Asianet Suvarna News Asianet Suvarna News

ಮಹಿಷ ದಸರಾ ಆಚರಣೆ: ಚಿಕ್ಕಮಗಳೂರಲ್ಲಿ ನಿಷೇದಾಜ್ಞೆ ಜಾರಿ

ನಿಷೇದಾಜ್ಞೆ ಅವಧಿಯಲ್ಲಿ ಘೋಷಣೆಗಳನ್ನು ಕೂಗುವುದು, ಆವೇಶಭರಿತರಾಗಿ ಭಾಷಣ ಮಾಡುವುದು, ಸಂಗೀತ ಕಾರ್ಯಕ್ರಮ ನಡೆಸುವುದನ್ನು ನಿಷೇಧಿಸಲಾಗಿದೆ. ಯಾರಾದರೂ ನಿಷೇದಾಜ್ಞೆ ಉಲ್ಲಂಘನೆ ಮಾಡಿದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್ 

Prohibition Imposed in Chikkamagaluru For Mahisha Dasara Celebration grg
Author
First Published Oct 18, 2023, 11:30 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಅ.18):  ಮಹಿಷ ದಸರಾ ಸಂಬಂಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರ ವಿರೋಧ ಚರ್ಚೆಗಳು ವ್ಯಾಪಕವಾದ ಹಿನ್ನೆಲೆಯಲ್ಲಿ ಹಾಗೂ ಮಹಿಷ ದಸರಾ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮುಂಜಾಗ್ರತ ಕ್ರಮವಾಗಿ ನಾಳೆಯಿಂದ ಅ. 24 ರವರೆಗೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ 6 ದಿನಗಳ ಕಾಲ ನಿಷೇಧಾಜ್ಞೆ ಜಾರಿ : 

ಮೈಸೂರು ಜಿಲ್ಲೆಯ ಬಳಿಕ ಉಡುಪಿ ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಹಿಷ ದಸರಾ ಆಚರಣೆಗೆ ದಲಿತ ಸಂಘಟನೆಗಳು ಸಿದ್ದತೆ ನಡೆಸಿದ್ದವು. ಇದೇ ತಿಂಗಳು 20 ರಂದು ಹಮ್ಮಿಗೊಂಡಿದ್ದ ಮಹಿಷ ದಸರಾಕ್ಕೆ ಕಾಫಿನಾಡಿನಲ್ಲೂ ಭಾರೀ ವಿರೋಧ ವ್ಯಕ್ತವಾಗಿತ್ತು. ಅದರಲ್ಲೂ ಮಹಿಷ ದಸರಾ ಉದ್ಘಾಟನೆಗೆ ಪ್ರೋ ಭಗವಾನ್ ಆಗಮನದ ಬಗ್ಗೆ ಕೆಲ ಸಂಘಟನೆಗಳು ಆಕ್ಷೇಪ ಹೊರಹಾಕಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ 6 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದೆ. ಮಹಿಷ ದಸರಾ ಸಂದರ್ಭದಲ್ಲಿ ಯಾವುದೇ ರೀತಿಯ ಮೆರವಣಿಗೆ, ಪ್ರಚೋದನಾತ್ಮಕ ಭಾಷಣ, ಪೋಸ್ಟರ್, ಫ್ಲೆಕ್ಸ್ ಹಾಕಬಾರದು. ಈ ಸಂದರ್ಭದಲ್ಲಿ ಯಾವುದೇ ಪ್ರತಿಭಟನೆ ನಡೆಸುವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಲಾಗಿದೆ. ನಿಷೇದಾಜ್ಞೆ ಅವಧಿಯಲ್ಲಿ ಘೋಷಣೆಗಳನ್ನು ಕೂಗುವುದು, ಆವೇಶಭರಿತರಾಗಿ ಭಾಷಣ ಮಾಡುವುದು, ಸಂಗೀತ ಕಾರ್ಯಕ್ರಮ ನಡೆಸುವುದನ್ನು ನಿಷೇಧಿಸಲಾಗಿದೆ. ಯಾರಾದರೂ ನಿಷೇದಾಜ್ಞೆ ಉಲ್ಲಂಘನೆ ಮಾಡಿದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಚಿಕ್ಕಮಗಳೂರಲ್ಲಿ ನವರಾತ್ರಿ ಸಂಭ್ರಮ: ಗೊಂಬೆಗಳ ಮೂಲಕ ಪುರಾಣ, ಪುಣ್ಯಕಥೆ ಮೆಲುಕು ಹಾಕುವ ಕಾರ್ಯ

ಮೆರವಣಿಗೆ ರದ್ದು : 

