ಸಮಸ್ಯೆಗಳ ಆಗರವಾದ ಧಾರವಾಡ ಜಿಲ್ಲಾ ಕ್ರೀಡಾಂಗಣ

ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಿತ್ಯ ನೂರಾರು ಮಕ್ಕಳು, ಯುವಕ-ಯುವತಿಯರು ವಿವಿಧ ಆಟಗಳ ತರಬೇತಿ ಪಡೆಯುವ ಹಾಗೂ ದೈಹಿಕ ಕಸರತ್ತು ನಡೆಸುತ್ತಾರೆ| ಕ್ರೀಡಾಂಗಣದಲ್ಲಿ ಪ್ರಮುಖವಾಗಿ ಇರಬೇಕಾದ ಸೌಲಭ್ಯಗಳೇ ಇಲ್ಲದಿರುವುದು ಕ್ರೀಡಾಪಟುಗಳಿಗೆ ಹಾಗೂ ತರಬೇತುದಾರರಿಗೆ ಬೇಸರ ಮೂಡಿಸಿದೆ| ನಿತ್ಯವೂ ಕಾರಿನ ಬೆಳಕಿನಲ್ಲಿಯೇ ಮಕ್ಕಳು ಸ್ಕೇಟಿಂಗ್ ಮಾಡುತ್ತಿದ್ದಾರೆ|  ಕ್ರೀಡಾಂಗಣದ ನಿರ್ವಹಣೆ ಯಾರೂ ಮಾಡದಿರುವ ಕಾರಣ ಕ್ರೀಡಾಪಟುಗಳು ಬೇಸರಗೊಂಡಿದ್ದಾರೆ| 

Problems in Dharwad District Stadium

ಬಸವರಾಜ ಹಿರೇಮಠ 

ಧಾರವಾಡ:(ಸೆ.26) ನಿತ್ಯ ನೂರಾರು ಮಕ್ಕಳು, ಯುವಕ-ಯುವತಿಯರು ವಿವಿಧ ಆಟಗಳ ತರಬೇತಿ ಪಡೆಯುವ ಹಾಗೂ ದೈಹಿಕ ಕಸರತ್ತು ಮಾಡುವ ನಗರದ ಆರ್.ಎನ್. ಶೆಟ್ಟಿ ಹೆಸರಿನ ಜಿಲ್ಲಾ ಕ್ರೀಡಾಂಗಣ ನಿರ್ವಹಣೆ ಇಲ್ಲದೇ ಸೊರಗುತ್ತಿದೆ.

