ಪ್ರಿಯಾಂಕ ಗಾಂಧಿ ಕರ್ನಾಟಕಕ್ಕೆ ಬರುವುದಿಲ್ಲ
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಪ್ರಿಯಾಂಕ ಗಾಂಧಿ ಬರುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಜಯರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ.
ತುಮಕೂರು (ಅ.09): ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಪ್ರಿಯಾಂಕ ಗಾಂಧಿ ಬರುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಜಯರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕರ್ನಾಟಕದಲ್ಲಿ (Karnataka) ನಡೆಯುವ ಪಾದಯಾತ್ರೆಯಲ್ಲಿ ಪ್ರಿಯಾಂಕ ಗಾಂಧಿ (Priyanka Gandhi) ಬರುತ್ತಿಲ್ಲ ಎಂದು ತಿಳಿಸಿದರು.
ಬಹುತ್ವದ ಉಳಿವಿಗಾಗಿ ಜೋಡೋ ಯಾತ್ರೆಗೆ ಬೆಂಬಲ
ವಿದ್ಯಾರ್ಥಿ ದೆಸೆಯಲ್ಲಿ ಅಧಿಕೃತ ತುರ್ತುಪರಿಸ್ಥಿತಿ ವಿರೋಧಿಸಿದ್ದ ನಾವು ಸೈದ್ಧಾಂತಿಕ ಕಾರಣಗಳಿಗಾಗಿ, ಬಹುತ್ವ ಪರಂಪರೆಯ ಉಳಿವಿಗಾಗಿ, ಸಂವಿಧಾನಾತ್ಮಕ ಮೌಲ್ಯಗಳ ರಕ್ಷಣೆಗಾಗಿ ಭಾರತ್ ಜೋಡೋ ಯಾತ್ರೆ ಬೆಂಬಲಿಸುತ್ತಿರುವುದಾಗಿ ಭಾವೈಕ್ಯ ಕರ್ನಾಟಕ ಸಂಘಟನೆ ಸ್ಪಷ್ಟಪಡಿಸಿದೆ.
ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಾಹಿತಿಗಳು, ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಕಲಾವಿದರು, ವಿಜ್ಞಾನಿಗಳು ಮತ್ತಿತರಿದ್ದ ತಂಡ ಈ ಕುರಿತು ಮಾಹಿತಿ ನೀಡಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3500 ಕಿಲೋಮೀಟರ್ ಉದ್ದದ ಭಾರತ್ ಜೋಡೋ ಪಾದಯಾತ್ರೆ ನಡೆಯುತ್ತಿದ್ದು, ಈ ಯಾತ್ರೆ ಮುನ್ನೆಲೆಗೆ ತಂದಿರುವ ವಿಚಾರಗಳು ದೇಶದ ಹಿತಾಸಕ್ತಿಗೆ ಸಂಬಂಧಿಸಿದ ಗುರುತರವಾದ ಅಂಶಗಳಾಗಿರುವುದರಿಂದ ನಾಡಿನಲ್ಲಿ ಹಲವು ಗಣ್ಯರು, ಸಂಘಟನೆಗಳು, ಸಮಾನ ಮನಸ್ಕರು ಬೆಂಬಲ ಸೂಚಿಸಿದ್ದಾರೆ. ಈ ಉದ್ದೇಶಕ್ಕಾಗಿ ಭಾರತ ಜೋಡಿಸುವ ಯಾತ್ರೆಯೊಂದಿಗೆ ಭಾವೈಕ್ಯ ಕರ್ನಾಟಕ ಎಂಬ ಒಂದು ವೇದಿಕೆ ಕೂಡ ರೂಪ ತಳೆದಿದೆ. ಪಾದಯಾತ್ರೆಯು ಕಳೆದ ಸೆ.30ರಂದು ಗುಂಡ್ಲುಪೇಟೆಯಲ್ಲಿ ಪ್ರವೇಶಿಸಿದ್ದು, ಅ.21ರಂದು ರಾಯಚೂರಿನ ಮೂಲಕ ಆಂಧ್ರಪ್ರದೇಶಕ್ಕೆ ಸಾಗಿ ಹೋಗುತ್ತದೆ.
