕದಲ್ಲಿ ಹತ್ತಕ್ಕೂ ಹೆಚ್ಚು ಜನರ ಬಲಿಯಾದ್ರೆ ತಿಂಗಳಲ್ಲಿ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಹಾಗಾಗಿ, ಇಂದು ಮೂಡಿಗೆರೆ ತಾಲೂಕಿನ ಜನ ಅರಣ್ಯ ಇಲಾಖೆ ಮೇಲೆ ಅಕ್ಷರಶಃ ಕೆಂಡಾಮಂಡಲರಾಗಿದ್ದರು. ಆಗಸ್ಟ್ 15ರಂದು ದನ ಹುಡುಕುತ್ತಿದ್ದ ವ್ಯಕ್ತಿ ಹಾಗೂ ನಿನ್ನೆ ತೋಟದಿಂದ ಬರುತ್ತಿದ್ದ 45 ವರ್ಷದ ವ್ಯಕ್ತಿಯನ್ನ ಆನೆ ಬಲಿ ಪಡೆದಿತ್ತು. 

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಕಾರ್ಮಿಕ ಕಾಡಾನೆ ದಾಳಿಗೆ ಬಲಿ

ಪ್ರತಿ ಬಾರಿ ಆನೆ ದಾಳಿಯಾದಗಲೂ ಅಧಿಕಾರಿಗಳು ನಮ್ಮ ಮೂಗಿಗೆ ತುಪ್ಪ ಸವರುತ್ತಾರೆ ಎಂದು ಸ್ಥಳೀಯರ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಇಂದು ಮೃತದೇಹವನ್ನ ಅರಣ್ಯ ಇಲಾಖೆ ಬಾಗಿಲಲ್ಲಿ ಇಟ್ಟು ಈ ಸಾವಿಗೆ ಅಧಿಕಾರಿಗಳೇ ಕಾರಣ. ಇದು ಅಧಿಕಾರಿಗಳು ಮಾಡಿದ ಕೊಲೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ, ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಮನಸ್ಸೋ ಇಚ್ಛೆ ಲಾಠಿ ಬೀಸಿದ್ದಾರೆ. 

ಅರಣ್ಯ ಇಲಾಖೆ ವಿರುದ್ದ ಆಕ್ರೋಶ:  ಪ್ರತಿ ಬಾರಿ ಆನೆ ಇದೆ ಎಂದು ಫೋನ್ ಮಾಡಿದರೆ ಗಂಟೆ ಬಿಟ್ಟು ಬರುವ ಅಧಿಕಾರಿಗಳು ಎರಡು ಪಟಾಕಿ ಸಿಡಿಸಿ ಹೋಗುತ್ತಾರೆ. ಅವರು ಮತ್ತೆ ಬರುವುದು ಮತ್ತೆ ಆನೆ ಬಂದಾಗಲೇ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ರೆಬಲ್ ಆಗಿದ್ದರು. ಆನೆಯನ್ನ ಸೆರೆ ಹಿಡಿಯುವಂತೆ ನೂರಾರು ಬಾರಿ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಜನ ಮಾತ್ರ ಮೇಲಿಂದ ಮೇಲೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. 

ಮೂಡಿಗೆರೆ ತಾಲೂಕಿನ ಕುಂದೂರು, ಸಾರಗೋಡು, ಗುತ್ತಿಹಳ್ಳಿ, ಊರಬಗೆ, ಕೋಗಿಲೆ, ಗೌಡಹಳ್ಳಿ, ದೇವವೃಂದ, ಬೈರಾಪುರ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಆನೆ ಸಮಸ್ಯೆ ಮಿತಿ ಮೀರಿದೆ. ಆನೆಗಳು ಹಳ್ಳಿಗೆ ಬರುತ್ತಿವೆ. ಬೆಳೆಗಳು ಒಂದೂ ಉಳಿಯುತ್ತಿಲ್ಲ. ಜನ ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ. 

ಆದರೆ, ಅಧಿಕಾರಿಗಳು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಆರಾಮಾಗಿದ್ದಾರೆ ಎಂದು ಅಧಿಕಾರಿಗಳ ಮೇಲೆ ಕೆಂಡಕಾರುತ್ತಾ ಮೂಡಿಗೆರೆ ಆರ್.ಎಫ್.ಓ. ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.  ಈ ವೇಳೆ, ಅಧಿಕಾರಿಗಳು-ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ಉಂಟಾಗಿ ಲಾಠಿ ಚಾರ್ಜ್ ನಡೆಸಿದ್ದಾರೆ. 

ಕಾಡಾನೆ ದಾಳಿಯಿಂದ ಬೆಳೆ ನಾಶ: ಕಂಗಾಲಾದ ಕೃಷಿಕರು

ಒಟ್ಟಾರೆ, ಸ್ಥಳೀಯರು ಆನೆ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗಲೇ ಅಧಿಕಾರಿಗಳು ಕ್ರಮಕೈಗೊಂಡರೆ ಏನೂ ಆಗುತ್ತಿರಲಿಲ್ಲ. ಪ್ರಾಣವೂ ಉಳಿಯೋದು. ಬೆಳೆಯೂ ಉಳಿಯೋದು. ಆದರೆ, ಅಧಿಕಾರಿಗಳ ಆಯ್ತು... ಮಾಡೋಣ.... ಬರೋಣ... ಓಡಿಸೋಣ... ನೋಡೋಣ... ಎಂಬ ಸಿದ್ಧ ಉತ್ತರ ಇಂದು ಸ್ಥಳಿಯರನ್ನ ಈ ರೀತಿ ಕೆರಳಿಸಿತ್ತು. 

ಈಗಾಗಲೇ ಹಿಂಡು-ಹಿಂಡು ಕಾಡನೆಗಳು ಮಲೆನಾಡಲ್ಲಿ ಲಗ್ಗೆ ಇಟ್ಟಿವೆ. ಕೂಡಲೇ ಅವುಗಳನ್ನ ಸ್ಥಳಾಂತರಿಸದಿದ್ದರೆ ಇವತ್ತು ಅರ್ಧಕ್ಕೆ ಬಿಟ್ಟಿರುವ ಕೆಲಸವನ್ನ ಮುಂದಿನ ದಿನಗಳಲ್ಲಿ ಪೂರ್ತಿ ಮಾಡುತ್ತೇವೆ ಎಂದು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

Follow Us:
Download App:
  • android
  • ios