ಕಲಬುರಗಿ ಜಿಲ್ಲೆಯಲ್ಲಿ 2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಅಧಿಕೃತ ಆದೇಶ ಹೊರಡಿಸಲಾಗಿದೆ. ಪ್ರತಿ ಕ್ವಿಂಟಾಲ್ ತೊಗರಿಗೆ ₹8,000 ದರ ನಿಗದಿಪಡಿಸಲಾಗಿದ್ದು, ರೈತರ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಮತ್ತು ಹಣವನ್ನು ನೇರವಾಗಿ ಡಿಬಿಟಿ ಮೂಲಕ ಪಾವತಿಸಲಾಗುತ್ತದೆ.

ಕಲಬುರಗಿ (ಡಿ.20): ಜಿಲ್ಲೆಯ ಪ್ರಮುಖ ಬೆಳೆಯಾದ ತೊಗರಿಯನ್ನು 2025-26ನೇ ಸಾಲಿನ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ (MSP) ಖರೀದಿಸಲು ಅಧಿಕೃತ ಆದೇಶ ಹೊರಡಿಸಲಾಗಿದೆ. ರೈತರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಈ ಬಾರಿ ಪ್ರತಿ ಕ್ವಿಂಟಾಲ್ ತೊಗರಿಗೆ ₹8,000 ದರವನ್ನು ನಿಗದಿಪಡಿಸಲಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಖರೀದಿಯ ಪ್ರಮಾಣ ಮತ್ತು ನಿಯಮಗಳು

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಹಳೆಯ ಟ್ವಿಟರ್) ಪೋಸ್ಟ್ ಮಾಡಿಕೊಂಡಿರುವ ಅವರು, ಈ ಯೋಜನೆಯಡಿ ಪ್ರತಿ ಎಕರೆಗೆ ಗರಿಷ್ಠ 4 ಕ್ವಿಂಟಾಲ್ ತೊಗರಿಯನ್ನು ಖರೀದಿಸಲು ಅನುಮತಿ ನೀಡಲಾಗಿದೆ. ರೈತರು ಬೆಳೆದ ಜಮೀನಿನ ವಿಸ್ತೀರ್ಣವನ್ನು ಫ್ರೂಟ್ಸ್ (FRUITS) ತಂತ್ರಾಂಶದಲ್ಲಿ ಲಭ್ಯವಿರುವ ದತ್ತಾಂಶಕ್ಕೆ ಅನುಗುಣವಾಗಿ ಪರಿಗಣಿಸಲಾಗುತ್ತದೆ. ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯನ್ನು ಖರೀದಿ ಸಂಸ್ಥೆಗಳಾಗಿ ನೇಮಿಸಿದೆ.

ನೋಂದಣಿ ಪ್ರಕ್ರಿಯೆ

ಜಿಲ್ಲೆಯ ಒಟ್ಟು 141 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (PACS) ಮತ್ತು ರೈತ ಉತ್ಪಾದಕ ಸಂಸ್ಥೆಗಳ (FPO) ಮೂಲಕ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ರೈತರ ನೋಂದಣಿ ಮತ್ತು ಖರೀದಿ ಸಂದರ್ಭದಲ್ಲಿ ಪಿ.ಒ.ಎಸ್ (POS) ಯಂತ್ರಗಳಲ್ಲಿ ಬಯೋ ಮೆಟ್ರಿಕ್ (UIDAI Biometric) ನೀಡುವುದು ಕಡ್ಡಾಯವಾಗಿದೆ. ನೋಂದಣಿ ಕಾರ್ಯವು ಈಗಾಗಲೇ ಆರಂಭವಾಗಿದ್ದು, ಮಾರ್ಚ್ 06, 2026 ರವರೆಗೆ ಅವಕಾಶವಿರುತ್ತದೆ.

ನೇರ ಹಣ ಪಾವತಿ

ರೈತರು ಮಾರಾಟ ಮಾಡಿದ ತೊಗರಿಗೆ ಡಿ.ಬಿ.ಟಿ (DBT) ಪೋರ್ಟಲ್ ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸಲಾಗುವುದು. ಒಂದು ವೇಳೆ ಮಾರುಕಟ್ಟೆ ಧಾರಣೆಯು ಬೆಂಬಲ ಬೆಲೆಗಿಂತ ಹೆಚ್ಚಿದ್ದರೆ, ನಾಫೆಡ್ (NAFED) ಸಂಸ್ಥೆಯು ಹೆಚ್ಚಿನ ದರದಲ್ಲಿ ಖರೀದಿಸಲಿದೆ ಎಂದು ತಿಳಿಸಲಾಗಿದೆ. ರೈತರು ತಮ್ಮ ಸಮೀಪದ PACS, FPO ಅಥವಾ ಎಪಿಎಂಸಿ (APMC) ಮಾರುಕಟ್ಟೆಗಳಲ್ಲಿರುವ ಕೇಂದ್ರಗಳಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

KSCMF ಕಲಬುರಗಿ: 9449864446

KSPAML ಕಲಬುರಗಿ: 9964474444

Scroll to load tweet…