ಅಕ್ಟೋಬರ್ 20ರಂದು ಮಹಿಷ ದಸರಾ ಅಂಗವಾಗಿ ಚಿಕ್ಕಮಗಳೂರು ನಗರದ ಹನುಮಂತಪ್ಪ ಸರ್ಕಲ್ ನಿಂದ ಆಜಾದ್ ಪಾರ್ಕ್ ಸರ್ಕಲ್ ವರೆಗೆ ಮೆರವಣಿಗೆ ನಡೆಸಲು ಮಹಿಷ ದಸರಾ ಆಚರಣಾ ಸಮಿತಿ ಮುಂದಾಗಿತ್ತು. ಜೊತೆಗೆ ಮಹಿಷ ದಸರಾದ ಸಭಾ ಕಾರ್ಯಕ್ರಮವನ್ನು ಚಿಂತಕ ಪ್ರೊ.ಭಗವಾನ್ ನೆರವೇರಿಸಲಿದ್ದರು. ಆದರೆ ನಿಷೇದಾಜ್ಞೆ ಜಾರಿಯಿಂದಾಗಿ ಮಹಿಷ ದಸರಾ ಅಂಗವಾಗಿ ನಡೆಯಬೇಕಿದ್ದ ಮೆರವಣಿಗೆ ರದ್ದಾದಂತಾಗಿದೆ.ಮಹಿಷ ದಸರ ಕಾರ್ಯಕ್ರಮಕ್ಕೆ ಚಿಂತಕ ಪ್ರೊಫೆಸರ್ ಭಗವಾನ್ ಆಗಮಿಸುವುದಕ್ಕೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಪ್ರಮುಖವಾಗಿ ಒಕ್ಕಲಿಗರ ಸಂಘ, ಶ್ರೀರಾಮ ಸೇನೆ ಕಾರ್ಯಕರ್ತರು ಭಗವಾನ್ ಚಿಕ್ಕಮಗಳೂರಿಗೆ ಬಂದಲ್ಲಿ ಅವರಿಗೆ ಮಸಿ ಬಳಿಯುವುದಾಗಿ ಜೊತೆಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಹೀಗಾಗಿ ಭಗವಾನ್ ಚಿಕ್ಕಮಗಳೂರಿಗೆ ಬಾರದಂತೆ ಗಡಿಪಾರು ಮಾಡಬೇಕು ಎಂದು ಡಿಸಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಮಹಿಷ ದಸರಾಗೆ ಭಗವಾನ್ ಬಂದಲ್ಲಿ ಮಸಿಬಳಿಯುವುದಾಗಿ ಕೆಲ ಸಂಘಟನೆಗಳು ಹೇಳಿಕೆ ನೀಡಿದ್ದ ಬೆನ್ನಲ್ಲೇ ದಲಿತ ಸಂಘಟನೆಗಳು ಭಗವಾನ್ ಅವರನ್ನು ಕರೆಯಿಸುತ್ತೇವೆ. ಅವರಿಗೆ ಮಸಿ ಬಳಿಯಲು ಬಂದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಜೊತೆಗೆ ಭಗವಾನ್ ಅವರಿಗೆ ಮಹಿಳಾ ಕಾರ್ಯಕರ್ತರಿಂದ ಮಸಿ ಬಳಿಸುವ ಸಾಧ್ಯತೆಯಿರುವುದರಿಂದ ಭಗವಾನ್ ಅವರಿಗೆ ನಾವು ಮಹಿಳೆಯರಿಂದಲೇ ರಕ್ಷಣೆ ಕೊಡಿಸುತ್ತೇವೆ ಎಂದು ಹೇಳಿದ್ದರು. 

ಈ ಎಲ್ಲ ಘಟನಾವಳಿಗಳನ್ನು ಅವಲೋಕಿಸಿದ ಎಸ್‌ಪಿ ವಿಕ್ರಮ್ ಅಮಟೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂಜಾಗ್ರಾತಾ ಕ್ರಮವಾಗಿ ಅ.19 ರಿಂದ 24ರವರೆಗೆ ನಿಷೇದಾಜ್ಞೆ ಜಾರಿಗೊಳಿಸುವಂತೆ ಡಿಸಿ ಮೀನಾ ನಾಗರಾಜ್ ಅವರಿಗೆ ಶಿಫಾರಸ್ಸು ಮಾಡಿದ್ದರು. ಎಸ್‌ಪಿ ಶಿಫಾರಸ್ಸಿನ ಮೇಲೆ ನಿಷೇದಾಜ್ಞೆ ಜಾರಿಗೊಳಿಸಿ ಡಿಸಿ ಆದೇಶಿಸಿದ್ದಾರೆ.

Follow Us:
Download App:
  • android
  • ios