ದಾವಣಗೆರೆ(ಮೇ.21): ಕಳೆದ 2 ತಿಂಗಳಿಂದಲೂ ಮಹಾಮಾರಿ ಕೊರೋನಾ ವೈರಸ್‌ ಸೋಂಕಿತರಿಗೆ ಚಿಕಿತ್ಸೆ ನೀಡಿ, ಆರೈಕೆ ಮಾಡುತ್ತ ಬಂದ ನಗರದ ಜಿಲ್ಲಾ ಕೋವಿಡ್‌-19 ಆಸ್ಪತ್ರೆಯಲ್ಲಿ ಬುಧವಾರ ಸಂಭ್ರಮ ಮನೆ ಮಾಡಿತ್ತು. ಸೋಂಕಿತರ ಪೈಕಿ ಓರ್ವ ಬಾಲಕ, ಮಹಿಳೆ, ಯುವಕ ಮೂವರೂ ಸೋಂಕಿನಿಂದ ಗುಣಮುಖರಾಗಿದ್ದೇ ಈ ಸಂಭ್ರಮಕ್ಕೆ ಕಾರಣವಾಗಿತ್ತು.

ನಗರದ ಜಿಲ್ಲಾ ಕೋವಿಡ್‌ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೋಂಕಿನಿಂದ ಗುಣಮುಖರಾದ ಮೂವರಿಗೂ ಪುಷ್ಪವೃಷ್ಟಿಸುರಿಸುವ ಮೂಲಕ ಚೆಪ್ಪಾಳೆ ತಟ್ಟಿ, ಹೃತ್ಫೂರ್ವಕವಾಗಿ ಬೀಳ್ಕೊಟ್ಟರು.

ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಮಾತನಾಡಿ, ಇದು 2ನೇ ಕಂತಿನ ಬಿಡುಗಡೆಯಾಗಿದೆ. ಮೊದಲು ಮೂವರು ಗುಣಮುಖರಾಗಿದ್ದರು. ಈಗ ಒಟ್ಟು 7 ಜನರ ಬಿಡುಗಡೆಗೆ ಸರ್ಕಾರ ಅನುಮತಿ ನೀಡಿದೆ. ಉಳಿದವರ ಬಿಡುಗಡೆಗೂ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇಂದು 3 ಜನರಿಗೆ ಬೀಳ್ಕೊಡುತ್ತಿದ್ದು, ಉಳಿದ ನಾಲ್ವರಲ್ಲಿ ಕೋವಿಡ್‌-19 ವೈರಸ್‌ ಅಲ್ಲದೇ, ಹೃದಯ ಇತರೆ ಬೇರೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಿ, ಬೇರೆ ಆಸ್ಪತ್ರೆಗೆ ಸೇರಿಸಲು ಸೂಚಿಸಿದೆ ಎಂದರು.

ವೈದ್ಯರ ಸಲಹೆ ಮೇರೆಗೆ ಇನ್ನು 12 ಜನರ ವರದಿ ನೋಡಿಕೊಂಡು, ಸರ್ಕಾರದ ನಿಯಮದಂತೆ ಬಿಡುಗಡೆ ಮಾಡಲಾಗುವುದು. ಅತ್ಯಂತ ಪರಿಣತಿ ಹೊಂದಿದ ವೈದ್ಯರು, ಸಿಬ್ಬಂದಿ ನಮ್ಮ ಜಿಲ್ಲೆಯಲ್ಲಿದ್ದಾರೆ. ಈ ಎಲ್ಲರ ಪ್ರಯತ್ನ, ಉತ್ಸಾಹ, ಹುಮ್ಮಸ್ಸಿನಿಂದ ಮತ್ತಷ್ಟುಪರಿಣಾಮಕಾರಿ, ಉತ್ತಮವಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ. ಸಾರ್ವಜನಿಕರು ಯಾವುದೇ ಭಯಪಡಬೇಡಿ. ನಮ್ಮ ಸರ್ವೇಕ್ಷಣಾ ತಂಡ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಭರವಸೆ ನೀಡಿದರು.

