‘ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ದೇಶ ದ್ರೋಹದ ಕೆಲಸ ಮಾಡ್ತಿದ್ದಾರೆ’

ಕೇಂದ್ರದಿಂದ ಸಾಮರಸ್ಯ ಕದಡುವ ಯತ್ನ| ಸಿಎಎ ವಿರೋಧಿಸಿ ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ನಿಂದ ಬೃಹತ್‌ ಪ್ರತಿಭಟನಾ ಸಭೆ| ಪ್ರತಿಭಟನಾ ಸಭೆಯಲ್ಲಿ ಪಕ್ಷದ ಮುಖಂಡರು ಸರ್ಕಾರದ ವಿರುದ್ಧ ವಾಗ್ದಾಳಿ|ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ಕಾಯ್ದೆ ಜಾರಿಗೊಳಿಸಿ ಮುಸ್ಲಿಂ, ದಲಿತರ ಮೇಲೆ ದೌರ್ಜನ್ಯ|

Protest Held Against Citizenship Act in Shiggaon in Haveri District

ಶಿಗ್ಗಾಂವಿ[ಜ.22]: ಸಂವಿಧಾನ ಬಾಹಿರ, ಜನ ವಿರೋಧಿ ಪೌರತ್ವ ಕಾಯ್ದೆ ಸೇರಿದಂತೆ ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ಕಾಯ್ದೆಗಳನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಪಟ್ಟಣದಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನಾ ಸಭೆಯಲ್ಲಿ ಪಕ್ಷದ ಮುಖಂಡರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ.

ಸಭೆ ಉದ್ಘಾಟಿಸಿ ಮಾತನಾಡಿದ ಶಾಸಕ ರಿಜ್ವಾನ್‌ ಅರ್ಷದ್‌, ದೇಶದ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳದ ಪ್ರಧಾನಿ ಮೋದಿ, ಅಮಿತ್‌ ಶಾ, ದೇಶದಲ್ಲಿ ತಾಂಡವಾಡುವ ಜ್ವಲವಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬದಲು ಸಾಮರಸ್ಯ ಕದಡುವ ಕಾಯ್ದೆಗಳನ್ನು ಜಾರಿಗೊಳಿಸಿ ದೇಶ ದ್ರೋಹ ಕೆಲಸ ಮಾಡುತ್ತಿದ್ದಾರೆ. ಶ್ರೀರಾಮನ ಭಕ್ತಿ ನೆಪದಲ್ಲಿ ನಾಥುರಾಮ ಗೋಡ್ಸೆ ಭಕ್ತರಾಗಿ ದೇಶದ ಮುಗ್ಧ ಜನರ ಮೇಲೆ ಅನ್ಯಾಯ, ದಬ್ಬಾಳಿಕೆ, ಅನೀತಿ, ಅನಾಚಾರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮುಸ್ಲಿಂರು ಮೂಲ ಭಾರತೀಯರು. ಭಾರತೀಯ ಸಂಸ್ಕೃತಿ, ಸಂಸ್ಕಾರಗಳನ್ನು ಮೈಗೂಡಿಸಿಕೊಂಡ ಬದುಕಿರುವರ ಬದುಕು ಕಿತ್ತುಕೊಳ್ಳುವ ಕೆಲಸ ಮಾಡುತ್ತಿರುವ ಮೋದಿ, ಪೌರತ್ವ ಕಾಯ್ದೆ ಮೂಲಕ ಪೌರುಷ ತೋರಿಸುತ್ತಿದ್ದಾರೆ. ನಿಮ್ಮ ಕಾನೂನುಗಳಿಗೆ ಹೆದರುವುದಿಲ್ಲ. ರಕ್ತ ಕೊಡುತ್ತೇವೆ. ಡಿಎನ್‌ಎ ಪರೀಕ್ಷಿಸಿದರೂ ಮೂಲ ಭಾರತೀಯರ ಎನ್ನುವುದು ಸಾಬೀತವಾಗುತ್ತದೆ ಹೊರತು, ದಾಖಲೆಗಳನ್ನು ನೀಡುವುದಿಲ್ಲ. ನಿಮ್ಮ ಸ್ವಾರ್ಥಕ್ಕೆ ಕಾನೂನು ಸೃಷ್ಟಿಸಿ zದೇಶದ ಸಾಮರಸ್ಯ ಪಂಕ್ಚರ್‌ ಮಾಡಬೇಡಿ ಎಂದು ಅಕ್ರೋಶ ವ್ಯಕ್ತಪಡಿಸಿದರು.

ವಿಪ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಪ್ರವಾಹಕ್ಕೆ ಸಿಲುಕಿ ನರಳುತ್ತಿರುವ ದೇಶದ ಜನರ ಸಮಸ್ಯೆಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಹಿಂದುತ್ವದ ಡೋಂಗಿ ಸೋಗಿನಲ್ಲಿ

