Asianet Suvarna News Asianet Suvarna News

Bagalkote: 229ನೇ ದಿನಕ್ಕೆ ಕಾಲಿಟ್ಟ ನೂತನಮಹಾಲಿಂಗಪುರ ತಾಲೂಕು ರಚನೆ ಹೋರಾಟ

ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರದ ವ್ಯಾಪ್ತಿಯ ಮಹಾಲಿಂಗಪುರ ಪಟ್ಟಣವನ್ನ ತಾಲೂಕನ್ನಾಗಿಸಬೇಕೆಂಬ ಅನಿರ್ದಿಷ್ಟಾವಧಿ ಹೋರಾಟ ಶುರುವಾಗಿ ಇಂದಿಗೆ 229 ದಿನಕ್ಕೆ ಕಾಲಿಟ್ಟಿದ್ದು, ಸರಕಾರದಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಮಹಾಲಿಂಗಪುರ   ತಾಲೂಕ ರಚನೆ ಹೋರಾಟಗಾರರು ಅಸಮಾಧಾನಗೊಂಡಿದ್ದು, ಮತ್ತೆ ಈಗ ಹೋರಾಟ ತೀವ್ರಗೊಳಿಸಲು ಸಿದ್ದರಾಗಿದ್ದಾರೆ.

protest in demand of mahalingapura as taluk entered 229 day in Bagalkote gow
Author
First Published Nov 29, 2022, 6:33 PM IST

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್

ಬಾಗಲಕೋಟೆ (ನ.29): ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರದ ವ್ಯಾಪ್ತಿಯ

ಮಹಾಲಿಂಗಪುರ ಪಟ್ಟಣವನ್ನ ತಾಲೂಕನ್ನಾಗಿಸಬೇಕೆಂಬ ಅನಿರ್ದಿಷ್ಟಾವಧಿ ಹೋರಾಟ ಶುರುವಾಗಿ ಇಂದಿಗೆ 229 ದಿನಕ್ಕೆ ಕಾಲಿಟ್ಟಿದ್ದು, ಇವುಗಳ ಮಧ್ಯೆ ಶಾಸಕ ಸಿದ್ದು ಸವದಿ ಹೋರಾಟಗಾರರ ನಿಯೋಗವನ್ನ ಸಿಎಂ ಬೊಮ್ಮಾಯಿಗೆ ಭೇಟಿ ಮಾಡಿಸಿದ್ದು, ಸಿಎಂ ಬೊಮ್ಮಾಯಿಂದ ಪೂರಕ ಸ್ಪಂದನೆ ಸಿಗದ್ದಕ್ಕೆ ಮಹಾಲಿಂಗಪುರ ತಾಲೂಕ ರಚನೆ ಹೋರಾಟಗಾರರು ಅಸಮಾಧಾನಗೊಂಡಿದ್ದು, ಮತ್ತೇ ಈಗ ಹೋರಾಟ ತೀವ್ರಗೊಳಿಸಲು ಸಿದ್ದರಾಗಿದ್ದಾರೆ. ಈ ಕುರಿತ ವರದಿ ಇಲ್ಲಿದೆ. ಒಂದೆಡೆ ಅನಿರ್ಧಿಷ್ಟಾವಧಿ ಪ್ರತಿಭಟನಾ ಹೋರಾಟ ನಡೆಸುತ್ತಿರೋ ತಾಲೂಕ ಹೋರಾಟಗಾರರು, ಹೋರಾಟಗಾರರನ್ನ ಸಿಎಂಗೆ ಭೇಟಿ ಮಾಡಿಸಿದ ಶಾಸಕ ಸವದಿ, ಸಿಎಂ ಭೇಟಿಯಾದ್ರೂ ಸಮರ್ಪಕ ಸ್ಪಂದನೆ ಸಿಗದೇ ಮತ್ತೇ ಉಗ್ರ ಹೋರಾಟಕ್ಕೆ ಮುಂದಾಗಿರೋ ತಾಲೂಕು ರಚನೆ ಹೋರಾಟ ಸಮಿತಿ. ಅಂದಹಾಗೆ ಇಂತಹವೊಂದು ಪರಿಸ್ಥಿತಿ ಕಂಡು ಬರುತ್ತಿರೋದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ. ಹೌದು. ಮಹಾಲಿಂಗಪುರ ಪಟ್ಟಣವನ್ನ ತಾಲೂಕನ್ನಾಗಿ ಘೋಷಣೆ ಮಾಡುವಂತೆ ಆಗ್ರಹಿಸಿ ನಡೆದಿರೋ ಅನಿರ್ದಿಷ್ಟಾವಧಿ ಹೋರಾಟದ ಧರಣಿ ಸತ್ಯಾಗ್ರಹ ಮುಂದುವರೆದು ಇಂದಿಗೆ 229 ದಿನ ಕಳೆದಿವೆ. ಆದರೆ ಹೋರಾಟಕ್ಕೆ ನ್ಯಾಯ ಮಾತ್ರ ಸಿಕ್ಕಿಲ್ಲ. ಈಗಾಗಲೇ ವಿವಿಧ ಹಂತದಲ್ಲಿ ಹೋರಾಟ ಮಾಡಿರುವ ಪ್ರತಿಭಟನಾಕಾರರು ನ್ಯಾಯ ಸಿಗೋವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ. 

