Asianet Suvarna News Asianet Suvarna News

ಆಟೋ ಚಾಲಕರಿಗೂ ಸೂರು ಒದಗಿಸುವ ಭರವಸೆ: ಸಚಿವ ಎಂಟಿಬಿ ನಾಗರಾಜ್‌

ಪ್ರತಿ ದಿನ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಮುಂದಿನ ದಿನಗಳಲ್ಲಿ ಸೂರೊದಗಿಸುವ ಕೆಲಸ ಮಾಡುವುದಾಗಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. 

Promise to provide housing for auto drivers too says minister mtb nagaraj gvd
Author
First Published Dec 2, 2022, 8:05 PM IST

ಹೊಸಕೋಟೆ (ಡಿ.02): ಪ್ರತಿ ದಿನ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಮುಂದಿನ ದಿನಗಳಲ್ಲಿ ಸೂರೊದಗಿಸುವ ಕೆಲಸ ಮಾಡುವುದಾಗಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. 

ನಗರದ ಕೆಇಬಿ ವೃತ್ತದಲ್ಲಿ ಜೈ ಭುವನೇಶ್ವರಿ ಆಟೋ ಚಾಲಕರ ಸಂಘದಿಂದ ಆಯೋಜನೆ ಮಾಡಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಶಂಕರ್‌ ನಾಗ್‌ ಹಾಗೂ ಉಪೇಂದ್ರ ಅವರ ಆಟೋರಾಜ ಸಿನಿಮಾದಿಂದ ಪ್ರೇರೇಪಿತರಾಗಿ ಆಟೋ ಚಾಲಕರು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಾಕಷ್ಟುಸಂಭ್ರಮದಿಂದ ಆಚರಣೆ ಮಾಡುವ ಮೂಲಕ ಕನ್ನಡತನವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದರು

ನನ್ನನ್ನು ಸೋಲಿಸಿಬಿಟ್ಟರು: ಕಣ್ಣೀರಿಟ್ಟ ಸಚಿವ ಎಂಟಿಬಿ ನಾಗರಾಜ್‌

ಆಟೋ ಚಾಲನೆ ಮಾಡುವುದು ಕೂಡ ಸಾಮಾಜಿಕ ಸೇವೆಯ ಒಂದು ಭಾಗವಾಗಿದೆ. ಪ್ರಯಾಣಿಕರಿಂದ ಹಣವನ್ನು ಪಡೆದುಕೊಂಡರು ಕೂಡ ಅವರನ್ನು ಜವಾಬ್ದಾರಿಯುತವಾಗಿ ಅವರ ಸ್ಥಳಕ್ಕೆ ತಲುಪಿಸುವ ಜವಾಬ್ದಾರಿ ಇರುತ್ತದೆ. ಸಾಕಷ್ಟು ಆಟೋ ಚಾಲಕರು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಸುದ್ದಿಯಾಗಿರುವುದು ಶ್ಲಾಘನೀಯ. ಪ್ರಸ್ತುತ ಸನ್ನಿವೇಶದಲ್ಲಿ ಆಟೋ ಚಾಲಕರು ಕೂಡ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಅವರ ನೆರವಿಗೆ ಸರ್ಕಾರ ಕೂಡ ಧಾವಿಸಬೇಕು. ಸರ್ಕಾರ ಅವರನ್ನು ಕೂಡ ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸುವ ಕೆಲಸ ಆಗಬೇಕಿದೆ ಎಂದರು.

ನಗರಸಭೆ ಸದಸ್ಯ ಕೆ.ದೇವರಾಜ್‌ ಮಾತನಾಡಿ ಹಲವಾರು ವರ್ಷಗಳಿಂದ ಸಚಿವ ಎಂಟಿಬಿ ನಾಗರಾಜ್‌ ಅವರು ಆಟೋ ಚಾಲಕರ ಬೆನ್ನಿಗೆ ಬೆನ್ನೆಲುಬಾಗಿ ನಿಂತಿದ್ದು, ಹಲವಾರು ರೀತಿಯಲ್ಲಿ ನೆರವನ್ನು ಒದಗಿಸುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ. ಆದರೆ ಈಗ ಸಾಕಷ್ಟು ಆಟೋ ಚಾಲಕರು ಸ್ವಂತ ಮನೆ ಇಲ್ಲದೆ, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದು, ಶಾಶ್ವತ ಸೂರಿಗೆ ಮನವಿ ಸಲ್ಲಿಸಿದ್ದಾರೆ. ಸಚಿವ ಎಂಟಿಬಿ ಅವರು ಸೂರೊದಗಿಸುವ ಭರವಸೆ ನೀಡಿದ್ದಾರೆ ಎಂದರು.

ಬಿಜೆಪಿಯಲ್ಲೇ ಇರ್ತೇನೆ, ಕಾಂಗ್ರೆಸ್‌ಗೆ ಹೋಗಲ್ಲ: ಸಚಿವ ಎಂಟಿಬಿ ನಾಗರಾಜ್‌

ನಗರಸಭೆ ಅಧ್ಯಕ್ಷ ಡಿ.ಕೆ.ನಾಗರಾಜ್‌, ಸದಸ್ಯರಾದ ಕೆ.ದೇವರಾಜ್‌, ರಾಮಾಂಜಿನಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಎ.ಅಪ್ಸರ್‌, ಟೌನ್‌ ಬ್ಯಾಂಕ್‌ ಅಧ್ಯಕ್ಷ ಬಾಲಚಂದ್ರ, ನಿರ್ದೇಶಕ ಜಿ.ಟಿ.ಕೇಬಲ್‌ ಮೋಹನ್‌ ಸೇರಿದಂತೆ ಜೈ ಭುವನೇಶ್ವರಿ ಆಟೋ ಚಾಲಕರ ಸಂಘದ ಅಧ್ಯಕ್ಷ ಕುಮಾರ್‌ ಸೇರಿದಂತೆ ಪಧಾದಿಕಾರಿಗಳು ಹಾಜರಿದ್ದರು.

Follow Us:
Download App:
  • android
  • ios