ನಮ್ಮ ಉನ್ನತ ನಾಗರಿಕತೆಯ ಬಗ್ಗೆ ಹೆಮ್ಮೆಯಿರುವ, ಈ ದೇಶದ ಉಜ್ವಲ ಭವಿಷ್ಯದ ಕುರಿತು ವಿಶ್ವಾಸವಿರುವ ಪ್ರತಿಯೊಬ್ಬ ಭಾರತೀಯರು ಭಾರತ ಒಗ್ಗೂಡಿಸಿ ಯಾತ್ರೆಯನ್ನು ಹಾಗೂ ಇನ್ನಾವುದೇ ಸಂಘಟನೆಗಳು ಕೈಗೊಳ್ಳುವ ಇಂತಹ ಎಲ್ಲ ಪ್ರಯತ್ನಗಳನ್ನು ಬೆಂಬಲಿಸಬೇಕೆಂದು ಮಾಡಿರುವ ಪ್ರಯತ್ನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರುವುದರಿಂದ ಈ ಯಾತ್ರೆಯನ್ನು ಬೆಂಬಲಿಸುತ್ತಿರುವುದಾಗಿ ಭಾವೈಕ್ಯ ಕರ್ನಾಟಕ ಕನ್ನಡಿಗರ ವೇದಿಕೆ ತಿಳಿಸಿದೆ.
ಜಿ.ಬಿ.ಪಾಟೀಲ್ ಮಾತನಾಡಿ, ವಿದೇಶಿಯವರ ಆಳ್ವಿಕೆ ನೋಡಿದ್ದೇವೆ. ಸ್ವಾತಂತ್ರ್ಯ ನಂತರ ಸ್ವದೇಶಿಯವರ ಆಳ್ವಿಕೆಯನ್ನು ನೋಡಿದ್ದೇವೆ. ಆದರೆ ಈಗಿರುವ ಕೆಟ್ಟಪರಿಸ್ಥಿತಿ ಬಂದಿರಲಿಲ್ಲ. ಒಡೆದಿರುವ ಮನಸ್ಸುಗಳನ್ನು ಜೋಡಿಸುವ ಕೆಲಸಕ್ಕೆ ಮುಂದಾಗಿರುವ ಭಾರತ್ ಜೋಡೋ ಯಾತ್ರೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ದೇಶದ ಜೊತೆಗೆ ವಿಶ್ವ ಜೋಡಣೆಯೂ ಆಗಬೇಕು ಎಂದರು.
ಚಿಂತಕ ಕೆ. ದೊರೈರಾಜ್ ಮಾತನಾಡಿ, ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ನಾಡಿಗೆ ಬೆಂಕಿ ಹಚ್ಚಿದ್ದಾರೆ. ದಲಿತರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿವೆ. ಬದುಕುವ ಭರವಸೆಯೇ ಇಲ್ಲದಂತಹ, ವಿಷಮ ಪರಿಸ್ಥಿತಿ ಹೋಗಲಾಡಿಸಲು ದೇಶ ಬೆಸೆಯುವ ಭಾರತ್ ಜೋಡೋ ಯಾತ್ರೆ ಮಾನವೀಯ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ ಎಂಬ ಭರವಸೆಯಿಂದ ಯಾತ್ರೆಯನ್ನು ಬೆಂಬಲಿಸಬೇಕಿದೆ ಎಂದರು.
ವಿಜ್ಞಾನಿ ಡಾ. ಪ್ರಕಾಶ್ ಕಮ್ಮರಡಗಿ ಮಾತನಾಡಿ, ಟೀಕಿಸುವ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಎಲ್ಲ ಸಂವಿಧಾನಬದ್ಧ ಹಕ್ಕುಗಳು ಇಲ್ಲವಾಗುವ ಆತಂಕ ಎದುರಾಗಿದೆ. ದೇಶ ಎಂಬ ಮನೆಗೆ ಬೆಂಕಿ ಬಿದ್ದಿದ್ದು, ಬೆಂಕಿ ಆರಿಸಲು ನಾವೆಲ್ಲರೂ ನೀರು ತಂದು ಸುರಿಯಬೇಕಿದ್ದು, ಈ ಹಿನ್ನೆಲೆಯಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸುತ್ತಿದ್ದೇವೆ ಎಂದರು.
