ರಾಣಿಬೆನ್ನೂರು(ಜು.24): ಕೊರೋನಾ ಸೋಂಕಿತ ವ್ಯಕ್ತಿಯ ಶವಸಂಸ್ಕಾರವನ್ನು ತಾಂಡಾ ಹತ್ತಿರದಲ್ಲಿ ಮಾಡಬಾರದು ಎಂದು ಒತ್ತಾಯಿಸಿ ತಾಲೂಕಿನ ಗಂಗಾಜಲ ತಾಂಡಾ ಹತ್ತಿರದಲ್ಲಿ ಗುರುವಾರ ಆ್ಯಂಬುಲೆನ್ಸ್‌ ತಡೆದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

ಗುರು​ವಾರ ಬೆಳ​ಗಿನ ಜಾವ ರಾಣಿ​ಬೆ​ನ್ನೂ​ರಿನ ಸೋಂಕಿ​ತ​ರೊಬ್ಬರು ಮೃತ​ಪ​ಟ್ಟಿ​ದ್ದರು. ಅವರ ಶವ​ಸಂಸ್ಕಾ​ರ​ವ​ನ್ನು ನಗರದಿಂದ 5 ಕಿ.ಮೀ. ದೂರದಲ್ಲಿರುವ ಗಂಗಾಜಲ ತಾಂಡಾ ಹತ್ತಿರದಲ್ಲಿ ನಡೆಸಲಾಗುತ್ತಿದೆ ಎಂಬುದನ್ನು ಅರಿತ ಅಲ್ಲಿಯ ನಿವಾಸಿಗಳು ಶವ ಬರುವ ಮುನ್ನವೇ ದಾರಿಯಲ್ಲಿ ನಿಂತುಕೊಂಡು ಆ್ಯಂಬುಲೆನ್ಸ್‌ ತಡೆದು ಇಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದರು. ಸುಮಾರು ಒಂದೂ​ವರೆ ಗಂಟೆ ಪ್ರತಿ​ಭ​ಟನೆ ನಡೆ​ದಿದೆ.

ಇಲ್ಲಿನ ಗೋವಿಂದ ಬಡಾವಣೆ, ಗಂಗಾಜಲ ತಾಂಡಾ, ಪದ್ಮಾವತಿಪುರ ತಾಂಡಾದಲ್ಲಿ ನೂರಾರು ಕುಟುಂಬಗಳು ವಾಸ ಮಾಡುತ್ತಿವೆ. ಇಂತಹ ಸಮಯದಲ್ಲಿ ತಾಂಡಾ ಹತ್ತಿರದಲ್ಲಿಯೇ ಶವ ಸಂಸ್ಕಾರ ಮಾಡುವುದು ಸರಿಯಲ್ಲ. ಇಲ್ಲಿನ ಜನತೆ ತಮ್ಮ ಜಾನುವಾರುಗಳನ್ನು ಮೇಯಿಸಲು ತೆರಳಿದಾಗ ಸುಖಾಸುಮ್ಮನೇ ಕೊರೋನಾಕ್ಕೆ ತುತ್ತಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ಅಧಿಕಾರಿಗಳು ಬೇರೆ ಯಾವುದಾದರೂ ಜನವಸತಿಯಿಲ್ಲದ ಪ್ರದೇಶದಲ್ಲಿ ಅದಕ್ಕೆ ವ್ಯವಸ್ಥೆ ಮಾಡಲಿ ಎಂದು ಒತ್ತಾಯಿಸಿದರು.

ರಾಣಿಬೆನ್ನೂರು: ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ, ಮದು ಮಗನ ತಂದೆ-ತಾಯಿ ಕೊರೋನಾಗೆ ಬಲಿ

ಆಗ ಸ್ಥಳಕ್ಕೆ ಬಂದ ಪಿಎಸ್‌ಐ ಮೇಘರಾಜ್‌ ನೇತೃತ್ವದಲ್ಲಿನ ಅಧಿಕಾರಿಗಳ ತಂಡ ತಾಂಡಾ ಜನರ ಮನವೊಲಿಸುವ ಕಾರ್ಯ ಮಾಡಿದರು. ಪೊಲೀಸರ ಮಾತಿಗೂ ಬಗ್ಗದ ಜನರು ಯಾವುದೇ ಕಾರಣಕ್ಕೂ ಅವಕಾಶವಿಲ್ಲ ಎಂದು ಪಟ್ಟು ಹಿಡಿದರು. ಆಗ ತಾಲೂಕು ಆಡಳಿತ ಕೊರೋನಾ ಸೋಂಕಿತ ವ್ಯಕ್ತಿಯ ಶವವನ್ನು ಬೇರೆ ಕಡೆಗೆ ತೆಗೆದುಕೊಂಡ ಹೋದ ನಂತರದಲ್ಲಿ ನಿವಾಸಿಗಳು ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ರಾಮಣ್ಣ ನಾಯಕ, ಕೃಷ್ಣಮೂರ್ತಿ ಲಮಾಣಿ, ಹಾಲಪ್ಪ ಲಮಾಣಿ, ವಸಂತ ಲಮಾಣಿ, ನೇಮಪ್ಪ ಲಮಾಣಿ, ಡಾಕೇಶ ಗೌಡ್ರ, ಬೀರಪ್ಪ ಲಮಾಣಿ, ಕುಬೇರಪ್ಪ ಚವ್ಹಾಣ, ಓಂಕಾರಪ್ಪ ಲಮಾಣಿ, ದೇವಲಪ್ಪ ಲಮಾಣಿ, ನಾರಾಯಣ ಲಮಾಣಿ, ಲಾಲಪ್ಪ ಲಮಾಣಿ, ರಮೇಶ ಲಮಾಣಿ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

ತಾಂಡಾ ನಿವಾಸಿಗಳು ಶವ ಸಂಸ್ಕಾರಕ್ಕೆ ಅವಕಾಶ ನೀಡದ್ದರಿಂದ ಬೇರೆ ಕಡೆ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಕೋವಿಡ್‌ ಮಾರ್ಗಸೂಚಿಯಂತೆ ಗೌರವಯುತವಾಗಿ ಸಂಸ್ಕಾರ ಮಾಡಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿ ಹೇಳಿದ್ದಾರೆ.