Asianet Suvarna News Asianet Suvarna News

ಸೋಂಕಿತರ ಪ್ರಾಥಮಿಕ ಸಂಪರ್ಕದವರ ಹುಡುಕಾಟದಲ್ಲಿ ಜಿಲ್ಲಾಡಳಿತ

ಕಾಫಿನಾಡಿಗೆ ಪ್ರಥಮ ಬಾರಿಗೆ ಕಾಲಿಟ್ಟಿರುವ ಕೊರೋನಾ ಸೋಂಕಿಗೆ ತುತ್ತಾಗಿರುವುದು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಆಗಿದ್ದರಿಂದ ಅವರಿಂದ ಚಿಕಿತ್ಸೆ ಪಡೆದವರು ಹಾಗೂ ಅವರ ಸಂಪರ್ಕದಲ್ಲಿದ್ದವರಿಗೂ ಸೋಂಕು ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತ ಶತಪ್ರಯತ್ನ ನಡೆಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Chikkamagaluru District administration Searching Corona patients Primary Contacts
Author
Chikkamagaluru, First Published May 21, 2020, 11:10 AM IST

ಮೂಡಿಗೆರೆ(ಮೇ.21): ಮಂಗಳವಾರ ವೈದ್ಯರಿಗೆ ಕೊರೋನಾ ವೈರಸ್‌ ತಗುಲಿರುವುದು ಖಚಿತ ಆಗುತ್ತಿದ್ದಂತೆ ಮಲೆನಾಡಿನ ಹೃದಯ ಭಾಗಕ್ಕೆ ಬರಸಿಡಿಲು ಬಡಿದಂತಾಯಿತು. ಪಟ್ಟಣ ಸಂಪೂರ್ಣ ಸ್ತಬ್ಧವಾಯಿತು, ಬುಧವಾರವೂ ಪಟ್ಟಣದಲ್ಲಿ ಯಾವುದೇ ನಿರ್ಬಂಧ ಇಲ್ಲದಿದ್ದರೂ ಸಂಚಾರ ವಿರಳವಾಗಿತ್ತು.

ಕಾಫಿನಾಡಿಗೆ ಪ್ರಥಮ ಬಾರಿಗೆ ಕಾಲಿಟ್ಟಿರುವ ಕೊರೋನಾ ಸೋಂಕಿಗೆ ತುತ್ತಾಗಿರುವುದು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಆಗಿದ್ದರಿಂದ ಅವರಿಂದ ಚಿಕಿತ್ಸೆ ಪಡೆದವರು ಹಾಗೂ ಅವರ ಸಂಪರ್ಕದಲ್ಲಿದ್ದವರಿಗೂ ಸೋಂಕು ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತ ಶತಪ್ರಯತ್ನ ನಡೆಸಿದೆ.

ಬುಧವಾರ ಬೆಳಗ್ಗೆ 7 ಗಂಟೆಗೆ ಜಿಪಂ ಸಿಇಒ ಪೂವಿತ ಅವರು ಅಧಿಕಾರಿಗಳೊಂದಿಗೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾ.ಪಂ.ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಈಗಾಗಲೇ ಹೊರ ರಾಜ್ಯದಿಂದ ಹಾಗೂ ಹೊರ ಜಿಲ್ಲೆಯಿಂದ ಬಂದಿರುವವರನ್ನು ವಿವಿಧ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರಿಸಿದ ಸ್ಥಳಕ್ಕೂ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ಸೋಂಕಿತ ವೈದ್ಯಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವೈದ್ಯಾಧಿಕಾರಿ ವಾಸವಿರುವ ಪಟ್ಟಣದ ಬಡಾವಣೆಗೆ ಅಗ್ನಿಶಾಮಕ ದಳದ ವಾಹನದಲ್ಲಿ ಸೋಡಿಯಂ ಐಪೋಕ್ಲೋರೈಡ್‌ ರಾಸಾಯನಿಕ ಸಿಂಪಡಿಸಲಾಯಿತು.