ಸಿಎಂ ಬೊಮ್ಮಾಯಿ ಭೇಟಿಯಾದ್ರೂ ನ್ಯಾಯಕ್ಕಾಗಿ ಪಟ್ಟು ಬಿಡದ ತಾಲೂಕು ಹೋರಾಟ ಸಮಿತಿ 
ನಿರಂತರ ಧರಣಿ ಸತ್ಯಾಗ್ರಹ ಮಾಡುತ್ತಿರುವ ಮಹಾಲಿಂಗಪುರ ತಾಲೂಕ ರಚನೆ ಹೋರಾಟ ಸಮಿತಿ ಸದಸ್ಯರನ್ನು ಡಿ.24ಕ್ಕೆ ನಾಡ ದೊರೆ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರನ್ನ ಭೇಟಿ ಮಾಡಿಸುವುದಾಗಿ ಹೇಳಿ ಸ್ಥಳೀಯ ಶಾಸಕ ಸಿದ್ದು ಸವದಿ ಹೋರಾಟಗಾರರ ನಿಯೋಗವನ್ನ ಬೆಂಗಳೂರಿಗೆ ಬರುವಂತೆ ಹೇಳಿದ್ದರು. ಈ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಅವರನ್ನ ಭೇಟಿ ಸಹ ಮಾಡಿಸಿದ್ರು, ಆದ್ರೆ ಮುಖ್ಯಮಂತ್ರಿಗಳು ಈಗ ಮಹಾಲಿಂಗಪುರ ಪಟ್ಟಣವನ್ನ ಹೋಬಳಿ ಮಾಡೋಣ, ಮುಂದೆ ತಾಲೂಕು ಮಾಡುವ ಸಂದರ್ಭದಲ್ಲಿ ಮಾಡೋಣ ಅಂತ ಹೇಳಿದ್ರಂತೆ, ಇದ್ರಿಂದ ತಾಲೂಕ ಹೋರಾಟ ಸಮಿತಿ ಸದಸ್ಯರು ಆಕ್ರೋಶಗೊಂಡಿದ್ದು ತಾಲೂಕು ರಚನೆ ಆಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಸಿದ್ದು ಸವದಿ ಅವರು ಕಾಟಾಚಾರಕ್ಕೆ ಸಿಎಂ ಅವರನ್ನ ಭೇಟಿ ಮಾಡಿಸಿದ್ದಾರೆ ಮತ್ತು ಸಮರ್ಪಕವಾಗಿ ಸ್ಪಂದನೆ ಸಿಗುವಂತೆ ಮಾಡಲಿಲ್ಲವೆಂದು ಹೋರಾಟಗಾರರಾದ ಶಿವಲಿಂಗ ಟಿರ್ಕಿ ಆರೋಪಿಸಿದ್ದಾರೆ.

ಬೆಳಗಾವಿ ಅಧಿವೇಶನಕ್ಕೂ ಮುನ್ನ ಸೂಕ್ತ ನಿರ್ಧಾರ ಕೈಗೊಳ್ಳಿ, ಇಲ್ಲವಾದರೆ ಉಗ್ರ ಹೋರಾಟ 
ಇನ್ನು ದಿನದಿಂದ ದಿನಕ್ಕೆ ತಮ್ಮ ಹೋರಾಟವನ್ನ ತೀವ್ರಗೊಳಿಸಲು ಮುಂದಾಗಿರೋ ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿ ಇದೀಗ ಸರ್ಕಾರಕ್ಕೆ ಬೆಳಗಾವಿ ಅಧಿವೇಶನದ ಡೆಡ್​ಲೈನ್​ ನೀಡಿದ್ದಾರೆ.  ಹೀಗಾಗಿ ಬೆಳಗಾವಿ ಅಧಿವೇಶನಕ್ಕೂ ಮುನ್ನ ಸರ್ಕಾರ ನೂತನ ಮಹಾಲಿಂಗಪುರ ತಾಲೂಕು ರಚನೆ ಕುರಿತು ತಮ್ಮ ನಿರ್ಧಾರವನ್ನ ಪ್ರಕಟಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಈ ಮಧ್ಯೆ ಇದೇ ಕಾರಣಕ್ಕೆ ಮುಂದಿನ ರೂಪರೇಷೆ ರೂಪಿಸಲು ಡಿಸೆಂಬರ್ 1ರಂದು ಸಭೆ ಕರೆದಿದ್ದು, ಸಭೆಯಲ್ಲಿ ಮುಂದಿನ ಉಗ್ರ ಹೋರಾಟ ನಿರ್ಣಯ ಕೈಗೊಳ್ಳಲಾಗುವುದೆಂದು ತಾಲೂಕ ರಚನೆ ಸಮಿತಿ ಅಧ್ಯಕ್ಷ ಸಂಗಪ್ಪ ತಿಳಿಸಿದ್ದಾರೆ.