ದೇಶದಲ್ಲಿ ಶಾಂತಿ, ಸಾಮರಸ್ಯವನ್ನು ಕಲುಷಿತಗೊಳಿಸುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ಮಾಡಿದ ತಪ್ಪು ಮುಚ್ಚಿ ಹಾಕಿಕೊಳ್ಳಲು ಇಂತಹ ಕಾನೂನು ಜಾರಿಗೊಳಿಸುತ್ತಿದ್ದಾರೆ. ಪ್ರವಾಹದಿಂದ ರಾಜ್ಯದಲ್ಲಿ 30 ಸಾವಿರ ಕೋಟಿ ನಷ್ಟ ಅನುಭವಿಸಿದ ಜನರಿಗೆ ಧೈರ್ಯ ಹೇಳಲಿಲ್ಲ. ಬಡವರ ಮೇಲೆ ಸವಾರಿ ಮಾಡುವ ಕಾಯ್ದೆಗಳ ಮೂಲಕ ಒಡೆದಾಳುವ ಬಿಜೆಪಿ, ಆರ್‌ಎಸ್‌ಎಸ್‌ ಸಂಘಟನೆಯ ನೀತಿಗಳನ್ನು ವಿರೋಧಿಸಬೇಕು. ಪೌರತ್ವ ಕಾಯ್ದೆ ಈ ನೆಲದಲ್ಲಿ ಜಾರಿಯಾಗದಂತೆ ಹೋರಾಟದ ಶಕ್ತಿ ಪ್ರದರ್ಶನಕ್ಕೆ ಕರೆ ನೀಡಿದರು.

ಸಾಮಾಜಿಕ ಹೋರಾಟಗಾರ್ತಿ ನಜ್ಞಾ ನಜೀರ ಮಾತನಾಡಿ, ತಮಗೆ ಬೇಕಾದಲ್ಲಿ ದೇಶಪ್ರೇಮಿ, ಬೇಡವಾದಲ್ಲಿ ದೇಶದ್ರೋಹಿ ಪಟ್ಟಕಟ್ಟುವ ಬಿಜೆಪಿ, ಪೌರತ್ವ ಕಾಯ್ದೆ ಸೇರಿದಂತೆ ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ಕಾಯ್ದೆ ಜಾರಿಗೊಳಿಸಿ ಮುಸ್ಲಿಂ, ದಲಿತರ ಮೇಲೆ ದೌರ್ಜನ್ಯ ಎಸುಗುತ್ತಿದೆ. ಮುಸ್ಲಿಂರು ಮೂಲ ಭಾರತೀಯರು. ಇತಿಹಾಸ ತಿಳಿಯದ ಸೂಲಿಬೆಲೆ ಚಕ್ರವರ್ತಿ, ಕಲ್ಲಡ್ಕ ಪ್ರಭಾಕರ ಭಟ್ಟದೇಶ ದ್ರೋಹ ಪಟ್ಟಕಟ್ಟುವ ಸುಳ್ಳು ಭಾಷಣಕಾರರು ಎಂದು ದೂರಿದರು.

ಸಾಮಾಜಿಕ ಹೋರಾಟಗಾರ ಬಿ.ಆರ್‌. ಭಾಸ್ಕರ್‌ರಾವ ಪ್ರಸಾದ, ಎಪಿಎಂಸಿ ಅಧ್ಯಕ್ಷೆ ಪ್ರೇಮಾ ಪಾಟೀಲ, ಜಿಪಂ ಸದಸ್ಯ ರಮೇಶ ದುಗ್ಗತ್ತಿ ಮಾತನಾಡಿದರು. ಎಂ.ಎನ್‌. ವೆಂಕೋಜಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಬಸವರಾಜ ದೇಸಾಯಿ, ದೀಪಾ ಅತ್ತಿಗೇರಿ, ತಾಲೂಕು ಮಹಿಳಾ ಅಧ್ಯಕ್ಷೆ ವಸಂತ ಬಾಗೂರು, ಕಾರ್ಯಾಧ್ಯಕ್ಷ ವೀರೇಶ ಆಜೂರು, ಪ್ರಕಾಶ ಹಾದಿಮನಿ, ಗುರುನಗೌಡ್ರ ಪಾಟೀಲ, ಬಸನಗೌಡ್ರ ದುಂಡಿಗೌಡ್ರ, ಮಹ್ಮದ್‌ಗೌಸ್‌ ಗುಲ್ಮಿ, ಸಿದ್ಧಿಕ ಕತೀಬ, ಮಲ್ಲಿಕಾರ್ಜುನಗೌಡ ಪಾಟೀಲ, ಶಂಭುಲಿಂಗಪ್ಪ ಆಜೂರು, ಹನುಮರೆಡ್ಡಿ ನಡುವಿನಮನಿ, ಎಫ್‌.ಸಿ. ಪಾಟೀಲ, ರಾಜು ಕಮ್ಮಾರ, ಯೂಸೂಬ್‌ ಸಾಬ್‌ ಭಾವಿಕಟ್ಟಿಸೇರಿದಂತೆ ಇತರರು ವೇದಿಕೆ ಮೇಲಿದ್ದರು. ಆನಂತರ ಪೌರತ್ವ ಕಾಯ್ದೆ ಖಂಡಿಸಿ ತಹಸೀಲ್ದಾರ್‌ ಚಂದ್ರಶೇಖರ ಗಾಳಿಗೆ ಮನವಿ ಸಲ್ಲಿಸಲಾಯಿತು. ಎಸ್‌.ಎಫ್‌. ಮಣಕಟ್ಟಿಸ್ವಾಗತಿಸಿದರು. ಶ್ರೀಕಾಂತ ಪೂಜಾರ ನಿರೂಪಿಸಿದರು.

Latest Videos
Follow Us:
Download App:
  • android
  • ios