ದೇಶದಲ್ಲಿ ಒಂದೇ ದಿನ ಸೋಂಕಿಗೆ 200 ಜನ ಬಲಿ, 5092 ಹೊಸ ಸೋಂಕಿತರು ಪತ್ತೆ

ಸೋಂಕಿತ ವೈದ್ಯಾಧಿಕಾರಿ ಉತ್ತಮ ಚಿಕಿತ್ಸೆ ನೀಡುತ್ತಿದ್ದರೆಂಬ ಕಾರಣಕ್ಕೆ ನಂದಿಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾಲೂಕಿನ ಬಹುತೇಕ ಗ್ರಾಮಗಳ ಜನರು ಸಹಿತ ಬೇಲೂರು ತಾಲೂಕಿನ ಜನರು ಕೂಡ ಬರುತ್ತಿದ್ದರು. ಓಪಿಡಿಯಲ್ಲಿ ನಮೂದಾಗಿದ್ದವರ ಜಾಡು ಹಿಡಿದು ತಾಲೂಕಿನ ಗೋಣಿಬೀಡು, ಚಿನ್ನಿಗ, ಮಾಕೋನಹಳ್ಳಿ, ನಂದಿಪುರ ಗ್ರಾಪಂ ವ್ಯಾಪ್ತಿಯಲ್ಲಿ ಮೈಕ್‌ ಮೂಲಕ ಪ್ರಚಾರ ನಡೆಸಿ ನಂದಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಚಿಕಿತ್ಸೆ ಪಡೆದವರು ಸ್ವಯಂಪ್ರೇರಿತರಾಗಿ ಆರೋಗ್ಯ ತಪಾಸಣೆಗೆ ಬರುವಂತೆ ಮನವಿ ಮಾಡಲಾಯಿತು.

ಸೋಂಕಿತ ವೈದ್ಯಾಧಿಕಾರಿ ನಿವಾಸವಿರುವ ಕಂಟೈನ್‌ಮೆಂಟ್‌ ವಲಯ ಪ್ರದೇಶದಲ್ಲಿ ಸುಮಾರು 60 ಮನೆಗಳಿವೆ. ಅಲ್ಲಿನ ನಿವಾಸಿಗಳು ಮನೆಯಿಂದ ಹೊರಬರಲು ಅವಕಾಶವಿಲ್ಲ. ಅಲ್ಲಿನ ನಿವಾಸಿಗಳಿಗೆ ಬುಧವಾರ ವೈದ್ಯಕೀಯ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಿದರು. ತಾಲೂಕಿನಾದ್ಯಂತ ಭಯದ ವಾತಾವರಣ ಮುಂದುವರಿದಿದೆ. ಪಟ್ಟಣದ ಕಡೆ ಜನ ಸುಳಿಯುತ್ತಿಲ್ಲ. ಪೊಲೀಸ್‌ ಭದ್ರತೆ ಮುಂದುವರಿದಿದೆ. ಅಧಿಕಾರಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಅತ್ತಿತ್ತ ತಿರುಗಾಡುತ್ತ ಮತ್ತೊಂದು ಪಾಸಿಟಿವ್‌ ಪ್ರಕರಣ ಬಾರದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಹೇರ್‌ ಕಟಿಂಗ್‌ ಶಾಪ್‌ಗಳ ಮಾಲೀಕರು 2 ವಾರ ಅಂಗಡಿಗಳ ಬಾಗಿಲು ತೆರೆಯದಿರಲು ನಿರ್ಧರಿಸಿದ್ದಾರೆ.

ಹೊರಜಿಲ್ಲೆಗೆ ಬಸ್‌ ಪಾಸ್‌ ನೀಡದಿರಿ

ಮೂಡಿಗೆರೆ ತಾಲೂಕಿನ ಜನರು ಲಾಕ್‌ಡೌನ್‌ ನಿಯಮವನ್ನು ಅಚ್ಚುಕಟ್ಟಾಗಿ ಪಾಲಿಸಿದ್ದಾರೆ. ಆದರೆ ಸರ್ಕಾರಿ ನೌಕರರಿಂದಲೇ ತಾಲೂಕಿಗೆ ಕೊರೋನಾ ವೈರಸ್‌ ಹರಡುವ ಅಪಾಯ ಹೆಚ್ಚಿದೆ. ಮೂಡಿಗೆರೆ ಬಿಇಒ ಹೇಮಂತರಾಜು ಮತ್ತು ಸಿಬ್ಬಂದಿ ಬಶೀರ್‌ ಎಂಬವರು ಬೆಳಗಾವಿಗೆ ಸರ್ಕಾರಿ ಕೆಲಸಕ್ಕಾಗಿ ತೆರಳಿದ್ದರು. ಇದೇ ಇಲಾಖೆಯ ಟಿಪಿಇಒ ಗಣೇಶಪ್ಪ ಶಿವಮೊಗ್ಗಕ್ಕೆ ತೆರಳಿ 3 ದಿನಗಳ ಕಾಲ ಕುಳಿತು ವಾಪಾಸಾಗಿದ್ದಾರೆ. ಹೀಗೆಯೇ ತಾಲೂಕಿನ ಬಹುತೇಕ ಇಲಾಖೆಯಲ್ಲಿ ಸರಕಾರಿ ನೌಕರರು ಬೇರೆ ಜಿಲ್ಲೆಗೆ ತೆರಳಿ ವಾಪಾಸಾಗಿದ್ದಾರೆ. ತಾಲೂಕಿನ ಎಲ್ಲ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಆರೋಗ್ಯ ತಪಾಸಣೆ ಮಾಡಬೇಕು. ಹೊರ ಜಿಲ್ಲೆ ಪ್ರಯಾಣಕ್ಕೆ ಪಾಸ್‌ ನೀಡಬಾರದು ಎಂದು ಸಾರ್ವಜನಿಕರ ಆಗ್ರಹವಾಗಿದೆ.
 

Follow Us:
Download App:
  • android
  • ios