ನಿವೃತ್ತ ಕುಲಪತಿ ಪ್ರೊ. ಜಾಫೆಟ್ ಮಾತನಾಡಿ, ಸಂವಿಧಾನ ವಿರೋಧಿ ಕೆಲಸಗಳಿಗೆ ಕರ್ನಾಟಕ ಪ್ರಯೋಗ ಶಾಲೆಯಾಗಿರುವುದು ಆತಂಕಕಾರಿಯಾಗಿದೆ. ಈಗ ನಾವು ಜಾಗೃತರಾಗಿ ಸಂವಿಧಾನಬದ್ದ ಹಕ್ಕುಗಳನ್ನು ಉಳಿಸಲು ಹೋರಾಡದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಹೀಗಾಗಿ ಭಾರತ್ ಜೋಡೋ ಯಾತ್ರೆ ಬೆಂಬಲಿಸುವುದು ಅನಿವಾರ್ಯವಾಗಿದೆ ಎಂದರು.
ರವೀಂದ್ರ ನಾಯಕ್, ಶ್ರೀಪಾದಭಟ್ ಮಾತನಾಡಿದರು. ಮುಕುಂದರಾಜ್ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಾವ್ಯಾರು ಕಾಂಗ್ರೆಸ್ ಪಕ್ಷದ ಬೆಂಬಲಿಗರಲ್ಲ
ಸಾಹಿತಿ, ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, ಮೂಲತಃ ನಾವ್ಯಾರು ಕಾಂಗ್ರೆಸ್ ಪಕ್ಷದ ಬೆಂಬಲಿಗರಲ್ಲ. ಮೂಲತಃ ಕಾಂಗ್ರೆಸ್ ವಿರೋಧಿಸುತ್ತಲೇ ಬಂದಿರುವ ನಾವು, ತುರ್ತುಪರಿಸ್ಥಿತಿಗಿಂತಲೂ ಭೀಕರವಾಗಿರುವ ಅಘೋಷಿತ ತುರ್ತುಪರಿಸ್ಥಿತಿಯನ್ನು ಇಂದು ದೇಶ ಎದುರಿಸುತ್ತಿರುವುದರಿಂದ ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸುತ್ತಿದ್ದೇವೆ. ಪ್ರಜಾಸತ್ತಾತ್ಮಕ ಮೌಲ್ಯಗಳು ನಾಶವಾಗುತ್ತಿದ್ದು, ನ್ಯಾಯಾಂಗ, ಪತ್ರಿಕಾ ಸ್ವಾತಂತ್ರ್ಯವೂ ಗಂಡಾಂತರ ಸ್ಥಿತಿ ಎದುರಿಸುತ್ತಿದೆ. ಸಂವಿಧಾನ ವಿರೋಧಿ ನಡೆ ರಾರಾಜಿಸುತ್ತಿದ್ದು, ಪ್ರಜಾಪ್ರಭುತ್ವ ನಾಶದ ಹಾದಿಯಲ್ಲಿದೆ. ಇವೆಲ್ಲವುಗಳ ಉಳಿವಿಗಾಗಿ ಭಾರತೀಯರ ಮನಸ್ಸು ಜೋಡಿಸುವ ಪಾದಯಾತ್ರೆ ನಡೆಯುತ್ತಿದ್ದು, ಭಾರತವನ್ನು ಉಳಿಸುವುದು ಎಲ್ಲ ಪ್ರಜ್ಞಾವಂತರ ಕರ್ತವ್ಯವಾಗಿರುವ ಹಿನ್ನೆಲೆಯಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸುತ್ತಿರುವುದಾಗಿ ಹೊನ್ನಾಪುರ ತಿಳಿಸಿದರು.