ಚಿಕ್ಕೋಡಿ(ಮಾ.13): ಶಾಲೆಯ ಶುಲ್ಕ ಕಟ್ಟದ ಹಿನ್ನೆಲೆಯಲ್ಲಿ 20ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಪರೀಕ್ಷಾ ಹಾಲ್‌ನಿಂದ ಹೊರಗೆ ಕಳುಹಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಖಾಸಗಿ ಶಾಲೆಯಲ್ಲಿ ಗುರುವಾರ ನಡೆದಿದೆ. ನಂತರ ಡಿಡಿಪಿಐ ಅವರ ಎಚ್ಚರಿಕೆ ಹಿನ್ನೆಲೆಯಲ್ಲಿ ತನ್ನ ತಪ್ಪನ್ನು ತಿದ್ದಿಕೊಂಡ ಶಾಲೆಯು ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯಲು ಅನುಮತಿ ನೀಡಿತು. 

ಕರೋನಾ ವೈರಸ್ ರಾಜ್ಯಕ್ಕೂ ವಾಪಿಸಿದ ಹಿನ್ನೆಲೆಯಲ್ಲಿ ನಿಗದಿತ ಅವಧಿಗಿಂತ ಮೊದಲೇ ಏಕಾಏಕಿ ಪರೀಕ್ಷೆ ನಡೆಸುವಂತೆ ಶಿಕ್ಷಣ ಇಲಾಖೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಚಿಕ್ಕೋಡಿಯ ಸೇಂಟ್ ಫ್ರಾನ್ಸಿಸ್ ಶಾಲೆ ಕೂಡ ವಾರ್ಷಿಕ ಪರೀಕ್ಷೆ ಆರಂಭಿಸಿತ್ತು. ಆದರೆ, ಶಾಲಾ ಶುಲ್ಕ ಕಟ್ಟದ ಸುಮಾರು 20ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಪರೀಕ್ಷಾ ಹಾಲ್‌ನಿಂದ ಹೊರಗೆ ಹಾಕಿತು. ನಂತರ ಈ ವಿಚಾರ ಡಿಡಿಪಿಐ ಅವರ ಗಮನಕ್ಕೆ ಬಂದಿದ್ದರಿಂದ ತಕ್ಷಣ ಎಚ್ಚೆತ್ತುಕೊಂಡ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿ ತಕ್ಷಣ ಸರಿಪಡಿಸುವಂತೆ ತಿಳಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದರಂತೆ ಶಾಲೆಯ ಆಡಳಿತ ಮಂಡಳಿಗೆ ಬಿಇಒ ಅವರು ತಪ್ಪು ತಿದ್ದಿಕೊಳ್ಳುವಂತೆ ಸೂಚನೆ ನೀಡಿದರು. ತದನಂತರ ಶಾಲೆಯ ಆಡಳಿತ ಮಂಡಳಿಯವರು ಮಕ್ಕಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿದರು. ಈ ಮೊದಲು ಏಪ್ರಿಲ್ ಮೊದಲ ವಾರದಲ್ಲಿ ವಾರ್ಷಿಕ ಪರೀಕ್ಷೆ ಎಂದು ಹೇಳಲಾಗಿತ್ತು. ನಂತರ ಮಾ.17ರಿಂದ ಎಂದು ಹೇಳಲಾಗಿಯಿತು. ಇದೀಗ ಗುರುವಾರ ಧಿಡೀರನೇ ಪರೀಕ್ಷೆ ಇಡಲಾಗಿದೆ. ಹೀಗಾಗಿ ಪರೀಕ್ಷೆ ಬರೆಯಲು ಬಂದ 20 ಕ್ಕೂ ಹೆಚ್ಚು ವಿದ್ಯಾ ರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಅವಕಾಶ ನೀಡಲಿಲ್ಲ. ಹೀಗಾಗಿ ಮಂಡಳಿಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಅವರು, ಶಾಲಾ ಮಂಡಳಿ ಶುಲ್ಕ ಕಟ್ಟದ ಮಕ್ಕಳನ್ನು ಪರೀಕ್ಷಾ ಹಾಲ್‌ನಿಂದ ಹೊರಗಿಟ್ಟ ಘಟನೆ ಗಮನಕ್ಕೆ ಬಂದಿದೆ. ನಂತರ ಈ ಕುರಿತು ಮಂಡಳಿಗೆ ಈ ರೀತಿ ಮಾಡದಂತೆ ಸೂಚನೆ ನೀಡಲಾಯಿತು. ನಂತರ ಅವರು ಮಕ್ಕಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿದ್ದಾರೆ. ಯಾವುದೇ ಶಾಲೆಗಳು ಮಕ್ಕಳ ವಿರುದ್ಧ ಈ ರೀತಿಯ ವರ್ತನೆ ತೋರಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.