ತಾಲೂಕು ರಚನೆಯಾಗದಿದ್ದರೆ ಮುಂದಿನ ಚುನಾವಣೆಯಲ್ಲಿ ಸೂಕ್ತ ನಿರ್ಧಾರ ಎಂದ ಹೋರಾಟಗಾರರು 
ಮಹಾಲಿಂಗಪುರ ನೂತನ ತಾಲೂಕು ಹೋರಾಟ ಸಮಿತಿ ಸದಸ್ಯರು ಸ್ಥಳೀಯರೊಂದಿಗೆ ಸೇರಿ ಇನ್ಮುಂದೆ ಹಂತ ಹಂತವಾಗಿ ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿರುವುದು ಒಂದು ಭಾಗವಾಗದರೆ ಮತ್ತೊಂದೆಡೆ ತೇರದಾಳ ಶಾಸಕ ಸಿದ್ದು ಸವದಿ ಅವರನ್ನ ಬಹಿಷ್ಕರಿಸೋದು ಮತ್ತು ಪಟ್ಟಣದಲ್ಲಿ ತೆರಿಗೆ ಕಟ್ಟುವುದನ್ನು ನಿಷೇಧಿಸುವುದು, ಲಕ್ಷಾಂತರ ಜನ ಸೇರಿಸಿ ಉಗ್ರ ಪ್ರತಿಭಟನಾ ಹೋರಾಟವನ್ನ ನಡೆಸುವ ಪ್ಲ್ಯಾನ್​ನ್ನ ಹೋರಾಟಗಾರರು ಮಾಡುವವರಿದ್ದು, ಒಂದೊಮ್ಮೆ ಮಹಾಲಿಂಗಪುರ ದಲ್ಲಿ ಹೋರಾಟ ಶುರುವಾದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಶಾಸಕ ಸಿದ್ದು ಸವದಿಗೆ ಮಹಾಲಿಂಗಪುರ ಭಾಗದ ವ್ಯಾಪ್ತಿಯಲ್ಲಿ ಸಂಕಷ್ಟ ತಪ್ಪಿದ್ದಲ್ಲ. ರಾಜಕೀಯವಾಗಿ ಹೆಚ್ಚಿನ ಒಲವು ನೀಡಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತಾಲೂಕು ಹೋರಾಟಗಾರರ ಹೋರಾಟಕ್ಕೆ ಸ್ಪಂದಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇಂದು ಶಾಸಕ ಸವದಿಗೆ ಎದುರಾಗಿದೆ. ಈ ಮಧ್ಯೆ ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿ ಡಿಸೆಂಬರ್ 1ಕ್ಕೆ ಸಭೆ ಕರೆದಿದ್ದು, ಇದ್ರಲ್ಲಿ ಕೈಗೊಳ್ಳವ ನಿರ್ಣಯ ಮುಂದಿನ ಹೋರಾಟದ ದಿಕ್ಕನ್ನೆ ಬದಲಿಸಬಹುದಾಗಿದೆ.

ಮಹಾಲಿಂಗಪೂರ ತಾಲೂಕು ರಚನೆಗೆ ಆಗ್ರಹಿಸಿ ಹೋರಾಟ; ಪಟ್ಟು ಬಿಡದ ತಾಲೂಕು ಹೋರಾಟ ಸಮಿತಿ

ಒಟ್ಟಿನಲ್ಲಿ 229 ದಿನ ಪೂರೈಸಿರೋ ಮಹಾಲಿಂಗಪುರ ತಾಲೂಕು ರಚನೆ ಹೋರಾಟ ಸಮಿತಿಯು ತಮ್ಮ ಹೋರಾಟ ತೀವ್ರಗೊಳಿಸಲು ಮುಂದಾಗಿದ್ದು, ಇದಕ್ಕೆ ಸ್ಥಳೀಯ ಶಾಸಕ ಸಿದ್ದು ಸವದಿ ಅವಕಾಶ ನೀಡುವರೆ ಅಥವಾ ಹೋರಾಟ ಸಮಿತಿ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಮಟ್ಟದಲ್ಲಿ ಇನ್ನಷ್ಟು ಪ್ರಭಾವ ಬೀರಿ ನೂತನ ಮಹಾಲಿಂಗಪುರ ತಾಲೂಕ ರಚನೆಗೆ ಮುಂದಾಗುವರೇ ಅಂತ  ಕಾದು ನೋಡಬೇಕಿದೆ.

Follow Us:
Download App:
  • android
  • ios