ಗೂಂಡಾವರ್ತನೆ ಆರೋಪ : ಜೆಡಿಎಸ್ ಶಾಸಕರ ರಾಜೀನಾಮೆಗೆ ಹೆಚ್ಚಿದ ಒತ್ತಾಯ
ಶಾಸಕರ ಬೆಂಬಲಿಗರು ಗೂಂಡಾವರ್ತನೆ ಮಾಡಿದ್ದು, ಈ ನಿಟ್ಟಿನಲ್ಲಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜೆಡಿಎಸ್ ಶಾಸಕರೋರ್ವರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗಿದೆ.
ರಾಮನಗರ [ಡಿ.16]: ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯವನ್ನು ಖಂಡಿಸಿ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸಮತಾ ಸೈನಿಕ ದಳದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಭಾನುವಾರ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಕೂಡಲೇ ಮಹೇಶ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀ ನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಂಘಟನೆಯ ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷ ಡಾ.ಜಿ.ಗೋವಿಂದಯ್ಯ ಮಾತನಾಡಿ, ಮೈಸೂರು ಜಿಲ್ಲೆಯ ಸಾಲಿಗ್ರಾಮವೆಂಬಲ್ಲಿ ದಲಿತರ ಕಾಲೋನಿಗೆ ನುಗ್ಗಿ ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ಸಹಚರ ಗುಂಪು ದಲಿತರ ಮೇಲೆ ಗುಂಡಾಗಿರಿ, ದುರ್ವರ್ತನೆ, ದಬ್ಬಾಳಿಕೆ, ಹಾಗೂ ದೌರ್ಜನ್ಯ ವೆಸಗಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತನಿಖೆಗೆ ಆಗ್ರಹ: ಮಾಜಿ ಸಚಿವರ ಸಹೋದರ ಸಾ.ರಾ.ರವೀಶ್ ಹಾಗೂ ಸಹಚರರಿಗೆ ಮಹೇಶ್ ಕುಮ್ಮಕ್ಕು ನೀಡಿರುವ ಕಾರಣ ಈ ಘಟನೆ ಜರುಗಿದೆ. ಸರ್ಕಾರ ಇದರ ಬಗ್ಗೆ ಸಮಗ್ರ ಹಾಗೂ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ನಿರ್ದಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಘಟನೆಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇರ ಹೊಣೆ ಹೊತ್ತು, ಘಟನ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ಈ ಕೂಡಲೇ ಅಮಾನತು ಮಾಡಬೇಕು ಮತ್ತು ಇಲಾಖೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು.
ಜೆಡಿಎಸ್ ಶಾಸಕ ಸಾ ರಾ ಮಹೇಶ್ -ಡಿಕೆಶಿ ನಡುವೆ ರಹಸ್ಯ ಮಾತುಕತೆ...
2019ರಲ್ಲಿ ಸರ್ವೋಚ್ಛ ನ್ಯಾಯಾಲಯ ದಲಿತರ ಮೇಲೆ ದೌರ್ಜನ್ಯ ನಡೆಸಿದ ಆರೋಪಿಗಳನ್ನು ದೂರು ದಾಖಲಾದ ೨೪ ಗಂಟೆಯೊಳಗೆ ಕೋರ್ಟಿಗೆ ಒಪ್ಪಿಸಬೇಕೆಂಬ ನಿರ್ದೇಶನ ನೀಡಿದೆ. ಸಾಲಿಗ್ರಾಮದಲ್ಲಿ ನಡೆದಿರುವ ಘಟನೆಯಲ್ಲಿ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ಈ ಕೂಡಲೇ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೂಡಲೇ ಅಮಾನತು ಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮಾನತುಗೊಳಿಸಿ: ೧೯೮೯ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ಪ್ರಕಾರ ಯಾವುದೇ ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದರೇ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ನೇರ ಹೊಣೆ. ಅದ್ದರಿಂದ ಈ ಕೂಡಲೇ ಸರ್ಕಾರ ಮೈಸೂರು ಎಸ್ಪಿ ಅಮಾನತುಗೊಳಿಸಬೇಕು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಬನಶಂಕರಿ ನಾಗು, ಹಾರೋಹಳ್ಳಿ ಚಂದ್ರು , ರುದ್ರೇಶ್, ಕೋಟೆ ಪ್ರಕಾಶ್, ನರೇಶ್, ಲಕ್ಷ್ಮಣ್ ಪುಟ್ಟಸ್ವಾಮಿ, ಮಹಲಿಂಗ ವಿ.ಎಸ್. ದೊಡ್ಡಿ, ವೆಂಕಟೇಶ್, ಗುರು ಮೂರ್ತಿ ಕನಕಪುರ, ಶಿವರಾಜ್ ಭರಣಿ, ಗೋವಿಂದರಾಜು, ಹೇಮಂತ್ ಬೈರಮಂಗಲ, ಚಕ್ಕೇರೆ ಲೋಕೇಶ್, ಹೋಂಬಾಳಯ್ಯ, ಗುಂಡಾ ದೇವರಹಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.