ಶಾಲೆ-ಕಾಲೇಜುಗಳ ಕ್ರೀಡಾಕೂಟ ಸೇರಿದಂತೆ ಸರ್ಕಾರಿ ಇಲಾಖೆಗಳ ಜತೆಗೆ ವಿವಿಧ ಕ್ರೀಡಾ ಸಂಸ್ಥೆಗಳು ಅಥ್ಲೆಟಿಕ್ಸ್, ಹಾಕಿ ಸೇರಿದಂತೆ ಇತರೆ ಆಟಗಳನ್ನು ಇದೇ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತದೆ. ಆದರೆ, ಪ್ರಮುಖವಾಗಿ ಇರಬೇಕಾದ ಸೌಲಭ್ಯಗಳೇ ಇಲ್ಲದಿರುವುದು ಕ್ರೀಡಾಪಟುಗಳಿಗೆ ಹಾಗೂ ತರಬೇತುದಾರರಿಗೆ ಬೇಸರ ಮೂಡಿಸಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜ್ಯ,ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿಯೇ ಸ್ಪರ್ಧೆಗಳು ನಡೆಯುವ ಹಿನ್ನೆಲೆಯಲ್ಲಿ ಐದು ವರ್ಷಗಳ ಹಿಂದಷ್ಟೇ ಅಂದಾಜು 20 ಕೋಟಿ ವೆಚ್ಚದಲ್ಲಿ ಟ್ರ್ಯಾಕ್ ಹಾಕಲಾಗಿತ್ತು. ಪ್ರತಿ ವರ್ಷ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಸೇರಿದಂತೆ ರಾಷ್ಟ್ರೀಯ ದಿನಾಚರಣೆ ಮಾಡುವುದು ಹಾಗೂ ಇತರೆ ಕೆಲಸ-ಕಾರ್ಯಗಳಿಗಾಗಿ ಭಾರೀ ವಾಹನಗಳು ಟ್ರ್ಯಾಕ್ ಮೇಲೆ ಹೋಗಿದ್ದರಿಂದ ಟ್ರ್ಯಾಕ್ ಪದರು ಕಿತ್ತು ಹೋಗುತ್ತಿದೆ. ಒಂದೆಡೆ ಕುಸಿದಿದೆ. ಓಡುವಾಗ ಕ್ರೀಡಾಪಟುಗಳು ಬೀಳುವ ಸಾಧ್ಯತೆಗಳಿದ್ದರೂ ಅದರ ದುರಸ್ತಿ ಕಾರ್ಯ ಮಾತ್ರ ಆಗಿಲ್ಲ. ಕ್ರೀಡಾಂಗಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಹನಿ ನೀರು ಬರುತ್ತಿಲ್ಲ. ಪುರುಷರ ಹಾಗೂ ಮಹಿಳೆಯರ ಶೌಚಾಲಯ ಹೆಸರಿಗೆ ಮಾತ್ರ ಪ್ರತ್ಯೇಕವಿದ್ದು ಬಾಗಿಲುಗಳಿಲ್ಲ. 

ನಿರ್ವಹಣೆ ಇಲ್ಲದೆ ದುರ್ವಾಸನೆ ಬಿರುತ್ತಿವೆ. ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಹೊರತುಪಡಿಸಿ ಹಾಕಿ ಮೈದಾನ ಮಾತ್ರ ಇದೆ. ಸಾಕಷ್ಟು ಜಾಗದ ವ್ಯವಸ್ಥೆ ಇದ್ದರೂ ಸಹ ಬಾಸ್ಕೆಟ್ ಬಾಲ್, ಕುಸ್ತಿ, ಕಬಡ್ಡಿ ಆಟಗಳಿಗೆ ಇಲ್ಲಿ ಜಾಗವೇ ಇಲ್ಲ. ಕ್ರೀಡಾಂಗಣದಲ್ಲಿ ಮರಳು ಮೈದಾನ ಸಿದ್ಧವಾಗಿದ್ದರು ಅಲ್ಲಿ ಮರಳೇ ಇಲ್ಲ. ಕ್ರೀಡಾಂಗಣದ ಬಳಿ ವಾಲಿ ಬಾಲ್ ಹಾಗೂ ಸ್ಕೇಟಿಂಗ್ ಮೈದಾನಗಳು ಈಗ ಆರಂ ಭವಾದರೂ ಅವುಗಳಿಗೆ ಸೌಲಭ್ಯಗಳಿಲ್ಲ. ನಿತ್ಯವೂ ಕಾರಿನ ಬೆಳಕಿನಲ್ಲಿಯೇ ಮಕ್ಕಳು ಸ್ಕೇಟಿಂಗ್ ಮಾಡುತ್ತಿದ್ದಾರೆ. 

ಜವಾಬ್ದಾರಿ ಯಾರದ್ದು: 

ಕ್ರೀಡಾಂಗಣದ ಜವಾಬ್ದಾರಿ ಹೊತ್ತಿರುವ ಯುವ ಜನ ಸೇವಾ ಮತ್ತು ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕರು ಯಾರು ಎಂಬುದೇ ಕ್ರೀಡಾಪಟುಗಳು, ತರಬೇತುದಾರರಿಗೆ ಗೊಂದಲ ಮೂಡಿಸಿದೆ. ಪದೇ ಪದೇ ನಿರ್ದೇಶಕರು ಬದಲಾಗುತ್ತಿದ್ದು ಇದೀಗ ಹಾವೇರಿ ನಿರ್ದೇಶಕರು ಪ್ರಭಾರಿಯಾಗಿದ್ದಾರೆ. 