ಎಪಿ ಸೆಂಟರ್‌ ಭಾಗದ ಸುತ್ತಮುತ್ತಲಿನ ಪ್ರತಿ ಮನೆ ಸದಸ್ಯರ ಸ್ಯಾಂಪಲ್‌ ಸಂಗ್ರಹಿಸಿ, ಪರೀಕ್ಷೆಗೆ ಕಳಿಸಲಾಗುತ್ತಿದೆ. ಸಾಕಷ್ಟುಕೊರೋನಾ ರೋಗಿಗಳನ್ನು ಗುಣಮುಖರಾಗಿಸಿ, ಆಸ್ಪತ್ರೆಯಿಂದ ಶೀಘ್ರವೇ ಬಿಡುಗಡೆಗೊಳಿಸಿ, ಕಳಿಸುತ್ತೇವೆ ಎಂಬ ವಿಶ್ವಾಸವಿದೆ. ಜಿಲ್ಲೆಯಲ್ಲಿ ವೈದ್ಯಕೀಯ ತಂಡ ಸೇರಿದಂತೆ ಪ್ರತಿಯೊಬ್ಬರೂ ಉತ್ತಮವಾಗಿ ಕೆಲಸ ಮಾಡದ್ದಾರೆ. ಮೇಯರ್‌ ನಮಗೆ ಕೈ ಜೋಡಿಸಿ, ಬೆನ್ನೆಲುಬಾಗಿ ನಿಂತಿದ್ದಾರೆ. ಎಲ್ಲರ ಪ್ರಯತ್ನ, ಕೆಲಸ, ಕಾರ್ಯಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಈ ಸಫಲತೆಗೆ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.

ಸೋಂಕಿತರ ಪ್ರಾಥಮಿಕ ಸಂಪರ್ಕದವರ ಹುಡುಕಾಟದಲ್ಲಿ ಜಿಲ್ಲಾಡಳಿತ

ಮೇಯರ್‌ ಬಿ.ಜಿ.ಅಜಯಕುಮಾರ ಮಾತನಾಡಿ, ಇದು ಸಂತೋಷದ ದಿನ, ಕ್ಷಣವಾಗಿದ್ದು, ಶತಕ ಬಾರಿಸಿದ್ದ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುವ ಸಂದೇಶ ಇಂದು ಸಿಕ್ಕಿದೆ. ಜನರು ಮುನ್ನೆಚ್ಚರಿಕೆ ವಹಿಸಿ ಸೋಂಕಿನಿಂದ ದೂರವಿರಬೇಕು. ಮುಂಚೆ ಮೂವರು ಗುಣಮುಖರಾದಾಗ ಜನರು ಅದನ್ನು ಗಮನಿಸಿರಲಿಲ್ಲ. ಈಗ ಓರ್ವ ಬಾಲಕ ಸೇರಿದಂತೆ ಮೂವರು ಗುಣಮುಖರಾಗಿ ಬಿಡುಗಡೆಯಾಗುತ್ತಿದ್ದಾರೆ. ಮಾಧ್ಯಮಗಳ ಮೂಲಕ ಜನರಲ್ಲಿ ಧೈರ್ಯ ತುಂಬಿ, ಧನಾತ್ಮಕ ಸಂದೇಶ ರವಾನಿಸುವ ಕೆಲಸ ಆಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದಿನ ಮೂವರೂ ಸೇರಿದಂತೆ 19 ಜನ ಗುಣಮುಖರಾಗಿದ್ದು, ಆ ಎಲ್ಲರ ಬಿಡುಗಡೆಗೆ ವೈದ್ಯರು ಸೂಚನೆ ನೀಡಿದ್ದಾರೆ. ವೈದ್ಯರು, ಶುಶ್ರೂಷಕರು, ಸಿಬ್ಬಂದಿ ತುಂಬಾ ಶ್ರದ್ಧೆಯಿಂದ ಯಾವುದೇ ಭಯವಿಲ್ಲದೇ ಸೋಂಕಿನಿಂದ ಜನರನ್ನು ರಕ್ಷಣೆ ಮಾಡಿದ್ದಾರೆ. ಈ ಮೂಲಕ ದಾವಣಗೆರೆ ವೈದ್ಯರು ದೊಡ್ಡ ಯಶಸ್ಸು ಸಾಧಿಸುವ ಮೂಲಕ ಶತಕ ದಾಟಿದ್ದ ಕೊರೋನಾ ಸೋಂಕಿನ ಸಂಖ್ಯೆಯನ್ನು ಶೂನ್ಯಕ್ಕೆ ತಂದೇ ತರುತ್ತಾರೆಂಬ ದೃಢವಾದ ವಿಶ್ವಾಸ, ನಂಬಿಕೆ ನನಗಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌, ಜಿಲ್ಲಾ ಕೋವಿಡ್‌-19 ನೋಡಲ್‌ ಅಧಿಕಾರಿ ಪ್ರಮೋದ ನಾಯಕ, ಜಿಲ್ಲಾ ಸರ್ಜನ್‌ ಡಾ.ಸುಭಾಶ್ಚಂದ್ರ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಅರವಳಕೆ ತಜ್ಞ ಡಾ.ರವಿ, ಡಿವೈಎಸ್‌ಪಿ ನಾಗೇಶ ಐತಾಳ್‌, ಡಾ.ವಿಶ್ವನಾಥ ಸೇರಿದಂತೆ ವೈದ್ಯರು, ಶುಶ್ರೂಷಕರು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.