Asianet Suvarna News Asianet Suvarna News

20ರಂದು ಶಿಗ್ಗಾಂವಿಯಲ್ಲಿ ಸಿಎಂ ಮನೆ ಎದುರು ಧರಣಿ ಖಚಿತ; ಮೃತ್ಯುಂಜಯ ಸ್ವಾಮೀಜಿ

  • 20ರಂದು ಶಿಗ್ಗಾಂವಿಯಲ್ಲಿ ಸಿಎಂ ಮನೆ ಎದುರು ಧರಣಿ ಖಚಿತ
  • ಪೂರ್ವಭಾವಿ ಸಭೆಯಲ್ಲಿ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ
Protest in front of the CM  bommai house at shiggavi warn jayamrityunjaya swamiji rav
Author
First Published Sep 18, 2022, 12:31 PM IST

ರಾಣಿಬೆನ್ನೂರು (ಸೆ.18) : ಪಂಚಮಸಾಲಿ ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 2ಎ ಮೀಸಲಾತಿ ನೀಡುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಇನ್ಮುಂದೆ ಸಹಿಸುವುದಿಲ್ಲ ಎಂದು ಕೂಡಲ ಸಂಗಮದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನುಡಿದರು. ನಗರದ ನಾಗಶಾಂತಿ ಉನ್ನತಿ ಪಿಯು ಕಾಲೇಜಿನಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರ ಕುರಿತು ಶಿಗ್ಗಾಂವಿಯ ಸಿಎಂ ಮನೆ ಎದುರು ಧರಣಿ ನಡೆಸುವ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶಿಗ್ಗಾಂವಿಯಲ್ಲಿ ಜವಳಿ ಪಾರ್ಕ್‌ಗೆ ಸಿಎಂ ಶಂಕು: ಕೃಷಿ ಉದ್ಯಮ ನೀತಿಯ ಭರವಸೆ

ಸಮಾಜಕ್ಕೆ ಮೀಸಲಾತಿ ನೀಡಿಕೆ ವಿಚಾರ ಕುರಿತು ವಿಧಾನಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಸ್ತಾಪಿಸಿದಾಗ ಅದನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಆದರೆ ಇಂದಿನವರೆಗೂ ಬೇಡಿಕೆ ಈಡೇರಿಸಿಲ್ಲ. ಅದಕ್ಕಾಗಿ ಸೆ. 20ರಂದು ಶಿಗ್ಗಾಂವಿಯ ಮುಖ್ಯಮಂತ್ರಿ ಮನೆ ಎದುರು ಧರಣಿ ಸತ್ಯಾಗ್ರಹ ನಡೆಸಿಯೇ ತಿರುತ್ತೇವೆ ಎಂದು ಎಚ್ಚರಿಸಿದರು.

ರಾಣಿಬೆನ್ನೂರು ತಾಲೂಕಿನ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಹೋರಾಟ ಯಶಸ್ವಿ ಮಾಡಬೇಕು. ಎಸ್‌ಎಸ್‌ಎಲ್‌ಸಿ, ಪಿಯುಸಿ ಮಕ್ಕಳನ್ನು ಹೋರಾಟಕ್ಕೆ ಕರೆ ತನ್ನಿರಿ. ಇದು ತಾರ್ಕಿಕ ಅಂತ್ಯ ತಲುಪುವವರೆಗೂ ಹೋರಾಟ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಯಡಿಯೂರಪ್ಪ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ಆಶಾಭಾವನೆ ಇತ್ತು. ಏಕೆಂದರೆ ಅವರು ನಮ್ಮ ಸಮಾಜದ ಬೆಂಬಲ ಕೋರಿದ್ದರು. ಅವರ ಮೇಲೆ ಭರವಸೆ ಇಟ್ಟು ಅವರನ್ನು ಮುಖ್ಯಮಂತ್ರಿ ಮಾಡಲು ಬೆಂಬಲ ನೀಡಿದ್ದೆವು. ಆದರೆ ಅವರು ನಮ್ಮ ಸಮಾಜದ ಮೀಸಲಾತಿ ಬೇಡಿಕೆ ಕಡೆಗಣಿಸಿದರು ಎಂದು ಆರೋಪಿಸಿದರು.

ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಮೀಸಲಾತಿ ನೀಡುವ ಆಶಾಭಾವನೆಯಿತ್ತು. ಆ. 22ರ ಒಳಗಾಗಿ ಮೀಸಲಾತಿ ಘೋಷಣೆ ಭರವಸೆ ನೀಡಿದರು. ಆದರೆ ಮೀಸಲಾತಿ ನೀಡುವ ಭರವಸೆ ಹುಸಿಯಾಯಿತು. ಅವರು ಮೀಸಲಾತಿ ನೀಡಲು ಆಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದಲ್ಲಿ ಅದಕ್ಕೂ ಸಿದ್ಧವಾಗಿದ್ದೇವೆ. ಸರ್ಕಾರ ನಾಲ್ಕು ಬಾರಿ ಕೊಟ್ಟಮಾತು ತಪ್ಪಿದೆ. ಈ ಹಿನ್ನೆಲೆಯಲ್ಲಿ ಸದನದಲ್ಲಿ ಸಮಾಜದ ಶಾಸಕರು ಮೀಸಲಾತಿ ಕುರಿತು ಮಾತನಾಡುವಂತೆ ಸೂಚಿಸಿರುವೆ. ಇದೀಗ ಮುಖ್ಯಮಂತ್ರಿ ಪಂಚಮಸಾಲಿ ಸಮಾಜದ ಶಾಸಕರ ಸಭೆ ಕರೆದಿದ್ದಾರೆ. ಮುಖ್ಯಮಂತ್ರಿ ಸದನದಲ್ಲಿ ಮೀಸಲಾತಿ ಘೋಷಣೆ ಮಾಡಿದಲ್ಲಿ ಮಾತ್ರ ಸೆ. 20ರ ಹೋರಾಟ ಹಿಂಪಡೆದು ನಿಮಗೆ ಸನ್ಮಾನ ಮಾಡುತ್ತೇವೆ, ಇಲ್ಲವಾದರೆ ಹೋರಾಟ ಖಚಿತ. ಸೆ. 20ರ ನಂತರ ‘ಮಾಡು ಇಲ್ಲವೇ ಮಡಿ’ ರೀತಿಯಲ್ಲಿ ವಿಧಾನಸಭೆ ಎದುರು ಅಂತಿಮ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಬ್ಯಾಡಗಿ: ಮೆಣಸಿನಕಾಯಿ ಖರೀದಿಸಿ 4.70 ಕೋಟಿ ವಂಚನೆ

ಶಿವಪ್ಪ ಗುರಿಕಾರ, ಸಿದ್ದು ಚಿಕ್ಕಬಿದರಿ, ಎ.ಬಿ. ಪಾಟೀಲ, ಪ್ರಭಾವತಿ ತಿಳವಳ್ಳಿ, ಉಮೇಶ ಗುಂಡಗಟ್ಟಿ, ರಾಜಣ್ಣ ಮೋಟಗಿ, ರಾಜಣ್ಣ ಪಾಟೀಲ, ಮಂಗಳಗೌರಿ ಪೂಜಾರ, ಗಂಗಾಧರ ಬೂದನೂರ, ಸುಲೋಚನ ಜಂಬಗಿ ಮತ್ತಿತರರಿದ್ದರು.

Follow Us:
Download App:
  • android
  • ios