ಕ್ರೀಡಾಂಗಣದ ನಿರ್ವಹಣೆ ಯಾರೂ ಮಾಡದಿರುವ ಕಾರಣ ಕ್ರೀಡಾಪಟುಗಳು ಬೇಸರಗೊಂಡಿದ್ದಾರೆ. ಪ್ರತಿಯೊಂದು ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಕ್ರೀಡಾಂಗಣ ಸಮಿತಿ ಇರುತ್ತದೆ. ಜಿಪಂ ಸಿಇಒ, ಎಸ್ಪಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು, ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಮೂವರು ನಾಮನಿರ್ದೇಶಿತ ಸದಸ್ಯರು (ಕ್ರೀಡಾಪಟು, ಕ್ರೀಡಾ ಅಸೋಶಿಯೇಶನ್) ಇರುತ್ತಾರೆ. ದುರದುಷ್ಟವಶಾತ್ ಕಳೆದ ಎಂಟು ವರ್ಷಗಳಿಂದ ಈ ಸಮಿತಿಯೇ ರಚನೆಯಾಗಿಲ್ಲ. ಹೀಗಾಗಿ ಕ್ರೀಡಾಂಗಣದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಕೆ. ಎಸ್. ಭೀಮಣ್ಣವರ ಬೇಸರ ವ್ಯಕ್ತಪಡಿಸುತ್ತಾರೆ. 

ಬರುವ ಆದಾಯ ಎಲ್ಲಿ ಹೋಗುತ್ತಿದೆ: 

ಕ್ರೀಡಾಂಗಣದ ನಿರ್ವಹಣೆಗೆ ಸಾಕಷ್ಟು ಅನುದಾನವಿದೆ. ಇದಕ್ಕಿಂತ ಹೆಚ್ಚಾಗಿ ಕ್ರೀಡಾಂಗಣದ ಕಟ್ಟಡದಲ್ಲಿನ ಬಾಡಿಗೆ ಅಂಗಡಿಗಳಿಂದ 7 ಲಕ್ಷ ಆದಾಯವೂ ಇದೆ. ಆದರೆ, ಆ ಹಣ ಏತಕ್ಕಾಗಿ ಬಳಕೆಯಾಗುತ್ತಿದೆ ತಿಳಿಯುತ್ತಿಲ್ಲ. ಕ್ರೀಡಾಗಣದಲ್ಲಿ ನೀರು, ಶೌಚಾಲಯ ಹಾಗೂ ಇತರೆ ಸೌಕರ್ಯಗಳೇ ಇಲ್ಲವಾದರೆ ಇದು ನಿಜಕ್ಕೂ ಬೇಸರದ ಸಂಗತಿ. ಜಿಲ್ಲಾಧಿಕಾರಿ ದೀಪಾ ಚೋಳನ್ ಜಿಲ್ಲಾ ಕ್ರೀಡಾಂಗಣದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದ್ದರೂ ಸಮಸ್ಯೆಗಳಿಗೆ ಪರಿಹಾರ ಏತಕ್ಕೆ ನೀಡುತ್ತಿಲ್ಲ ಎಂಬುದು ತಮಗೂ ತಿಳಿಯುತ್ತಿಲ್ಲ ಎಂದು ಕ್ರೀಡಾಂಗಣ ಸಮಿತಿ ಮಾಜಿ ಸದಸ್ಯ ಪಿ. ಎಚ್. ನೀರಲಕೇರಿ ಪ್ರಶ್ನಿಸುತ್ತಾರೆ. 

ಈ ಬಗ್ಗೆ ಮಾತನಾಡಿದ ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಅವರು, ನಾನು ಸಹ ಕ್ರೀಡಾಂಗಣ ಸಮಿತಿ ಸದಸ್ಯರಾಗಿದ್ದು ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಮಾಹಿತಿ ಇದೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios