ಪರಿಶಿಷ್ಟ ಜಾತಿ ಸಮುದಾಯದ ಒಳಮೀಸಲಾತಿ ಹೋರಾಟ, ಬಾದಾಮಿಯಲ್ಲಿ ಪ್ರತಿಭಟನಾ ಯಾತ್ರೆ
ಬಾದಾಮಿಯಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಒಳಮೀಸಲಾತಿ ಹೋರಾಟ. ಸಿದ್ದರಾಮಯ್ಯ ಸ್ಪಂದಿಸದೇ ಹೋದರೆ ಸಿದ್ದು ಹೋದ ಕಡೆಗೆ ಹೋಗಿ ಸೋಲಿಸುವ ಎಚ್ಚರಿಕೆ
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಡಿ.15): ಪರಿಶಿಷ್ಟ ಜಾತಿ ಒಳಮೀಸಲಾತಿಗೆ ಸ್ಪಂದನೆ ನೀಡದ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ರಾಜ್ಯದಲ್ಲಿ ಎಲ್ಲಿಯಾದ್ರೂ ಸ್ಪರ್ಧೆ ಮಾಡಲಿ, ಆ ಕ್ಷೇತ್ರಕ್ಕೆ ಹೋಗಿ ಅವರನ್ನ ಸೋಲಿಸುತ್ತೇವೆ ಎಂದು ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮುತ್ತಣ್ಣ ಬೆಣ್ಣೂರ ಎಚ್ಚರಿಕೆ ನೀಡಿದ್ರು. ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು, ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡಬೇಕೆನ್ನುವ ಉದ್ದೇಶದಿಂದ ನಿರಂತರ ಹೋರಾಟ ನಡೆದುಕೊಂಡು ಬಂದಿದ್ದು, ಆದರೆ ಯಾವುದೇ ಸರ್ಕಾರಗಳು ಒಳಮೀಸಲಾತಿ ನೀಡುತ್ತಿಲ್ಲ.
ಇವುಗಳ ಮಧ್ಯೆ ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಸಹ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯನವರು ಆ ಬಗ್ಗೆ ಮಾತನಾಡಲಿಲ್ಲ, ಆದ್ರೆ ಈಗ ಸಿದ್ದರಾಮಯ್ಯನವರು ಮಾತನಾಡೋದು ಸರಿಯಲ್ಲ, ಈ ಮಧ್ಯೆ ಸಿದ್ದರಾಮಯ್ಯನವರು ಬೆಂಬಲಿಸಿ ಸ್ಪಂದನೆ ನೀಡದೇ ಹೋದರೆ ರಾಜ್ಯದಲ್ಲಿ ಎಲ್ಲೇ ಸ್ಫರ್ಧೆ ಮಾಡಿದರೂ ಸಹ ಅವರನ್ನ ಸೋಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ರು. ಸದ್ಯ ಸಿದ್ದರಾಮಯ್ಯನವರು ಈಗಾಗಲೇ ಬಾದಾಮಿ, ಕೋಲಾರ, ವರುಣಾ ಸೇರಿದಂತೆ ವಿವಿಧ ಮತಕ್ಷೇತ್ರಗಳ ಹೆಸರು ಹೇಳುತ್ತಿದ್ದಾರೆ, ಆದರೆ ಎಲ್ಲಿಯೇ ನಿಂತರೂ ಜನರನ್ನ ಜಾಗೃತಿಗೊಳಿಸಿ ಅವರನ್ನು ಸೋಲಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ಸರ್ಕಾರಕ್ಕೆ ಬೆಳಗಾವಿ ಅಧಿವೇಶನದ ಗಡುವು: ಇನ್ನು ಈ ಹಿಂದೆ ಕಾಂಗ್ರೆಸ್ ಸರ್ಕಾರ ಮಾಡಿದ ತಪ್ಪನ್ನ ಇಂದಿನ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಮಾಡೋದು ಬೇಡ. ಅದರ ಬದಲಾಗಿ ಬಿಜೆಪಿ ಸರ್ಕಾರ ಬೆಳಗಾವಿಯಲ್ಲಿ ಆರಂಭವಾಗುವ ಅಧಿವೇಶನದಲ್ಲಿ ಒಳಮೀಸಲಾತಿಗೆ ಸಂಭಂದಿಸಿದಂತೆ ಸದಾಶಿವ ಆಯೋಗ ವರದಿ ಜಾರಿಗೊಳಿಸಬೇಕು, ಆ ಮೂಲಕ ಪರಿಶಿಷ್ಟ ಜಾತಿ ಒಳಮೀಸಲಾತಿ ಸಿಗುವಂತೆ ನೋಡಿಕೊಳ್ಳಬೇಕು. ಅಕಸ್ಮಾತ್ ಒಳಮೀಸಲಾತಿ ಜಾರಿ ಮಾಡದೇ ಇದ್ದಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ರಾಜ್ಯ ಮಾದಿಗ ಸಮುದಾಯಗಳ ಒಕ್ಕೂಟ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಹೇಳಿದರು.
ಒಳ ಮೀಸಲಾತಿ ಸಮಿತಿ ಕಣ್ಣೊರೆಸುವ ತಂತ್ರ: ಸಿದ್ದರಾಮಯ್ಯ
ವಿವಿಧ ಜಿಲ್ಲೆಗಳಲ್ಲಿ ನಿಲ್ಲದ ಬೈಕ್ ರ್ಯಾಲಿ ಸಂಚಾರ: ಇನ್ನು ಶತಾಯಗತಾಯ ಈ ಬಾರಿ ಒಳಮೀಸಲಾತಿ ಪಡೆದೇ ತೀರುವ ನಿರ್ಧಾರಕ್ಕೆ ಬಂದಿರುವ ರಾಜ್ಯ ಮಾದಿಗ ಸಮುದಾಯಗಳ ಒಕ್ಕೂಟ ಹೋರಾಟ ತೀವ್ರಗೊಳಿಸಿದ್ದು, ಈ ಮಧ್ಯೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೃಹತ್ ಬೈಕ್ ರ್ಯಾಲಿ ಆಯೋಜಿಸಿ ಸಂಚರಿಸುವ ಮೂಲಕ ಸರ್ಕಾರದ ಮುಂದೆ ತಮ್ಮ ಹಕ್ಕಿಗೆ ಹೋರಾಟ ನಡೆಸಿದ್ದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದೆ.