ಚಿಕ್ಕಬಳ್ಳಾಪುರ [ಸೆ.06]: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಬಂಧನ ಖಂಡಿಸಿ ಮಂಗಳವಾರ ರಾತ್ರಿ ಹೆದ್ದಾರಿ ಬಂದ್ ಮಾಡಿದ 20 ಮಂದಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ತಾಲೂಕಿನ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಂಗಳವಾರ ರಾತ್ರಿ ಡಿ.ಕೆ. ಶಿವಕುಮಾರ್ ಅವರ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ನಗರ ಹೊರವಲಯದ ಚದಲಪುರ ಕ್ರಾಸ್ ಬಳಿ ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ರಾಷ್ಟ್ರೀಯ ಹೆದ್ದಾರಿ 7 ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. 

ಸುಮಾರು 1 ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಬಂದ್ ಮಾಡಿದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಕಿಲೋ ಮೀಟರ್‌ಗಟ್ಟಲೆ ವಾಹನಗಳು ನಿಂತು ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿತ್ತು. ಈ ವಿಚಾರ ಪೊಲೀಸರಿಗೆ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿ, ಸಂಚಾರ ನಿಯಂತ್ರಣಾ ಮಾಡುವಲ್ಲಿ ಯಶಸ್ವಿಯಾಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಯಾವುದೇ ಮಾಹಿತಿ ನೀಡದೆ ವಾಹನಗಳನ್ನು ತಡೆದಿರುವುದು, ಹೆದ್ದಾರಿ ವಾಹನ ಸಂಚಾರಕ್ಕೆ ಧಕ್ಕೆಯುಂಟು ಮಾಡಿರುವುದೂ ಸೇರಿದಂತೆ ಕಾನೂನು ಸುವ್ಯವಸ್ಥೆಗೆ ದಕ್ಕೆ ತಂದ ಆರೋಪದ ಮೇಲೆ ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ಗ್ರಾಪಂ ಸದಸ್ಯ ಶೆಟ್ಟಿಗೆರೆ ಮುರಳಿ, ಪಾತೂರು ಮಂಜುನಾಥ್, ವಿನಯ್, ರಾಜಶೇಖರ್, ಷಾಹಿದ್, ಕೊಳವನಹಳ್ಳಿ ಅರುಣ್, ಸುರೇಶ್ ಸೇರಿದಂತೆ 20 ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ.