ಬೆಂಗಳೂರು [ಜ.14]:  ಜಮೀನು ವ್ಯಾಜ್ಯವೊಂದರ ಸಂಬಂಧ ಠಾಣೆಯಲ್ಲಿ ದಾಖಲಿಸಿದ್ದ ದೂರು ಹಿಂಪಡೆಯದ ಮಹಿಳೆಯೊಬ್ಬರ ಮೇಲೆ ದುಷ್ಕರ್ಮಿಗಳ ಗ್ಯಾಂಗ್‌ ಆ್ಯಸಿಡ್‌ ಎರಚಿಸಿರುವ ಘಟನೆ ಕೆ.ಆರ್‌.ಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಆರ್‌.ಪುರದ ಸಿಗೇಹಳ್ಳಿ ನಿವಾಸಿ ಪ್ರಭಾವತಿ (38) ಆ್ಯಸಿಡ್‌ ದಾಳಿಗೆ ಒಳಗಾಗಿದ್ದು, ಕೂದಲೆಳೆ ಅಂತರದಲ್ಲಿ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಿಳೆಯ ಎದೆ ಮತ್ತು ಎಡಗೈಗೆ ಆ್ಯಸಿಡ್‌ ಬಿದ್ದಿದೆ. ಆರೋಪಿಗಳಾದ ರವಿ, ರಘು, ಕಬಾಲನ್‌, ಆಶೀರ್ವಾದಂ, ಮುನಿರೆಡ್ಡಿ, ಸಚಿನ್‌, ರಘು, ಕುಮಾರೇಶನ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಭಾವತಿ ಅವರು ಪತಿ ರಾಧಾಕೃಷ್ಣರೆಡ್ಡಿ ಮತ್ತು ಇಬ್ಬರು ಮಕ್ಕಳ ಜತೆ ಸಿಗೇಹಳ್ಳಿಯಲ್ಲಿ ಸ್ವಂತ ಮನೆಯಲ್ಲಿ ನೆಲೆಸಿದ್ದಾರೆ. ಇದೇ ಗ್ರಾಮದಲ್ಲಿ ಪ್ರಭಾವತಿ ಅವರಿಗೆ ಸೇರಿದ ಒಂದು ಎಕರೆ ಆರು ಗುಂಟೆ ಜಮೀನಿದೆ. ಜಮೀನಿನಲ್ಲಿ ರಾಧಾಕೃಷ್ಣ ಅವರು 20 ಮನೆಗಳನ್ನು ಕಟ್ಟಿದ್ದು, ಬಾಡಿಗೆಗೆ ಕೊಟ್ಟಿದ್ದಾರೆ. ಇನ್ನೂ ಸ್ವಲ್ಪ ಜಾಗ ಹಾಗೆಯೇ ಇದೆ. ಈ ಜಾಲಿ ಜಾಗ ನಮ್ಮದೆಂದು ಅದೇ ಗ್ರಾಮದ ರವಿ, ಕುಮಾರ್‌, ಆಶೀರ್ವಾದಂ, ಶೇಖರ್‌ ರೌಡಿಗಳನ್ನು ಬಿಟ್ಟು 2 ವರ್ಷದ ಹಿಂದೆ ಮನೆಯ ಕೌಂಪೌಂಡ್‌ ಒಡೆದು ಹಾಕಿಸಿ, ಗಲಾಟೆ ಮಾಡಿದ್ದರು.

ಶೀಲ ಶಂಕಿಸಿದ ಪ್ರಿಯತಮ: ಸುಳ್ಳೆಂದು ಪ್ರೂವ್ ಮಾಡಲು ಹೋದ ಪ್ರಿಯತಮೆ...!

ವಿಷಯ ತಿಳಿದ ಸ್ಥಳಕ್ಕೆ ಬಂದ ಅಂದಿನ ಕೆ.ಆರ್‌.ಪುರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌ ಹಾಗೂ ಸಿಬ್ಬಂದಿ ಕೂಡ ರಾಧಾಕೃಷ್ಣ ಅವರ ಕುಟುಂಬದವರಿಗೆ ಅವಾಚ್ಯಶಬ್ದದಿಂದ ನಿಂದಿಸಿ, ಗುಂಡು ಹಾರಿಸಿ ಹತ್ಯೆ ಮಾಡುವುದಾಗಿ ಬೆದರಿಸಿದ್ದರು. ಈ ಸಂಬಂಧ ರಾಧಾಕೃಷ್ಣ ಅವರ ಕುಟುಂಬ ಹಿರಿಯ ಅಧಿಕಾರಿಗಳ ಮೊರೆ ಹೋಗಿ ಆರೋಪಿಗಳು ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌ ಹಾಗೂ ಇತರ ವಿರುದ್ಧ ಕೆ.ಆರ್‌.ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಆರೋಪಿಗಳು ಪ್ರಕರಣ ಹಿಂಪಡೆಯುವಂತೆ ರಾಧಾಕೃಷ್ಣ ಅವರ ಕುಟುಂಬಕ್ಕೆ ಬೆದರಿಕೆ ಒಡ್ಡುತ್ತಿದ್ದರು.

ಜ.7ರಂದು ರಾಧಾಕೃಷ್ಣ ಅವರು ಪತ್ನಿ ಪ್ರಭಾವತಿ ಅವರು ಖಾಲಿಯಿದ್ದ ಮನೆಯನ್ನು ಬಾಡಿಗೆದಾರರಿಗೆ ತೋರಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆರೋಪಿಗಳಾದ ರವಿ, ರಘು ಕಬಲಾನ್‌ ಮತ್ತು ಆಶೀರ್ವಾದಂ ಮತ್ತು ಮುನಿರೆಡ್ಡಿ ಮಹಿಳೆ ನೋಡಿ ಹೀಯಾಳಿಸಿ ನಗುತ್ತಿದ್ದರು. ನಮ್ಮ ವಿರುದ್ಧ ಠಾಣೆಯಲ್ಲಿ ನೀಡಿರುವ ದೂರುಗಳನ್ನು ತೆಗೆದುಕೊಳ್ಳದಿದ್ದರೆ, ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂದು ಆಶೀರ್ವಾದಂ ಮಹಿಳೆಗೆ ಹೆದರಿಸಿದ್ದಾನೆ. ಇದಕ್ಕೆ ಪ್ರಭಾವತಿ ಅವರು ಯಾವುದೇ ಪ್ರತಿಕ್ರಿಯೆ ನೀಡಿದೆ ತೆರಳಿದ್ದಾರೆ. ಆಶೀರ್ವಾದಂ ಸೂಚನೆಯಂತೆ ರವಿ ಮತ್ತು ಕುಮಾರೇಶನ್‌ ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಬಂದು ಮಹಿಳೆ ಮೇಲೆ ಆ್ಯಸಿಡ್‌ ಎರಚಿದ್ದಾರೆ. ತಕ್ಷಣ ಮಹಿಳೆ ಚೀರಾಡಿದ್ದು, ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

ನನ್ನ ಜಮೀನನ್ನು ಮಾರಾಟ ಮಾಡುವಂತೆ ಆರೋಪಿಗಳು ಕಿರುಕುಳ ನೀಡುತ್ತಿದ್ದರು. ನೆರವಿಗೆ ಬರಬೇಕಿದ್ದ ಅಂದಿನ ಸಬ್‌ ಇನ್‌ಸ್ಪೆಕ್ಟರ್‌ ನಮ್ಮ ಮೇಲೆಯೇ ದೌರ್ಜನ್ಯ ಎಸಗಿದ್ದರು. ನಾವು ನೀಡಿರುವ ದೂರಿನಿಂದಾಗಿ ಸಬ್‌ ಇನ್‌ಸ್ಪೆಕ್ಟರ್‌ ಅವರ ಬಡ್ತಿಗೆ ಸಮಸ್ಯೆಯಾಗಿದೆ. ಹೀಗಾಗಿ ಆರೋಪಿಗಳು ನಾವು ನೀಡಿರುವ ಎಲ್ಲ ಪ್ರಕರಣವನ್ನು ಹಿಂಪಡೆಯಬೇಕು ಎಂದು ಈ ರೀತಿ ಕೃತ್ಯ ಎಸಗಿದ್ದಾರೆ. ನಮಗೆ ಸೂಕ್ತ ನ್ಯಾಯ ಬೇಕಿದೆ.

-ರಾಧಾಕೃಷ್ಣರೆಡ್ಡಿ, ಆ್ಯಸಿಡ್‌ ದಾಳಿಗೆ ಒಳಗಾದ ಮಹಿಳೆಯ ಪತಿ